ಟಿಬಿ ಡ್ಯಾಂಗೆ ಗೇಟ್‌ ಅಳವಡಿಕೆ ಇಂದು ಶುರು: ಸಿಎಂ ಸಿದ್ದರಾಮಯ್ಯ

ಗೇಟ್‌ ನಂಬರ್‌ 19ರ ಸರಪಳಿ ತುಂಡರಿಸಿ ಕಳಚಿ ಬಿದ್ದಿರುವ ಸ್ಥಳವನ್ನು ವೀಕ್ಷಣೆ ಮಾಡಿದರು. ನೀರಾವರಿ ಅಧಿಕಾರಿಗಳಿಂದ ಘಟನೆ ಬಗ್ಗೆ ವಿವರಣೆ ಪಡೆದರು. ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಜೊತೆ ಸುಮಾರು 15 ನಿಮಿಷಗಳ ಕಾಲ ಡ್ಯಾಂನ ಸುರಕ್ಷತೆ, ನಿರ್ವಹಣೆ ಕುರಿತು ಚರ್ಚೆ ನಡೆಸಿದರು. ಆಂಧ್ರದ ನೀರಾವರಿ ಸಚಿವರು, ಅಚ್ಚುಕಟ್ಟು ಪ್ರದೇಶವ್ಯಾಪ್ತಿಯ ರೈತ ಮುಖಂಡರ ಜೊತೆಗೂ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

TB Dam gate installation will start from august 14th says cm Siddaramaiah grg

ಹೊಸಪೇಟೆ/ಕೊಪ್ಪಳ(ಆ.14): ಚೈನ್‌ ಲಿಂಕ್‌ ಕಟ್ಟಾಗಿ ಕೆಳಕ್ಕೆ ಬಿದ್ದಿರುವ ತುಂಗಭದ್ರಾ ಅಣೆಕಟ್ಟಿನ ಗೇಟ್‌ ನಂ.19ಕ್ಕೆ ತಾತ್ಕಾಲಿಕ ಗೇಟ್‌ ಅಳವಡಿಕೆ ಕಾರ್ಯ ಬುಧವಾರದಿಂದಲೇ ಆರಂಭವಾಗಲಿದೆ. ಈಗಾಗಲೇ ಸಂಬಂಧಿಸಿದ ತಜ್ಞರ ಜೊತೆಗೆ ಚರ್ಚೆ ನಡೆಸಿದ್ದು, ಸೂಕ್ತ ಸಲಹೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ, ಜಲಾಶಯದಲ್ಲಿ 64 ಟಿಎಂಸಿಯಷ್ಟು ನೀರನ್ನು ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದ್ದು, ರೈತರ ಒಂದು ಬೆಳೆಗೆ ನೀರನ್ನು ಕೊಟ್ಟೇ ಕೊಡುತ್ತೇವೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.

ಮಂಗಳವಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಿಎಂ, ಗೇಟ್‌ ನಂಬರ್‌ 19ರ ಸರಪಳಿ ತುಂಡರಿಸಿ ಕಳಚಿ ಬಿದ್ದಿರುವ ಸ್ಥಳವನ್ನು ವೀಕ್ಷಣೆ ಮಾಡಿದರು. ನೀರಾವರಿ ಅಧಿಕಾರಿಗಳಿಂದ ಘಟನೆ ಬಗ್ಗೆ ವಿವರಣೆ ಪಡೆದರು. ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಜೊತೆ ಸುಮಾರು 15 ನಿಮಿಷಗಳ ಕಾಲ ಡ್ಯಾಂನ ಸುರಕ್ಷತೆ, ನಿರ್ವಹಣೆ ಕುರಿತು ಚರ್ಚೆ ನಡೆಸಿದರು. ಆಂಧ್ರದ ನೀರಾವರಿ ಸಚಿವರು, ಅಚ್ಚುಕಟ್ಟು ಪ್ರದೇಶವ್ಯಾಪ್ತಿಯ ರೈತ ಮುಖಂಡರ ಜೊತೆಗೂ ಸಮಾಲೋಚನೆ ನಡೆಸಿದರು.

ಟಿಬಿ ಡ್ಯಾಂ ದುರಂತ ಬಳಿಕ ಹೈ ಅಲರ್ಟ್‌, ಬಸವಸಾಗರ ಜಲಾಶಯದಲ್ಲಿ 2006ರ ದುರ್ಘಟನೆ ಮರುಕಳಿಸದಂತೆ ಎಚ್ಚರಿಕೆ!

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಪೈಕಿ 19ನೇ ಗೇಟ್‌ ಕಳಚಿ ಬಿದ್ದಿದೆ. ಈಗಾಗಲೇ ಜಲಾಶಯ ಗೇಟ್ ಗಳ ನಿರ್ಮಾಣ ತಜ್ಞ ಹಾಗೂ ಸುರಕ್ಷತೆ ತಜ್ಞ ಎಂಜಿನಿಯರ್ ಕನ್ನಯ್ಯ ನಾಯ್ಡು ಜೊತೆ ಚರ್ಚಿಸಿರುವೆ. ಅವರ ಸಲಹೆ ಮೇರೆಗೆ ದುರಸ್ತಿ ಕಾರ್ಯ ನಿರ್ವಹಿಸಲಾಗುತ್ತಿದೆ. ಗೇಟ್‌ನ ದುರಸ್ತಿ ಕಾರ್ಯಕ್ಕೆ ಕನಿಷ್ಟ 4 ರಿಂದ 5 ದಿನಗಳು ಬೇಕಾಗುತ್ತವೆ. ಹಿಂದೂಸ್ತಾನ್ ಎಂಜಿನಿಯರಿಂಗ್ಸ್ ಹಾಗೂ ನಾರಾಯಣ ಎಂಜಿನಿಯರಿಂಗ್ಸ್ ಅವರಿಗೆ ಹೊಸ ಗೇಟ್ ತಯಾರಿ ಹೊಣೆ ವಹಿಸಲಾಗಿದೆ ಎಂದು ತಿಳಿಸಿದರು.

ತುಂಗಭದ್ರಾ ಜಲಾಶಯದ ಸಂಪೂರ್ಣ ನಿರ್ವಹಣೆಯ ಹೊಣೆ ತುಂಗಭದ್ರಾ ಮಂಡಳಿಯದಾಗಿದೆ. ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು, ಕೇಂದ್ರ ಜಲ ಆಯೋಗ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಸದಸ್ಯರು ಮಂಡಳಿಯಲ್ಲಿರುತ್ತಾರೆ. ಸುಮಾರು 70 ವರ್ಷಗಳಷ್ಟು ಹಳೆಯದಾದ ಈ ಡ್ಯಾಂನಲ್ಲಿ ಇಲ್ಲಿವರೆಗೆ ಯಾವುದೇ ಗೇಟ್‌ನ ಚೈನ್ ತುಂಡಾಗಿರಲಿಲ್ಲ. ಇಂತಹ ಘಟನೆ ಇದೇ ಮೊದಲು. ತಜ್ಞರ ಸಲಹೆಯಂತೆ 50 ವರ್ಷಗಳಿಗೊಮ್ಮೆ ಗೇಟ್ ಹಾಗೂ ಸರಪಳಿಗಳನ್ನು ಬದಲಾಯಿಸಬೇಕಾಗಿದ್ದು, ಇನ್ನು ಮುಂದೆ ತಜ್ಞರ ಸಲಹೆಯಂತೆ ತುಂಗಭದ್ರಾ ಮಂಡಳಿ ಹಾಗೂ ಸಂಬಂಧಪಟ್ಟ ಸರ್ಕಾರಗಳು ಕ್ರಮ ಕೈಗೊಳ್ಳಲಿವೆ ಎಂದು ತಿಳಿಸಿದರು.

ಜಲಾಶಯದಲ್ಲಿದ್ದ 105 ಟಿಎಂಸಿ ನೀರಿನಲ್ಲಿ ಈಗ ಗೇಟ್ ದುರಸ್ತಿಗಾಗಿ ನದಿಗೆ ನೀರು ಬಿಡಲಾಗುತ್ತಿದೆ. ಈಗಾಗಲೇ 25 ಟಿಎಂಸಿ ನೀರನ್ನು ರೈತರ ಜಮೀನಿಗೆ ಬಿಡಲಾಗಿದೆ. ಜಲಾಶಯದಲ್ಲಿ 65 ಟಿಎಂಸಿ ನೀರನ್ನು ಉಳಿಸಿಕೊಂಡೇ ದುರಸ್ತಿ ಮಾಡುತ್ತೇವೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಆಗಸ್ಟ್ 17ರಿಂದ ಉತ್ತಮ ಮಳೆಯಾಗಲಿದ್ದು, ಒಂದು ಬೆಳೆಗೆ ಬೇಕಾಗುವ 90 ಟಿಎಂಸಿ ನೀರು ನಮಗೆ ಲಭ್ಯವಾಗುತ್ತದೆ. ಒಂದು ಬೆಳೆಗೆ ನೀರನ್ನು ಕೊಟ್ಟೇ ಕೊಡುತ್ತೇವೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಟಿಬಿ ಡ್ಯಾಂ ನೀರು ಉಳಿಸಿಕೊಳ್ಳುವ ಪ್ರಯತ್ನ, ಗೇಟ್ ಅಯಸ್ಸು 40 ವರ್ಷ, ಜಲಾಶಯದ್ದು 70 ವರ್ಷ: ಆಂಧ್ರ ತಜ್ಞ ಕನ್ನಯ್ಯ

ನವಲಿ ಜಲಾಶಯಕ್ಕೆ ಸಹಮತ ಮುಖ್ಯ:

ಕೊಪ್ಪಳದ ನವಲಿ ಬಳಿ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ15 ಸಾವಿರ ಕೋಟಿ ರು.ಗಳ ಡಿಪಿಆರ್ ತಯಾರಾಗಿದೆ. ಇದು ಅಂತಾರಾಜ್ಯ ಯೋಜನೆಯಾಗಿದ್ದು, ಆಂಧ್ರಪ್ರದೇಶ, ತೆಲಂಗಾಣ ಸಿಎಂ ಜೊತೆ ಚರ್ಚಿಸಿ, ಡಿಪಿಆರ್‌ಗೆ ಒಪ್ಪಿಗೆ ಪಡೆದು, ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಬಾಗಿನ ಅರ್ಪಿಸಲು ನಾನೇ ಬರುವೆ:

ಗೇಟ್‌ನ ದುರಸ್ತಿ ಬಳಿಕ ಉತ್ತಮ ಮಳೆಯಾಗುವ ವಿಶ್ವಾಸವಿದ್ದು, ಜಲಾಶಯ ಖಂಡಿತ ಭರ್ತಿಯಾಗಲಿದೆ. ತುಂಗಭದ್ರಾ ಜಲಾಶಯ ಮತ್ತೆ ತುಂಬುವ ವಿಶ್ವಾಸವಿದ್ದು, ಬಾಗಿನ ಅರ್ಪಿಸಲು ನಾನು ಮತ್ತೊಮ್ಮೆ ಆಗಮಿಸುವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios