Asianet Suvarna News Asianet Suvarna News

ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಾಮಾರಿ : ಕಟ್ಟೆಚ್ಚರ

ರಾಜ್ಯದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ರೋಗಗಳ ಹಾವಳಿಯೂ ಕೂಡ ಹೆಚ್ಚುತ್ತದೆ. ಇದೀಗ ರಾಜ್ಯದಲ್ಲಿ ಹಂದಿ ಜ್ವರ, ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ. 

Swine Flu Cases Rise In Karnataka
Author
Bengaluru, First Published Oct 9, 2018, 10:30 AM IST

ಬೆಂಗಳೂರು :  ರಾಜ್ಯದಲ್ಲಿ ಹಂದಿ ಜ್ವರ ಪ್ರಕರಣಗಳು (ಎಚ್‌1ಎನ್‌1) ದಿನೇ ದಿನೇ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ. ಜತೆಗೆ, ಹಂದಿ ಜ್ವರ ಪ್ರಕರಣಗಳು ವರದಿಯಾಗುತ್ತಿದ್ದರೂ ಸೋಂಕಿನಿಂದ ಯಾರೊಬ್ಬರೂ ಮೃತಪಟ್ಟಿಲ್ಲ. ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ, ಬದಲಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

ಮಹಾಮಾರಿ ಎಚ್‌1ಎನ್‌1 ರಾಜ್ಯದಲ್ಲಿ ವ್ಯಾಪಕವಾಗಿ ಹರಡಲು ಆರಂಭಿಸಿದ್ದು, ಸೆಪ್ಟಂಬರ್‌ ಮಾಸದಲ್ಲಿ ಮಾತ್ರವೇ ರಾಜ್ಯಾದ್ಯಂತ 204 ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ, ಭಾಲ್ಕಿ ತಾಲ್ಲೂಕಿನಲ್ಲಿ ಇಬ್ಬರು ವ್ಯಕ್ತಿಗಳು ಶಂಕಿತ ಎಚ್‌1ಎನ್‌1 ಕಾಯಿಲೆಯಿಂದ ಮೃತಪಟ್ಟಬಗ್ಗೆ ವರದಿಯಾಗಿದ್ದು, ಆತಂಕ ಮತ್ತಷ್ಟುತೀವ್ರಗೊಂಡಿತ್ತು. ಈ ಬಗ್ಗೆ ಕನ್ನಡಪ್ರಭ ಅ. 4ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸುವುದಾಗಿ ತಿಳಿಸಿರುವ ಆರೋಗ್ಯ ಇಲಾಖೆಯು ಸೋಂಕಿನಿಂದ ಯಾರೂ ಮೃತಪಟ್ಟಿರುವುದು ದೃಢಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.

ಆರೋಗ್ಯ ಇಲಾಖೆ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ 46 ಎಚ್‌1ಎನ್‌1 ಪ್ರಕರಣಗಳು ದೃಢಪಟ್ಟಿವೆ. ಹಂದಿ ಜ್ವರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸೆಪ್ಟೆಂಬರ್‌ 29 ರಂದು ಜ್ವರ ಸಮೀಕ್ಷೆ ನಡೆಸಿ ಆರೋಗ್ಯ ಶಿಕ್ಷಣ ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ. ಜತೆಗೆ ಪ್ರಾದೇಶಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಎಚ್‌1ಎನ್‌1 ಅರಿವು ಮೂಡಿಸಲಾಗಿದೆ. ಶಾಲಾ-ಕಾಲೇಜು, ಅಂಗನವಾಡಿ, ಎಂಎನ್‌ಸಿ ಕಂಪೆನಿಗಳಿಗೆ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಕ್ಷೇತ್ರ ಸಿಬ್ಬಂದಿಯವರು ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಭೇಟಿ ನೀಡಿ ಕರಪತ್ರಗಳನ್ನು ವಿತರಿಸಿ ಆರೋಗ್ಯ ಶಿಕ್ಷಣ ನೀಡುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಕೇಂದ್ರಗಳಲ್ಲಿ ಕಟ್ಟೆಚ್ಚರ:

ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಶಂಕಿತ ಎಚ್‌1ಎನ್‌1 ಪ್ರಕರಣಗಳು ವರದಿಯಾದ ಕೂಡಲೇ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ಮಾಹಿತಿ ನೀಡಲು ಸೂಚಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಣ ಅದಿಕಾರಿಗಳಿಂದ ಪಿಡಿಒಗಳಿಗೆ ಎಚ್‌1ಎನ್‌1 ಪ್ರಕರಣಗಳ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮಾರ್ಗಸೂಚಿ, ವೆಂಟಿಲೇಟರ್‌ ವ್ಯವಸ್ಥೆ ನಮೂನೆ, ದೈನಂದಿನ ವರದಿಯ ನಮೂನೆಯನ್ನು ಕಳುಹಿಸಿದ್ದು, ಎಚ್‌1ಎನ್‌1 ಪ್ರಕರಣಗಳು ದಾಖಲಾದ ಕೂಡಲೇ ದೈನಂದಿನ ವರದಿಯನ್ನು ಪ್ರತಿ ದಿನ ಸಂಜೆ 4 ಗಂಟೆಗೆ ಇ-ಮೇಲ್‌ ಮೂಲಕ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು.

ತಾಲೂಕು ಆರ್‌ಆರ್‌ಟಿ ತಂಡವು ಸಹ ಎಚ್‌1ಎನ್‌1 ಪ್ರಕರಣಗಳ ವರದಿಯಾದ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸಾವು-ನೋವು ಸಂಭವಿಸಿರುವುದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವಾರು ಎಚ್‌1ಎನ್‌1 ಪ್ರಕರಣಗಳ ಮಾಹಿತಿಯನ್ನು ಪಡೆಯಲಾಗುತ್ತಿದೆ. ಜನವರಿಯಿಂದ ಅ.4 ರವರೆಗೆ ಒಟ್ಟು 4,406 ಶಂಕಿತ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, 290 ಪ್ರಕರಣಗಳು ದೃಢಪಟ್ಟಿವೆ. ಅ.4 ರಂದು ಒಟ್ಟು 55 ಶಂಕಿತ ರೋಗಿಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, 14 ಪ್ರಕರಣ ದೃಢಪಟ್ಟಿವೆ. ಇವುಗಳಲ್ಲಿ ಬೆಂಗಳೂರು ಮಣಿಪಾಲ ಆಸ್ಪತ್ರೆಯಲ್ಲಿ 5 ಹಾಗೂ ಕೆಎಂಸಿ ಮಣಿಪಾಲ್‌ (ಉಡುಪಿ) 9 ಪ್ರಕರಣ ದೃಢಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.

ಡೆಂಘಿ, ಚಿಕುನ್‌ಗುನ್ಯಾ ಪತ್ತೆ:

ಇದರ ಜತೆಗೆ ಕಳೆದ ಒಂದು ತಿಂಗಳಿಂದ ಡೆಂಘಿ, ಚಿಕುನ್‌ಗುನ್ಯಾ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಒಂದು ತಿಂಗಳಿಂದ 200 ಡೆಂಘಿ ಪ್ರಕರಣ ಪತ್ತೆ, 267 ಚಿಕುನ್‌ಗುನ್ಯಾ ಪ್ರಕರಣ ಪತ್ತೆಯಾಗಿವೆ. ರಾಜ್ಯದಲ್ಲಿ ಸೆ.1 ಕ್ಕೆ 1579 ರಷ್ಟಿದ್ದ ಚಿಕುನ್‌ಗುನ್ಯಾ ಪ್ರಕರಣ ಅ.1ಕ್ಕೆ 1846ಕ್ಕೆ ಹೆಚ್ಚಾಗಿದೆ. ಡೆಂಘಿ ಪ್ರಕರಣಗಳೂ ಸಹ 200 ಪ್ರಕರಣ ಹೊಸದಾಗಿ ಪತ್ತೆಯಾಗಿದೆ. ಇದು ಗಂಭೀರ ಪ್ರಮಾಣದ ಅಂಕಿ-ಅಂಶ ಅಲ್ಲದಿದ್ದರೂ ಅಗತ್ಯ ಎಚ್ಚರಿಕೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಪ್ರಕರಣಗಳು ವರದಿಯಾದ ಜಾಗದಲ್ಲಿ ಲಾರ್ವಾ ಸಮೀಕ್ಷೆ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಹಾಗೂ ಲಾರ್ವಾ ನಾಶಪಡಿಸಿ ಡೆಂಘಿ, ಚಿಕುನ್‌ಗುನ್ಯಾ ಹರಡುವ ಸೊಳ್ಳೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2009ರಲ್ಲಿ 135 ಜನರ ಸಾವು

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, 2009ರಲ್ಲಿ ಒಂದೇ ವರ್ಷ ರಾಜ್ಯದಲ್ಲಿ 135 ಮಂದಿ ಎಚ್‌1ಎನ್‌1ಗೆ ಬಲಿಯಾಗಿದ್ದರು. 2010ರಲ್ಲಿ 120 ಮಂದಿ, 2011 ರಲ್ಲಿ 16, 2012ರಲ್ಲಿ 48, 2013ರಲ್ಲಿ 19, 2014ರಲ್ಲಿ 34, 2015ರಲ್ಲಿ 94, 2016ರಲ್ಲಿ 0, 2017ರಲ್ಲಿ 15 ಮಂದಿ ಮೃತಪಟ್ಟಿದ್ದರು. ಅದೃಷ್ಟವಶಾತ್‌ ಈ ಬಾರಿ ಎಚ್‌1ಎನ್‌1 ತೀವ್ರತೆ ಕಂಡು ಬಂದರೂ ಯಾವುದೇ ಸಾವು ದೃಢಪಟ್ಟಿಲ್ಲ. ಹೀಗಾಗಿ ಎಚ್‌1ಎನ್‌1 ಬಗ್ಗೆ ಆತಂಕ ಪಡುವುದು ಅಗತ್ಯವಿಲ್ಲ. ಬದಲಿಗೆ ಮುನ್ನೆಚ್ಚರಿಕಾ ಕ್ರಮ ಹಾಗೂ ರೋಗದ ಲಕ್ಷ ಕಂಡು ಬಂದ ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

Follow Us:
Download App:
  • android
  • ios