ರಾಜ್ಯ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ, ಮೇಲ್ಮನವಿ ವಜಾ ಮಾಡಿ ಈ ಆದೇಶ ಮಾಡಿದೆ.
ಬೆಂಗಳೂರು(ಜೂ.29): ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಶಿಕ್ಷಣ ಸಂಸ್ಥೆಗಳಿಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ವಿನಾಯಿತಿ ಇದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ರಾಜ್ಯ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ, ಮೇಲ್ಮನವಿ ವಜಾ ಮಾಡಿ ಈ ಆದೇಶ ಮಾಡಿದೆ.
2012-13ನೇ ಆರ್ಥಿಕ ವರ್ಷದಲ್ಲಿ ಬೆಂಗಳೂರಿನ ‘ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್’ ಆದಾಯ ತೆರಿಗೆ ರಿಟನ್ಸ್‌ರ್ ಸಲ್ಲಿಸಿ, ತನ್ನ ಆದಾಯ ಶೂನ್ಯ ಎಂದು ತಿಳಿಸಿತ್ತು. ಆ ಬಗ್ಗೆ ಪರಿಶೀಲನೆ ನಡೆಸಿದ ನಂತರ ಹೆಚ್ಚಿನ ವಿವರಣೆ ನೀಡುವಂತೆ ಆದಾಯ ತೆರಿಗೆ ಇಲಾಖೆ ಟ್ರಸ್ಟ್‌ಗೆ ನೋಟಿಸ್ ನೀಡಿತ್ತು. ಟ್ರಸ್ಟ್ ಪರಿಷ್ಕೃತ ರಿಟನ್ಸ್‌ರ್ ಸಲ್ಲಿಸಿ, ಸಾರ್ವಜನಿಕರು ಒಟ್ಟು 27.23 ಕೋಟಿ ರು. ದೇಣಿಗೆಯಾಗಿ ನೀಡಿದ್ದಾರೆ. ಅದು ಇತರೆ ಆದಾಯ ಮೂಲವಾಗಿ ತೋರಿಸಲಾಗಿದೆ. ಜತೆಗೆ, ಈ ಆದಾಯಕ್ಕೆ ತೆರಿಗೆ ಪಾವತಿಯಿಂದ ವಿನಾಯಿತಿ ಇದೆ ಎಂದು ಸ್ಪಷ್ಟೀಕರಣ ನೀಡಿತ್ತು.
ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮ ನೀತಿ ಮರುಪರಿಶೀಲಿಸಿ: ಹೈಕೋರ್ಟ್
ಪ್ರಕರಣವನ್ನು ಮತ್ತೆ ಪರಿಶೀಲನೆ ಮತ್ತು ಮೌಲ್ಯಮಾಪನ ಮಾಡಿದ್ದ ಹೆಚ್ಚುವರಿ ಆದಾಯ ತೆರಿಗೆ (ವಿನಾಯಿತಿ) ಆಯುಕ್ತರು, ಇತರೆ ಆದಾಯ ಸಹ ಟ್ರಸ್ಟ್‌ನ ಆದಾಯವೇ ಆಗಿದೆ ಎಂದು 2015ರಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಆದಾಯ ತೆರಿಗೆ (ಮೇಲ್ಮನವಿ) ಆಯುಕ್ತರು ಎತ್ತಿಹಿಡಿದಿದ್ದರು. ಆದರೆ, ಈ ಆದೇಶವನ್ನು 2018ರ ಏ.6ರಂದು ರದ್ದುಪಡಿಸಿದ್ದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಒಂದು ಶೈಕ್ಷಣಿಕ ಸಂಸ್ಥೆಯಾಗಿದ್ದು, ಆದಾಯ ತೆರಿಗೆ ವಿನಾಯ್ತಿ ಪಡೆಯಲು ಅರ್ಹವಾಗಿದೆ ಎಂದು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಈ ಮೇಲ್ಮನವಿಯನ್ನು ವಜಾಗೊಳಿಸಿರುವ ಹೈಕೋರ್ಟ್, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 12(ಎ) ಅಡಿಯಲ್ಲಿ ನೋಂದಣಿಯಾಗಿದೆ. ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿರುವ ಚಾರಿಟಬಲ್ ಶಿಕ್ಷಣ ಸಂಸ್ಥೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 11 ಮತ್ತು 12 ಅಡಿಯಲ್ಲಿ ತೆರಿಗೆ ಪಾವತಿಯಿಂದ ವಿನಾಯ್ತಿ ಪಡೆದಿರುತ್ತವೆ. ಹಾಗಾಗಿ, ದೇಣಿಗೆ ರೂಪದಲ್ಲಿ ಬರುವ ಎಲ್ಲ ಹಣವನ್ನು ಶಿಕ್ಷಣಕ್ಕೆ ಬಳಸಲಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
