Asianet Suvarna News Asianet Suvarna News

ನೇಣು ಹಾಕಿಕೊಳ್ಳುವುದಾಗಿ ಸವಾಲು ಹಾಕಿದ ಸೋಮಣ್ಣ-ಖಂಡ್ರೆ

ಶಾಸಕ ಕಾಂಗ್ರೆಸ್‌ನ ಈಶ್ವರ್‌ ಖಂಡ್ರೆ ಹಾಗೂ ವಸತಿ ಸಚಿವ ಸೋಮಣ್ಣ ಅವರ ನಡುವೆ ತೀವ್ರ ವಾಗ್ವಾದ ನಡೆದು ಇಬ್ಬರೂ ತಮ್ಮ ಹೇಳಿಕೆ ಸುಳ್ಳಾಗಿದ್ದರೆ ನೇಣು ಹಾಕಿಕೊಳ್ಳುವ ಘೋಷಣೆ  ಮಾಡಿ ಸವಾಲು ಹಾಕಿದ್ದಾರೆ.

Talk War between V somanna Eshwar Khandre snr
Author
Bengaluru, First Published Feb 5, 2021, 9:48 AM IST

ಬೆಂಗಳೂರು (ಫೆ.05):  ಬೀದರ್‌ ಜಿಲ್ಲೆ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ವಿಚಾರವಾಗಿ ಸ್ಥಳೀಯ ಶಾಸಕ ಕಾಂಗ್ರೆಸ್‌ನ ಈಶ್ವರ್‌ ಖಂಡ್ರೆ ಹಾಗೂ ವಸತಿ ಸಚಿವ ಸೋಮಣ್ಣ ಅವರ ನಡುವೆ ತೀವ್ರ ವಾಗ್ವಾದ ನಡೆದು ಇಬ್ಬರೂ ತಮ್ಮ ಹೇಳಿಕೆ ಸುಳ್ಳಾಗಿದ್ದರೆ ನೇಣು ಹಾಕಿಕೊಳ್ಳುವ ಘೋಷಣೆ ಮಾಡುವ ಮಟ್ಟಕ್ಕೆ ಮುಟ್ಟಿತ್ತು.

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರದ ಮೇಲಿನ ಚರ್ಚೆ ವೇಳೆ, ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಯೋಜನೆ ಅರ್ಧಕ್ಕೆ ನಿಂತಿದೆ. ಯೋಜನೆಗೆ ಅರ್ಹರಾದ ಫಲಾನುಭವಿಗಳಿಗೆ ಬೇರೆ ಬೇರೆ ಕಾರಣಕ್ಕೆ ಹಣ ಕೊಡಬಾರದೆಂದು ನಿಲ್ಲಿಸಲಾಗಿದೆ. ಜನರ ಶಾಪ ನಿಮಗೆ ತಟ್ಟುವುದಿಲ್ಲವೇ ಎಂದು ವಸತಿ ಸಚಿವರನ್ನು ಉದ್ದೇಶಿಸಿ ಹೇಳಿದರು.

ಮಂತ್ರಿ ಆದ್ರೂ ಕತ್ತಿ ಹೊಸ ವರಸೆ: ಬಿಎಸ್‌ವೈಗೆ ಮತ್ತೆ ಸಂಕಷ್ಟ .

ಇದರಿಂದ ಸಿಟ್ಟಾದ ಸೋಮಣ್ಣ ಅವರು, ಬೀದರ್‌ಗೆ ಖುದ್ದು ನಾನೇ ಭೇಟಿ ನೀಡಿದ್ದೆ. ಭಾಲ್ಕಿ ಕ್ಷೇತ್ರದಲ್ಲಿ ಅನರ್ಹರಿಗೆ ವಸತಿ ಹಂಚಿಕೆ ಮಾಡಿ ಅವ್ಯವಹಾರ ಮಾಡಲಾಗಿದೆ. ಅಧಿಕಾರಿಗಳು ನೀಡಬೇಕಾದ ಮಂಜೂರಾತಿ ಆದೇಶವನ್ನು ಸ್ಥಳೀಯ ಶಾಸಕರೇ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದ್ದು, ಈಗಾಗಲೇ ಆರು ಜನ ಪಿಡಿಓಗಳನ್ನು ಅಮಾನತು ಮಾಡಲಾಗಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಈಶ್ವರ್‌ ಖಂಡ್ರೆ, ವೈಯಕ್ತಿಕ ದುರುದ್ದೇಶದಿಂದ ವಿರೋಧಿಗಳಿಂದ ದೂರು ಕೊಡಿಸಿ ಭ್ರಷ್ಟಅಧಿಕಾರಿಯನ್ನಿಟ್ಟುಕೊಂಡು ಈ ತನಿಖೆ ನಡೆಸಲಾಗುತ್ತಿದೆ. ವಸತಿ ಯೋಜನೆಗೆ ಅರ್ಹರಾಗಿರುವ ಫಲಾನುಭವಿಗಳು ಮಧ್ಯವರ್ತಿಗಳಿಗೆ ಹಣ ನೀಡಬಾರದೆಂದು ಹೊರಡಿಸಿರುವ ಪ್ರಕಟಣೆಯನ್ನು ಆದೇಶ ಎಂದು ತಪ್ಪು ವರದಿ ನೀಡಲಾಗಿದೆ. ತನಿಖೆ ನೆಪದಲ್ಲಿ ಸುಳ್ಳು ವರದಿ ನೀಡಿ ಮನೆಗಳ ನಿರ್ಮಾಣಕ್ಕೆ ಹಣ ತಡೆಹಿಡಿದಿರುವುದಲ್ಲದೆ ಕೆಲ ಫಲಾನುಭವಿಗಳಿಗೆ ನೀಡಿರುವ ಹಣ ವಾಪಸ್‌ ಪಡೆಯಲು ಸೂಚಿಸಲಾಗಿದೆ. ಇದು ಅನ್ಯಾಯದ ಪರಮಾವಧಿ. ನನ್ನ ವಿರುದ್ಧ ಆರೋಪಗಳ ಬಗ್ಗೆ ಸದನ ಸಮಿತಿಯಿಂದ ತನಿಖೆ ನಡೆಸಲಿ. ಆರೋಪ ಸಾಬೀತಾದರೆ ರಾಜೀನಾಮೆ ನೀಡಲು ಸಿದ್ಧ, ಬೇಕಿದ್ದರೆ ಗಲ್ಲಿಗೇರಿಸಲಿ ಎಂದು ಹೇಳಿದರು.

ಅಲ್ಲದೆ, ಈ ವೇಳೆ ವಸತಿ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ಯೋಜನೆಯಲ್ಲಿ ಗುತ್ತಿಗೆದಾರರಿಗೆ ನೂರಾರು ಕೋಟಿ ರು. ಮುಂಗಡ ಹಣ ಪಾವತಿಗೆ ಸರ್ಕಾರದ ಬಳಿ ಹಣ ಇದೆ. ಇದು ಹೇಗೆ ಸಾಧ್ಯ? ಗುತ್ತಿಗೆದಾರರಿಗೆ ಈ ವಿಶೇಷ ಅನುಕೂಲ ಮಾಡಿಕೊಡಲು ಹಣವಿದೆ. ಫಲಾನುಭವಿಗಳಿಗೆ ನೀಡಲು ಹಣ ಇಲ್ಲವೇ? ಇಲ್ಲಿ ಅಕ್ರಮ ನಡೆದಿಲ್ಲವೇ ಎಂದು ಪ್ರಶ್ನಿಸಿದರು.

ಇದಕ್ಕೆ ಕೆರಳಿದ ಸಚಿವ ಸೋಮಣ್ಣ ಅವರು, ಗುತ್ತಿಗೆದಾರರಿಗೆ ಕಾನೂನಾತ್ಮಕವಾಗಿಯೇ ಶೇ.5ರಷ್ಟುಮುಂಗಡ ಮಾತ್ರ ನೀಡಲಾಗಿದೆ. ಸುಳ್ಳು ಆಪಾದನೆ ಮತ್ತು ಅಪಪ್ರಚಾರ ಸರಿಯಲ್ಲ. ಅನಿರೀಕ್ಷಿತವಾಗಿ ನಾನು ರಾಜಕಾರಣಕ್ಕೆ ಬಂದವರು. ರಾಜಕಾರಣ ನನ್ನ ಉದ್ಯೋಗವಲ್ಲ, ದೋಚುವವನು ನಾನಲ್ಲ. ಟೋಪಿ ಹಾಕಿ ಬಂದವನಲ್ಲ. ಸೋಮಣ್ಣ ತೆರೆದ ಪುಸ್ತಕ. ಸದನ ಸಮಿತಿ ಮಾಡಿ, ಭಾಲ್ಕಿ ತಾಲೂಕಿಗೆ ಹೋಗಿ ತನಿಖೆ ಮಾಡಲಿ. ಭಾಲ್ಕಿಯಲ್ಲಿ ಶೇ.35-40 ಉಳ್ಳವರಿಗೇ ಮನೆ ಕೊಟ್ಟಿದ್ದು ಸಾಬೀತಾದೆ ನಾನು ಈ ಸ್ಥಾನದಿಂದ ಕೆಳಗಿಳಿಯುವೆ. ವಸತಿ ಯೋಜನೆಯಲ್ಲಿ ನನ್ನಿಂದ ತಪ್ಪುಗಳಾಗಿದ್ದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಳ್ಳಲು ಸಿದ್ಧ ಎಂದು ಸವಾಲು ಹಾಕಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಹೀಗೆ ಇಬ್ಬರೂ ತಾವು ಹೇಳಿದ್ದೇ ಸರಿ ಎಂದು ವಾದ, ಪ್ರತಿವಾದ ಮಾಡಿದರೆ ಏನು ಮಾಡುವುದು. ಹೇಗಿದ್ದರೂ ಈ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಸಚಿವರು ಹೇಳಿದ್ದಾರೆ. ತನಿಖೆಯ ವರದಿ ವರದಿ ಬರಲಿ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳೋಣ ಎಂದು ವಿಷಯಕ್ಕೆ ತೆರೆ ಎಳೆದರು.

Follow Us:
Download App:
  • android
  • ios