Asianet Suvarna News Asianet Suvarna News

ಸರ್ಕಾರದ ಕ್ರಮಕ್ಕೆ ಬಿಎಸ್ ವೈ ಬೆಂಬಲ

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಇದೀಗ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ. 

Take Action Against Sugarcane Factories Says BS Yeddyurappa
Author
Bengaluru, First Published Nov 21, 2018, 9:41 AM IST

ಬೆಂಗಳೂರು :  ಬಿಜೆಪಿ ಮುಖಂಡರಿಗೆ ಸೇರಿದ ಕಾರ್ಖಾನೆಗಳೂ ಸೇರಿದಂತೆ ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಸಕ್ಕರೆ ಕಾರ್ಖಾನೆಗಳ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಾರದೇ ಸಕ್ಕರೆ ಕಾರ್ಖಾನೆಗಳಾದರೂ ಪಕ್ಷಾತೀತವಾಗಿ ಕ್ರಮ ಜರುಗಿಸುವ ವಿಚಾರದಲ್ಲಿ ಪ್ರತಿಪಕ್ಷದ ಬೆಂಬಲವಿದೆ ಎಂದು ತಿಳಿಸಿದರು.

ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರಿಗೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕಿತ್ತು ಮತ್ತು ಕಾರ್ಖಾನೆ ಮಾಲಿಕರು ಕೂಡ ರೈತರ ನೆರವಿಗೆ ಮುಂದಾಗಬೇಕಿತ್ತು. ಆ ಎರಡೂ ಕೆಲಸಗಳು ಆಗದಿರುವುದರಿಂದ ಕಾರ್ಖಾನೆ ಮಾಲಿಕರು ಯಾವುದೇ ಪಕ್ಷದವರಾಗಿದ್ದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಕಿ ಉಳಿಸಿಕೊಂಡಿರುವವರ ಪೈಕಿ ಬಿಜೆಪಿಯವರಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಸಾಲ ಮನ್ನಾ ಯೋಜನೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಈವರೆಗೆ ಯಾವೊಬ್ಬ ರೈತನ ಸಾಲ ಮನ್ನಾ ಆಗಿಲ್ಲ. ಸಹಕಾರಿ ಬ್ಯಾಂಕುಗಳಲ್ಲಿ ಪಡೆದ ಸಾಲ ಕೂಡ ಮನ್ನಾ ಆಗಿಲ್ಲ. ಈ ನಡುವೆ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ನೋಟಿಸ್‌ ನೀಡುತ್ತಿವೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದಿದ್ದರೂ ರೈತರ ಸಮಸ್ಯೆ ನಿವಾರಿಸುವಲ್ಲಿ ಮತ್ತು ಬರ ಪರಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹರಿಹಾಯ್ದರು.

ಬೆಳಗಾವಿ ಅಧಿವೇಶನದಲ್ಲಿ ಹೋರಾಟ:  ರಾಜ್ಯ ಸರ್ಕಾರ ಈವರೆಗೆ ಎಷ್ಟುಸಾಲ ಮನ್ನಾ ಮಾಡಿದೆ ಎಂಬುದನ್ನು ಸಹ ಬಹಿರಂಗಪಡಿಸಬೇಕು. ಇದೇ ವಿಷಯವನ್ನಿಟ್ಟುಕೊಂಡು ಬೆಳಗಾವಿ ಅಧಿವೇಶನದಲ್ಲಿ ಸದನದ ಒಳಗೂ ಹೊರಗೂ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಹೊಸ ಸರ್ಕಾರ ಬಂದ ಮೇಲೆ 225 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ 100 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಇದುವರೆಗೂ ಯಾವೊಬ್ಬ ಸಚಿವರು ಕೂಡ ಈ ಜಿಲ್ಲೆಗಳಿಗೆ ಭೇಟಿ ನೀಡುವ ಸೌಹಾರ್ದತೆ ಬೆಳೆಸಿಕೊಂಡಿಲ್ಲ. ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ಕೂಡ ನಡೆಸುತ್ತಿಲ್ಲ. ಸರ್ಕಾರ ಉದಾಸೀನ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಲೇಬೇಕಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿರೋಧ ಪಕ್ಷದ ಉಪ ನಾಯಕ ಗೋವಿಂದ ಕಾರಜೋಳ, ಸಂಸದರಾದ ಪಿ.ಸಿ. ಮೋಹನ್‌, ಶೋಭಾ ಕರಂದ್ಲಾಜೆ, ಶಾಸಕರಾದ ಎಸ್‌.ಆರ್‌. ವಿಶ್ವನಾಥ್‌, ಅಶ್ವತ್‌್ಥ ನಾರಾಯಣ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios