ಒಕ್ಕೂಟ ವ್ಯವಸ್ಥೆ ಮೇಲೆ ಸ್ಟಾಲಿನ್‌ ದಬ್ಬಾಳಿಕೆ: ಸಿಎಂ ಬೊಮ್ಮಾಯಿ ಆಕ್ರೋಶ

*   ಯೋಜನೆ ಕುರಿತ ಸಭೆ ವಿರೋಧಿಸಿದ್ದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ
*  ಸ್ಟಾಲಿನ್‌ ಪತ್ರ ರಾಜಕೀಯ ಸ್ಟಂಟ್‌: ಬೊಮ್ಮಾಯಿ, ಕಾರಜೋಳ ಕಿಡಿ
*  ನಮ್ಮ ಪಾಲಿನ ನೀರನ್ನು ಬಳಸಿಕೊಂಡರೆ ಇವರಿಗೇನು ಸಮಸ್ಯೆ? 
 

Tamil Nadu CM Stalin Tyranny Over the Confederacy Says Basavaraj Bommai grg

ಬೆಂಗಳೂರು(ಜೂ.15):  ಮೇಕೆದಾಟು ಯೋಜನೆ ಕುರಿತು ಕೇಂದ್ರ ಸರ್ಕಾರ ಆಯೋಜಿಸಿರುವ ಜೂ. 17ರ ಸಭೆ ನಡೆಸದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವು ತಮಿಳುನಾಡು ಮುಖ್ಯಮಂತ್ರಿ ಎ.ಕೆ. ಸ್ಟಾಲಿನ್‌ ಧೋರಣೆಯನ್ನು ಕರ್ನಾಟಕ ಕಟುವಾಗಿ ಖಂಡಿಸಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ನಿಲುವುದು ಎಂದು ಟೀಕಿಸಿದೆ.

ಈ ಬಗ್ಗೆ ನಗರದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ‘ತಮಿಳುನಾಡು ಸರ್ಕಾರ ಪತ್ರ ಬರೆಯುವ ಮೂಲಕ ಒಕ್ಕೂಟ ವ್ಯವಸ್ಥೆಯ ಮೇಲೆ ದಬ್ಬಾಳಿಕೆ ನಡೆಸಲು ಪ್ರಯತ್ನಿಸಿದೆ. ಇಂತಹ ನಡವಳಿಕೆ ಒಕ್ಕೂಟ ವ್ಯವಸ್ಥೆಯಲ್ಲಿ ತರವಲ್ಲ’ ಎಂದು ಕಿಡಿ ಕಾರಿದ್ದಾರೆ.

ಮೇಕೆದಾಟು ವಿರುದ್ಧ ಮೋದಿಗೆ ತಮಿಳ್ನಾಡು ಸಿಎಂ ಸ್ಟಾಲಿನ್‌ ಪತ್ರ!

‘ಸ್ಟಾಲಿನ್‌ ನಡವಳಿಕೆಯನ್ನು ರಾಜಕೀಯ ಸ್ಟಂಟ್‌ ಎಂದು ಬಿಂಬಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಮ್ಮ ಪಾಲಿನ ನೀರನ್ನು ಬಳಸಿಕೊಂಡರೆ ಇವರಿಗೇನು ಸಮಸ್ಯೆ? ತಮಿಳುನಾಡು ಸರ್ಕಾರ ಕಾವೇರಿಯ ಪ್ರತಿಯೊಂದು ವಿಷಯದಲ್ಲಿಯೂ ಕ್ಯಾತೆ ತೆಗೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಅವರಿಗೆ ಕಾವೇರಿ ವಿಷಯದಲ್ಲಿ ರಾಜಕಾರಣ ಮಾಡುವುದು ಹುಟ್ಟುಗುಣ. ಕೇಂದ್ರ ಜಲಶಕ್ತಿ ಸಚಿವರು ಸಹ ತಮಿಳುನಾಡಿನ ಆಕ್ಷೇಪಕ್ಕೆ ಕವಡೆ ಕಾಸಿನ ಬೆಲೆ ಕೊಟ್ಟಿಲ್ಲ. ರಾಜ್ಯ ಸರ್ಕಾರ ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ’ ಎಂದು ತಿರುಗೇಟು ನೀಡಿದರು.

‘ತಮಿಳುನಾಡು, ಪಾಂಡಿಚೇರಿ, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತಾರೆ. ಹೀಗಿರುವಾಗ ಸಭೆ ನಡೆಸದಂತೆ ಪತ್ರ ಬರೆದಿರುವುದು ಸರಿಯಲ್ಲ. ಇದಕ್ಕೆ ಕಾನೂನಿನಲ್ಲಿ ಯಾವುದೇ ಬೆಲೆಯೂ ಇಲ್ಲ. ನ್ಯಾಯಾಧಿಕರಣ ಕರ್ನಾಟಕಕ್ಕೆ ನಿಗದಿಪಡಿಸಿರುವ ನೀರನ್ನೇ ಬಳಸಿಕೊಂಡು ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ ಈ ಹಿಂದೆ 15 ಸಭೆಗಳು ನಡೆದಾಗ ತಮಿಳುನಾಡು ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಅಂದು ವಿರೋಧ ವ್ಯಕ್ತಪಡಿಸದೇ ಈಗ ಏಕೆ ತಕರಾರು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.

ಮೋದಿ ಸಮ್ಮುಖದಲ್ಲೇ ಹಿಂದಿ ಹೇರಿಕೆ, ನೀಟ್‌ಗೆ ಮುಖ್ಯಮಂತ್ರಿ ಸ್ಟಾಲಿನ್‌ ಕಿಡಿ

ವಿರೋಧ ಸರಿಯಲ್ಲ:

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ‘ಮೇಕೆದಾಟು ಮತ್ತು ಕಾವೇರಿ ವಿಚಾರದಲ್ಲಿ ತಮಿಳುನಾಡು ಪದೇ ಪದೇ ತಕರಾರು ಮಾಡುತ್ತಿದೆ. 4.5 ಟಿಎಂಸಿ ನೀರನ್ನು ಬೆಂಗಳೂರಿಗೆ ಕುಡಿಯಲು ಬಳಸಿಕೊಳ್ಳಲು ಮೇಕೆದಾಟು ಯೋಜನೆ ಮಾಡಲಾಗುತ್ತಿದೆ. ಅದಕ್ಕೆ ವಿರೋಧ ಮಾಡುವುದು ಸರಿಯಲ್ಲ. ತಮಿಳುನಾಡಿಗೆ ನ್ಯಾಯಾಲಯದ ಆದೇಶದಂತೆ ನೀರನ್ನು ಒದಗಿಸಲಾಗುತ್ತಿದೆ. ಅವರ ಒಂದು ಹನಿ ನೀರನ್ನೂ ನಾವು ಬಳಕೆ ಮಾಡಿಕೊಂಡಿಲ್ಲ’ ಎಂದು ಹೇಳಿದರು.

‘ಜೂ.17ರಂದು ಕೇಂದ್ರದಲ್ಲಿ ಸಭೆ ಆಯೋಜಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸ ಇರುವ ಕಾರಣ ಜೂ. 23 ಕ್ಕೆ ಮುಂದೂಡಿಕೆಯಾಗಬಹುದು. ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಅದು ಏನೇ ಆಗಿದ್ದರೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರದ ಜತೆ ಸಮಾಲೋಚಿಸಲು ಬುಧವಾರದಿಂದ 2 ದಿನಗಳ ಕಾಲ ದೆಹಲಿ ಪ್ರವಾಸ ಹಮ್ಮಿಕೊಂಡಿದ್ದೇನೆ. ನಾಲ್ಕು ಸಚಿವಾಲಯಗಳ ಜತೆಯಲ್ಲಿ ಚರ್ಚಿಸಲು ಸಮಯ ಕೇಳಿದ್ದೇನೆ. ಮೇಕೆದಾಟು, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಚರ್ಚೆ ನಡೆಸಲಾಗುವುದು’ ಎಂದು ತಿಳಿಸಿದರು.
 

Latest Videos
Follow Us:
Download App:
  • android
  • ios