ಪಡಿತರ ಪಡೆಯುವ ಎಸ್ಸಿ, ಎಸ್ಟಿಗಳ ಸಮೀಕ್ಷೆ?: ಪಡಿತರ ನೀಡುವಾಗ ಜಾತಿ ಕೇಳುತ್ತಿರುವ ಅಂಗಡಿ ಮಾಲೀಕರು

ಅನ್ನಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ಪಡಿತರ ಪಡೆಯುತ್ತಿರುವ ಪರಿಶಿಷ್ಟಜಾತಿ ಮತ್ತು ಪಂಗಡದ ಫಲಾನುಭವಿಗಳು ಹೊಂದಿರುವ ಪಡಿತರ ಚೀಟಿಗಳ ಬಗ್ಗೆ ರಾಜ್ಯ ಸರ್ಕಾರ ಆಹಾರ ಇಲಾಖೆಯಿಂದ ಮಾಹಿತಿ ಕೇಳಿದೆ. 

Survey of SC STs receiving ration at Karnataka gvd

ಸಂಪತ್‌ ತರೀಕೆರೆ

ಬೆಂಗಳೂರು (ಜ.18): ಅನ್ನಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ಪಡಿತರ ಪಡೆಯುತ್ತಿರುವ ಪರಿಶಿಷ್ಟಜಾತಿ ಮತ್ತು ಪಂಗಡದ ಫಲಾನುಭವಿಗಳು ಹೊಂದಿರುವ ಪಡಿತರ ಚೀಟಿಗಳ ಬಗ್ಗೆ ರಾಜ್ಯ ಸರ್ಕಾರ ಆಹಾರ ಇಲಾಖೆಯಿಂದ ಮಾಹಿತಿ ಕೇಳಿದೆ. ಈ ಮೂಲಕ ಪರೋಕ್ಷವಾಗಿ (ನಿರ್ದಿಷ್ಟ) ಜಾತಿ ಗಣತಿಗೆ ಮುಂದಾಗಿದೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ರಾಜ್ಯದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಸೇರಿದ ಫಲಾನುಭವಿಗಳಿಗೆ ವಿತರಿಸಲಾಗಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್‌) ಸಂಖ್ಯೆ ಹಾಗೂ ಸದರಿ ಪಡಿತರ ಚೀಟಿಗಳಲ್ಲಿನ ಸದಸ್ಯರ ಮಾಹಿತಿಯನ್ನು ಒದಗಿಸುವಂತೆ ಆಹಾರ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಕುರಿತು ಸಾರ್ವಜನಿಕ ವಲಯಗಳಲ್ಲಿ ಚರ್ಚೆಗಳು ಆರಂಭಗೊಂಡಿವೆ.

ಈ ಹಿಂದೊಮ್ಮೆ ರೇಷನ್‌ ಕಾರ್ಡ್‌ಗೆ ಆಧಾರ್‌ ದೃಢೀಕರಣ (ಇಕೆವೈಸಿ) ಪ್ರಕ್ರಿಯೆ ಸಂದರ್ಭದಲ್ಲಿಯೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಕುರಿತು ಮಾಹಿತಿ ಪಡೆಯಲಾಗಿತ್ತು. ಈ ವೇಳೆ ಆ ಪಂಗಡದ ಫಲಾನುಭವಿಗಳು ತಮ್ಮ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಯವರಿಗೆ ನೀಡಿದ್ದರು. ಈ ಬಾರಿಯೂ ತಿಂಗಳ ಪಡಿತರ ಆಹಾರ ಧಾನ್ಯ ಪಡೆಯುವಾಗ ನ್ಯಾಯಬೆಲೆ ಅಂಗಡಿ ಮಾಲೀಕರು, ಫಲಾನುಭವಿಗಳ ಜಾತಿ ಯಾವುದೆಂದು ಖಚಿತಪಡಿಸಿಕೊಳ್ಳುತ್ತಿದ್ದು, ಅವರ ಪಡಿತರ ಕಾರ್ಡ್‌ ಸಂಖ್ಯೆಯನ್ನು ಗುರುತು ಮಾಡಿಟ್ಟುಕೊಳ್ಳುತ್ತಿದ್ದಾರೆ ಎಂದು ಹಲವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 10,91,508 ಅಂತ್ಯೋದಯ ಕಾರ್ಡುಗಳಿದ್ದು 44,83,745 ಮಂದಿ ಫಲಾನುಭವಿಗಳಿದ್ದಾರೆ. ಹಾಗೆಯೇ 1,15,93,227 ಬಿಪಿಎಲ್‌ ಕಾರ್ಡುಗಳಿದ್ದು 3,87,79,975 ಮಂದಿ ಫಲಾನುಭವಿಗಳಿದ್ದಾರೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಬ್ರೇಕ್ ಹಾಕಿದ ಹೈಕಮಾಂಡ್: ನಳಿನ್ ಕುಮಾರ್ ಕಟೀಲ್ ಸೇಫ್?

ಆಹಾರ ಇಲಾಖೆ ಆಯುಕ್ತರಿಗೆ ಆದೇಶ: 2022 ಡಿಸೆಂಬರ್‌ 1ರಂದು ಸಮಾಜ ಕಲ್ಯಾಣ ಇಲಾಖೆ ಸಚಿವರ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆ ಉಲ್ಲೇಖಿಸಿ, ಆಹಾರ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ, ಆಹಾರ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಕ್ಕೆ ಸೇರಿದ ಫಲಾನುಭವಿಗಳಿಗೆ ವಿತರಿಸಲಾಗಿರುವ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳ ಸಂಖ್ಯೆ ಹಾಗೂ ಈ ಕಾರ್ಡ್‌ಗಳಲ್ಲಿ ಇರುವ ಸದಸ್ಯರ ಜಿಲ್ಲಾವಾರು ಮಾಹಿತಿಯನ್ನು ಜರೂರಾಗಿ ಒದಗಿಸುವಂತೆ ಆಯುಕ್ತರಿಗೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆಯು ನ್ಯಾಯಬೆಲೆ ಅಂಗಡಿಗಳ ಮೂಲಕ ಪರಿಶಿಷ್ಟಜಾತಿ ಮತ್ತು ಪಂಗಡದವರ ಪಡಿತರ ಚೀಟಿಗಳ ಸಂಖ್ಯೆ ಮತ್ತು ಫಲಾನುಭವಿ ಸದಸ್ಯರ ಮಾಹಿತಿಯನ್ನು ಕಲೆ ಹಾಕಲು ಆರಂಭಿಸಿದೆ.

ಹೇಗೆ ಮಾಹಿತಿ ಸಂಗ್ರಹ?: ಪರಿಶಿಷ್ಟಜಾತಿ ಮತ್ತು ಪಂಗಡದವರ ಪಡಿತರ ಚೀಟಿಗಳ ಮಾಹಿತಿ ಸಂಗ್ರಹಕ್ಕಾಗಿ ಆಹಾರ ಇಲಾಖೆ ಪ್ರತ್ಯೇಕವಾಗಿ ಅರ್ಜಿ ಸಿದ್ಧಪಡಿಸಿದೆ. ಅರ್ಜಿಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಎಸ್ಸಿ ಮತ್ತು ಎಸ್ಟಿಪಡಿತರ ಚೀಟಿಗಳ ಮಾಹಿತಿ ಸಂಗ್ರಹ ವಿವರವೆಂದು ನಮೂದಿಸಿದೆ. ತಾಲೂಕು ಹೆಸರು, ನ್ಯಾಯಬೆಲೆ ಅಂಗಡಿ ಸಂಖ್ಯೆ ಮತ್ತು ಹೆಸರು, ಪಡಿತರ ಚೀಟಿ ಸಂಖ್ಯೆ, ಪಡಿತರ ಚೀಟಿ ವಿಧ( ಬಿಪಿಎಲ್‌ ಮತ್ತು ಅಂತ್ಯೋದಯ), ಕುಟುಂಬದ ಮುಖ್ಯಸ್ಥರ ಹೆಸರು, ಎಸ್ಸಿ, ಎಸ್ಟಿಮತ್ತು ಸಾಮಾನ್ಯ ವರ್ಗ (ಜಾತಿ), ಕಾರ್ಡ್‌ನಲ್ಲಿ ಇರುವ ಸದಸ್ಯರ ಸಂಖ್ಯೆ ಹಾಗೂ ಷರಾ ಎಂಬ ಅಂಶವನ್ನು ಅರ್ಜಿ ಕಾಲಂನಲ್ಲಿ ಪ್ರಕಟಿಸಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್‌ ಪಡೆಯುವುದಕ್ಕೆ ಬರುವ ಪ್ರತಿ ಕಾರ್ಡ್‌ದಾರರ ಬಳಿ ಮಾಹಿತಿ ಪಡೆದು ಮಾಲೀಕರು ಅರ್ಜಿಯಲ್ಲಿ ನಮೂದಿಸುತ್ತಾರೆ. ಕೊನೆಗೆ ಅರ್ಜಿ ಕೆಳಗೆ ಆಹಾರ ನಿರೀಕ್ಷರ ಹೆಸರು ಮತ್ತು ಸಹಿ, ನ್ಯಾಯಬೆಲೆ ಸಂಚಾಲಕರ ಹೆಸರು ಮತ್ತು ರುಜು ಹಾಕಲಾಗುತ್ತದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಮಾಚನಾಳ ತಾಂಡಾ ಅಭಿವೃದ್ಧಿಗೆ 1 ಕೋಟಿ ವಿಶೇಷ ಅನುದಾನ: ಸಚಿವ ಅಶೋಕ ಘೋಷಣೆ

ಹಲವು ಅನುಮಾನ: ಪ್ರತಿ ವರ್ಷ ರಾಜ್ಯ ಸರ್ಕಾರ, ಬಜೆಟ್‌ನಲ್ಲಿ ಅನ್ನಭಾಗ್ಯ ಯೋಜನೆಗಾಗಿ 3,500 ಕೋಟಿ ರು.ನಿಂದ 4 ಸಾವಿರ ಕೋಟಿ ರು.ವೆರೆಗೆ ಅನುದಾನ ನೀಡುತ್ತಿದೆ. ಸರ್ಕಾರದ ಅನುದಾನ ಮಂಜೂರಾದ ಬಳಿಕ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುವ ಪಡಿತರಕ್ಕೆ ಖರ್ಚು ಮಾಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಇಪಿ-ಟಿಎಸ್‌ಪಿ ಅಡಿ ಪ್ರತಿ ವರ್ಷ ಸಾವಿರಾರು ಕೋಟಿ ರು. ಅನುದಾನ ನೀಡಿದ್ದರೂ ಬೇರೆ ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿರುವ ಬಗ್ಗೆ ಆರೋಪಗಳಿವೆ. ಹೀಗಿದ್ದರೂ, ಎಸ್‌ಇಪಿ-ಟಿಎಸ್‌ಪಿ ಅನುದಾನ ಹಂಚಿಕೆ ಸಂಬಂಧ ರಾಜ್ಯಾದ್ಯಂತ ಎಸ್ಸಿ ಮತ್ತು ಎಸ್ಟಿಸಮುದಾಯದವರು ಹೊಂದಿರುವ ಪಡಿತರ ಕಾರ್ಡ್‌ಗಳ ಸಂಖ್ಯೆ ಮತ್ತು ಕಾರ್ಡ್‌ಗಳ ಸದಸ್ಯರ ಬಗ್ಗೆ ಸರ್ಕಾರ ಮಾಹಿತಿ ಕೇಳಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

Latest Videos
Follow Us:
Download App:
  • android
  • ios