Asianet Suvarna News Asianet Suvarna News

ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಅಂಗನವಾಡಿಗೆ ಕೊಳೆತ ಮೊಟ್ಟೆ ಸರಬರಾಜು ಮಾಡಿದ ಗುತ್ತಿಗೆದಾರ ಕಪ್ಪುಪಟ್ಟಿಗೆ ಸೇರ್ಪಡೆ

ಕೊಡಗು ಜಿಲ್ಲೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಕಳಪೆ ಗುಣಮಟ್ಟದ ಮೊಟ್ಟೆ ವಿತರಣೆ ಮಾಡಿದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

Suvarna News Impact Blacklisting of contractors who supplied rotten eggs to Anganwadi sat
Author
First Published Jul 13, 2023, 9:55 PM IST

ವರದಿ : ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.13): ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಅಪೌಷ್ಠಿಕತೆ ನೀಗಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಕೊಡುತ್ತಿರುವ ಮೊಟ್ಟೆಗಳು ಕೊಳೆತು ಹೋಗಿರುವುದನ್ನು ವಿಸ್ತೃತವಾಗಿ ಸುವರ್ಣ ನ್ಯೂಸ್ ಬಿತ್ತರ ಮಾಡುತ್ತಿದ್ದಂತೆ ಮೊಟ್ಟೆ ಸರಬರಾಜು ಮಾಡುತ್ತಿದ್ದ ಗುತ್ತಿಗೆದಾರನ ವಿರುದ್ಧ ಕ್ರಮವಾಗಿದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ. 

ಇದು ಕಳಪೆ ಗುಣಮಟ್ಟದ ಮೊಟ್ಟೆ ವಿತರಣೆಗೆ ಸಂಬಂಧಿಸಿದಂತೆ ಸುವರ್ಣ ನ್ಯೂಸ್ ಬಿತ್ತರಿಸಿದ ವರದಿಯ ಫಲಶೃತಿ. ಜೊತೆಗೆ ಕೊಳೆತ ಮೊಟ್ಟೆ ವಿತರಣೆಗೆ ಸಂಬಂಧಿಸಿದಂತೆ ವಿಷಯವನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿಯೂ ತಿಳಿಸಿದ್ದಾರೆ. ಮತ್ತೊಂದೆಡೆ ಕೊಡಗು ಉಸ್ತುವಾರಿ ಸಚಿವ ಬೋಸರಾಜ್ ಅವರು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ. 

ಶಕ್ತಿ ಯೋಜನೆಗೆ ವೀರೇಂದ್ರ ಹೆಗ್ಗಡೆ ಭಾರಿ ಮೆಚ್ಚುಗೆ: ಧರ್ಮಸ್ಥಳಕ್ಕೆ ಸಿದ್ದರಾಮಯ್ಯಗೆ ಆಹ್ವಾನ

ಇಮೇಲ್‌ ಮೂಲಕ ಕಠಿಣ ಕ್ರಮದ ಮಾಹಿತಿ: ಈ ಕುರಿತು ಕೊಡಗಿನ ವರದಿಗಾರನಿಗೂ ಇಮೇಲ್‌ ಕಳುಹಿಸಿರುವ ಉಸ್ತುವಾರಿ ಸಚಿವರ ಕಚೇರಿ ಸಿಬ್ಬಂದಿ ಕಳಪೆ ಗುಣಮಟ್ಟದ ಮೊಟ್ಟೆ ವಿತರಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಅಪೌಷ್ಠಿಕತೆ ನೀಗಿಸಲು ಸರ್ಕಾರವೇನೋ ಒಳ್ಳೆಯ ಯೋಜನೆಯನ್ನು ಜಾರಿಗೆ ತಂದಿದೆ. ಅದಕ್ಕಾಗಿ ಪ್ರತಿ ಗರ್ಭಿಣಿ ಮಾತ್ತು ಬಾಣಂತಿ ಮಹಿಳೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ತಿಂಗಳಿಗೆ 21 ಮೊಟ್ಟೆ ವಿತರಣೆ ಮಾಡುತ್ತಿದೆ. ವಿಪರ್ಯಾಸವೆಂದರೆ ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕಿನ ಹಲವು ಅಂಗನವಾಡಿಗಳಲ್ಲಿ ವಿತರಣೆ ಮಾಡಿರುವ ಬಹುತೇಕ ಮೊಟ್ಟೆಗಳು ಸಂಪೂರ್ಣ ಕಳಪೆಯಾಗಿರುವುದು ಬಟಾಬಯಲಾಗಿದೆ. 

ಕೊಳೆತ ಮೊಟ್ಟೆ ಸೇವಿಸಲಾಗದೇ ಎಸೆದ ಗರ್ಭಿಣಿ: ಸೋಮವಾರ ಕುಶಾಲನಗರ ತಾಲ್ಲೂಕಿನ ಬಸವನತ್ತೂರು ಗ್ರಾಮದ ಅಂಗನವಾಡಿಯಿಂದ ಮಹಿಳೆ ಗೀತಾ ಎಂಬುವರು ಮೊಟ್ಟೆ ಪಡೆದುಕೊಂಡಿದ್ದರು. ಮನೆಗೆ ತಂದು ಮೊಟ್ಟೆ ಬೇಯಿಸಿದಾಗ ಅವುಗಳು ಹಾಳಾಗಿರುವುದು ಗೊತ್ತಾಗಿತ್ತು. ಬಳಿಕ ಒಂದೊಂದೇ ಮೊಟ್ಟೆಯನ್ನು ಹೊಡೆದು ನೋಡಿದಾಗ ಒಳಭಾಗದಲ್ಲಿ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿ, ದುರ್ವಾಸೆ ಬೀರುತ್ತಿದ್ದವು. ಮಹಿಳೆ ಗೀತಾ ಅಧಿಕಾರಿಗಳು, ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದರು. ಇಂತಹ ಮೊಟ್ಟೆಗಳನ್ನು ಕೊಡದಿದ್ದರೆ ಏನಾಗುತ್ತಿತ್ತು. ಇಂತಹ ಮೊಟ್ಟೆಗಳನ್ನು ಮಹಿಳೆಯರು ಮಕ್ಕಳು ತಿಂದರೆ ಅವರ ಆರೋಗ್ಯ ಸ್ಥಿತಿ ಏನಾಗಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. 

ಸುವರ್ಣ ನ್ಯೂಸ್‌ ವರದಿ ಬೆನ್ನಲ್ಲೇ ಅಧಿಕಾರಿಗಳ ಪರಿಶೀಲನೆ: ಈ ಕುರಿತು ಸುವರ್ಣ ನ್ಯೂಸ್ ಗುರುವಾರ ಇಡೀ ದಿನ ಹಲವು ಬಾರಿ ಸುದ್ಧಿ ಬಿತ್ತರಿಸಿತ್ತು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪನಿರ್ದೇಶಕ ನಟರಾಜ್ ಕುಶಾಲನಗರ ತಾಲ್ಲೂಕಿನ ಬಸವನತ್ತೂರು ಅಂಗನವಾಡಿಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ಕೂಡ ಬಹುತೇಕ ಮೊಟ್ಟೆಗಳು ಹಾಳಾಗಿರುವುದು ಗೊತ್ತಾಗಿದೆ. ಕೂಡಲೇ ಮೊಟ್ಟೆ ವಿತರಣೆ ಮಾಡದಂತೆ ಮತ್ತು ವಿತರಣೆ ಮಾಡಿದ್ದು ಕೊಳತೆ ಹೋಗಿರುವ ಮೊಟ್ಟೆಗಳನ್ನು ವಾಪಸ್ ಪಡೆಯುವಂತೆ ಅಲ್ಲಿನ ಅಂಗನವಾಡಿ ಶಿಕ್ಷಕಿಗೆ ಸೂಚಿಸಿದ್ದಾರೆ. ಅಲ್ಲದೆ ಇಂತಹ ಕೊಳೆತ ಮೊಟ್ಟೆಯನ್ನು ವಿತರಣೆ ಮಾಡುವ ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ಇದರ ಹಣವನ್ನು ನೀಡದಂತೆ ಸೂಚಿಸಿದ್ದಾರೆ. 

ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಫಸ್ಟ್‌, ಕರ್ನಾಟಕದ ಸ್ಥಾನವೆಷ್ಟು ಗೊತ್ತಾ?

ಗುಣಮಟ್ಟದ ಮೊಟ್ಟೆ ವಿತರಣೆ: ನಂತರ ಕುಶಾಲನಗರ ವ್ಯಾಪ್ತಿಯ ಚಿಕ್ಕತ್ತೂರು, ನವಗ್ರಾಮ ಸೇರಿದಂತೆ ಹಲವು ಅಂಗನವಾಡಿಗಳಿಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿಯೂ ಕೆಲವು ಮೊಟ್ಟೆಗಳು ಕಳಪೆಗುಣಮಟ್ಟದವು ಎನ್ನುವುದು ಗೊತ್ತಾಗಿದೆ. ನಂತರ ಹಾಳಾದ ಮೊಟ್ಟೆಗಳನ್ನು ಪಡೆದಿದ್ದ ಮಹಿಳೆ ಗೀತಾ ಮನೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ್ ಮತ್ತು ಸೋಮವಾರಪೇಟೆ ಶಿಶು ಅಭಿವೃದ್ಧಿ ಅಧಿಕಾರಿ ವಿಮಲಾ ಭೇಟಿ ನೀಡಿ ಮಹಿಳೆಯೊಂದಿಗೆ ಮಾತನಾಡಿದ್ದಾರೆ. ಕೂಡಲೇ ಚನ್ನಾಗಿರುವ ಬೇರೆ ಮೊಟ್ಟೆಗಳನ್ನು ಕೊಡುವುದಾಗಿ ತಿಳಿಸಿದ್ದಾರೆ.

Follow Us:
Download App:
  • android
  • ios