ಬೆಂಗಳೂರು(ಡಿ.03): ಧರ್ಮ-ಧರ್ಮಗಳ ನಡುವೆ ದ್ವೇಷ ಹರಡಿ ಕೋಮುಗಲಭೆ ಎಬ್ಬಿಸಿ ಬೇಳೆ ಬೇಯಿಸಿಕೊಳ್ಳುತ್ತಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುವ ಆಟ ತಿರುಗುಬಾಣವಾಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಕಳ್ಳರ ರಕ್ಷಣಾ ವೇದಿಕೆ ಎಂದಿರುವ ಯತ್ನಾಳ್‌ ಅವರಿಗೆ ತಿರುಗೇಟು ನೀಡಿರುವ ನಾರಾಯಣಗೌಡ, ಜನರ ಕಷ್ಟಗಳ ಬಗ್ಗೆ ಕಾಳಜಿ ವಹಿಸದ ಯತ್ನಾಳ್‌ ಕೇವಲ ಪ್ರಚಾರಕ್ಕಾಗಿ ನಾಲಿಗೆ ಹರಿಬಿಡುವ ಮೂಲಕ ಬಾಯಿ ಹರುಕತನ ಪ್ರದರ್ಶಿಸಿದ್ದಾರೆ. ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ರಕ್ಷಣಾ ವೇದಿಕೆಯನ್ನು ಕಳ್ಳರ ರಕ್ಷಣಾ ವೇದಿಕೆ ಎಂದು ಜರಿದಿದ್ದಾರೆ. ರಾಜ್ಯದಲ್ಲಿರುವ ಲಕ್ಷಾಂತರ ಕರವೇ ಕಾರ್ಯಕರ್ತರು ಸರಿಯಾದ ಸಮಯದಲ್ಲಿ ಯಾರು ಕಳ್ಳರು, ಯಾರು ಸುಳ್ಳರು ಎಂಬುದನ್ನು ರಾಜ್ಯದ ಜನರ ಮುಂದೆ ತೆರೆದಿಡಲಿದ್ದಾರೆ ಎಂದಿದ್ದಾರೆ.

ಇದು ಕರವೇ ಅಲ್ಲ, ಕಳ್ಳರ ವೇದಿಕೆ: ಶಾಸಕ ಕೆಂಡಾಮಂಡಲ

ಇನ್ನು ಕರವೇಯಲ್ಲಿ ಮುಸ್ಲಿಮರು ಇದ್ದಾರೆ ಎಂದಿದ್ದಾರೆ. ಕರವೇಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಜೈನ, ಬೌದ್ಧರಾದಿಯಾಗಿ ಎಲ್ಲ ಧರ್ಮೀಯರೂ ಇದ್ದಾರೆ. ಭಾರತದ ಸಂವಿಧಾನದ 14ನೇ ವಿಧಿ ಎಲ್ಲ ಭಾರತೀಯರೂ ಸಮಾನರೆಂದು ಹೇಳುತ್ತದೆ. ಕರವೇಯಲ್ಲಿ ಎಲ್ಲ ಧರ್ಮದವರೂ ಕನ್ನಡಸೇವೆಯಲ್ಲಿ ತೊಡಗಿದ್ದಾರೆ, ಅದಕ್ಕಾಗಿ ನಾವು ಹೆಮ್ಮೆಪಡುತ್ತೇವೆ. ಕನ್ನಡವೇ ಜಾತಿ, ಧರ್ಮ ಮತ್ತು ದೇವರು ಎಂದು 21 ವರ್ಷಗಳಿಂದ ಕನ್ನಡ ಚಳವಳಿಯನ್ನು ಸಂಘಟಿಸುತ್ತಿದ್ದೇವೆ. ಆದರೆ, ಯತ್ನಾಳ್‌ ಅವರು ಧರ್ಮ-ಧರ್ಮಗಳ ನಡುವೆ ದ್ವೇಷ ಹರಡಿ, ಕೋಮುಗಲಭೆ ಎಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇಂತಹ ಹೀನ ಕೆಲಸವನ್ನು ಕರವೇ ಮಾಡುವುದಿಲ್ಲ. ಧರ್ಮ ಜಗಳದ ಬಳಿಕ ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುವ ಅಪಾಯಕಾರಿ ಆಟವಾಡುತ್ತಿರುವ ಯತ್ನಾಳ್‌ಗೆ ಇದು ತಿರುಗುಬಾಣವಾಗುತ್ತದೆ ಎಂದು ಹೇಳಿದ್ದಾರೆ.