ಕನ್ನಡ ಮಾತನಾಡಿದ್ದಕ್ಕಾಗಿ ಬೆಳಗಾವಿಯಲ್ಲಿ ವಾಯುವ್ಯ ಕರ್ನಾಟಕ ಬಸ್ ಸಾರಿಗೆ ಸಂಸ್ಥೆ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ನಂತರ ಉಂಟಾಗಿರುವ ಗದ್ದಲದಿಂದಾಗಿ ಎರಡೂ ರಾಜ್ಯಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು (ಫೆ.27): ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಪುಂಡಾಟದಿಂದಾಗಿ ಸ್ಥಗಿತಗೊಂಡಿರುವ ಎರಡೂ ರಾಜ್ಯಗಳ ನಡುವಿನ ಬಸ್ ಸಂಚಾರ ಪುನರಾರಂಭ ಹಾಗೂ ಸೃಷ್ಟಿಯಾಗಿರುವ ಗದ್ದಲದ ನಿವಾರಣೆಗಾಗಿ ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರೊಂದಿಗೆ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನ್ನಡ ಮಾತನಾಡಿದ್ದಕ್ಕಾಗಿ ಬೆಳಗಾವಿಯಲ್ಲಿ ವಾಯುವ್ಯ ಕರ್ನಾಟಕ ಬಸ್ ಸಾರಿಗೆ ಸಂಸ್ಥೆ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ನಂತರ ಉಂಟಾಗಿರುವ ಗದ್ದಲದಿಂದಾಗಿ ಎರಡೂ ರಾಜ್ಯಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಮಹಾರಾಷ್ಟ್ರಕ್ಕೆ ಸೇವೆ ನೀಡಲು ತೆರಳಿದ್ದ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್‌ಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಇದರಿಂದಾಗಿ ಕಳೆದೆರಡು ದಿನಗಳಿಂದ ಎರಡೂ ರಾಜ್ಯಗಳ ನಡುವೆ ಸರ್ಕಾರಿ ಬಸ್ ಸೇವೆ ಸ್ಥಗಿತಗೊಂಡಿದೆ. ಅಲ್ಲದೆ, ಬೆಳಗಾವಿ ಸೇರಿ ಗಡಿ ಭಾಗದಲ್ಲಿ ಗಲಾಟೆ ಹೆಚ್ಚಾಗುವಂತಾಗಿದೆ. ಇದರ ನಿಯಂತ್ರಣಕ್ಕಾಗಿ ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರು ಮಾತುಕತೆ ನಡೆಸಿ ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಸಿಎಂಗೆ ಮಾಹಿತಿ ನೀಡಿದ ಸಚಿವರು: ಬೆಳಗಾವಿ ನಿರ್ವಾಹಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದರು. ಈ ವೇಳೆ ರಾಜ್ಯದಿಂದ 450 ಬಸ್‌ಗಳು ಪ್ರತಿದಿನ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದು, ಅಲ್ಲಿಗೆ ತೆರಳುವ ಬಸ್‌ಗಳಿಗೆ ಮಸಿ ಬಳಿಯುವುದು, ಕಲ್ಲು ಹೊಡೆಯುವ ಕೆಲಸವಾಗುತ್ತಿದೆ. ಅಲ್ಲದೆ, ಕಳೆದೆರಡು ದಿನಗಳಿಂದ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಈ ಸಮಸ್ಯೆ ಬಗೆಹರಿಸಬೇಕಿದೆ ಎಂದು ತಿಳಿಸಿದರು.
ಅದಕ್ಕೆ ಸಿದ್ದರಾಮಯ್ಯ ಅವರು, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಭದ್ರತೆಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜತೆಗೆ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ, ಮಹಾರಾಷ್ಟ್ರದಲ್ಲಿನ ಸಾರಿಗೆ ಬಸ್‌ಗಳ ಸುರಕ್ಷತೆ ಸೇರಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಡಿಜಿ-ಐಜಿ ಅವರೊಂದಿಗೆ ಮಾತುಕತೆ ನಡೆಸುವಂತೆಯೂ ನಿರ್ದೇಶಿಸಿದರು. ಈ ವೇಳೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಉಪಸ್ಥಿತರಿದ್ದರು.
ಕೊಪ್ಪಳ ಶಿಲ್ಪಿಯಿಂದ ಮೂಡಿದ ಅಕ್ಕಿ ಗಾತ್ರದ ಶಿವಲಿಂಗ: ಕೆತ್ತನೆಗೆ ಹಿಡಿಯಿತು ಎರಡೂವರೆ ಗಂಟೆ!
ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಘಟನೆಯ ಪೂರ್ಣ ವಿವರ ನೀಡಿದ್ದೇನೆ. ಸದ್ಯ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರದಲ್ಲಿ ನಮ್ಮ ಬಸ್ ಮತ್ತು ಸಿಬ್ಬಂದಿಗೆ ಮಸಿ ಬಳಿಯಲಾಗುತ್ತಿದೆ. ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳೊಂದಿಗೆ ಮಾತನಾಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
