ನವದೆಹಲಿ [ಅ.22]:  ವಿಧಾನಸಭೆಯ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ತಮ್ಮನ್ನು 15ನೇ ವಿಧಾನಸಭೆ ಉಳಿದ ಅವಧಿಗೆ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಿರುವ ಅರ್ಜಿಯ ಮಹತ್ವದ ವಿಚಾರಣೆ ಈ ಹಿಂದೆ ನಿಗದಿಪಡಿಸಿದಂತೆ ಇಂದು ನಡೆಯಲಿದೆ. ಇದಕ್ಕೂ ಮೊದಲು ನ್ಯಾಯಾಲಯವು ಜೆಡಿಎಸ್‌, ಕಾಂಗ್ರೆಸ್‌ ಮತ್ತು ಸ್ಪೀಕರ್‌ ಪರ ವಕೀಲರ ಆಗ್ರಹ ಆಲಿಸಿ ಒಂದು ದಿನದಮಟ್ಟಿಗೆ ವಿಚಾರಣೆಯನ್ನು ಮುಂದೂಡಲು ನಿರ್ಧರಿಸಿತ್ತಾದರೂ ನಂತರ ಚುನಾವಣಾ ಆಯೋಗದ ಮನವಿ ಮೇರೆಗೆ ಪೂರ್ವ ನಿಗದಿಯಂತೆ ವಿಚಾರಣೆ ಮುಂದುವರಿಸುವ ತೀರ್ಮಾನ ಪ್ರಕಟಿಸಿತು.

ಪ್ರಕರಣದ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಅಂದರೆ ಸೆ.26ರಂದು ಸುಪ್ರೀಂ ಕೋರ್ಟ್‌ ಪ್ರಕರಣದ ಮುಂದಿನ ವಿಚಾರಣೆಯನ್ನು ಅ.22ಕ್ಕೆ ನಿಗದಿ ಪಡಿಸಿತ್ತು. ಕಳೆದ ಶನಿವಾರ ಪ್ರಕಟಗೊಂಡ ಮಂಗಳವಾರದ ಸುಪ್ರೀಂ ಕೋರ್ಟಿನ ಕಲಾಪಗಳ ಪಟ್ಟಿಯಲ್ಲೂ ಪ್ರಕರಣ ನಮೂದಾಗಿತ್ತು. ಆದರೆ ಸೋಮವಾರ ಕಾಂಗ್ರೆಸ್‌, ಜೆಡಿಎಸ್‌ ಮತ್ತು ರಮೇಶ್‌ ಕುಮಾರ್‌ ಪರ ಹಿರಿಯ ವಕೀಲ ಕಪಿಲ… ಸಿಬಲ… ನಾವು ಇನ್ನೂ ನಮ್ಮ ಆಕ್ಷೇಪವನ್ನು ಲಿಖಿತ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ನಮಗೆ ಪ್ರತಿ ಅಫಿಡವಿಟ್‌ ಸಲ್ಲಿಸಲು ಒಂದಷ್ಟುಕಾಲಾವಕಾಶ ನೀಡಿ ಪ್ರಕರಣದ ವಿಚಾರಣೆಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡುವಂತೆ ಮೌಖಿಕವಾಗಿ ನ್ಯಾಯಾಲಯವನ್ನು ಕೋರಿದರು.

ಒಂದು ದಿನಕ್ಕೆ ಮುಂದೂಡಿದ ಕೋರ್ಟ್‌: ಆದರೆ, ನ್ಯಾ. ಎನ್‌.ವಿ.ರಮಣ, ನ್ಯಾ. ಸಂಜೀವ್‌ ಖನ್ನಾ ಅವರನ್ನೊಳಗೊಂಡ ದ್ವಿ ಸದಸ್ಯ ನ್ಯಾಯಪೀಠವು ಪ್ರಕರಣದ ವಿಚಾರಣೆ ಮುಂದೂಡಲು ನಿರಾಕರಿಸಿತಲ್ಲದೆ, ಅನರ್ಹ ಶಾಸಕರ ಪರ ವಕೀಲರು ಕೂಡ ವಿಚಾರಣೆ ಮುಂದೂಡಲು ವಿರೋಧ ವ್ಯಕ್ತಪಡಿಸಿದರು. ಆದರೆ ಒಂದು ದಿನದ ಮಟ್ಟಿಗೆ ಅಂದರೆ ಅ.23ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿ ಮಧ್ಯಾಹ್ನ 2 ಗಂಟೆಗೆ ವಿಚಾರಣೆಯನ್ನು ನಿಗದಿ ಮಾಡಿತ್ತು. ಹಾಗೆಯೇ ಮಂಗಳವಾರವೇ ಪ್ರತಿ ಅಫಿಡವಿಟ್‌ ಸಲ್ಲಿಸಿ, ಪ್ರಕರಣದಲ್ಲಿನ ಇತರ ವಾದಿ, ಪ್ರತಿವಾದಿಗಳಿಗೆ ಮುಂಚಿತವಾಗಿಯೇ ಅಫಿಡವಿಟ್‌ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.

ಚು.ಆಯೋಗದಿಂದ ಮನವಿ: ಆದರೆ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಚುನಾವಣಾ ಆಯೋಗದ ಪರ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ನ್ಯಾಯಾಲಯದ ಮುಂದೆ ಹಾಜರಾಗಿ, ನಾವು ಚುನಾವಣೆಯನ್ನು ಮರು ನಿಗದಿ ಮಾಡಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆಯಾಗಿದೆ. ಆದ್ದರಿಂದ ಯಾವ ಕಾರಣಕ್ಕೂ ಪ್ರಕರಣದ ವಿಚಾರಣೆ ಮುಂದೂಡಬಾರದು ಎಂದು ನ್ಯಾಯಾಲಯವನ್ನು ಕೋರಿದರು. ಚುನಾವಣಾ ಆಯೋಗದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವ ಪ್ರಕರಣದ ವಿಚಾರಣೆಯನ್ನು ಒಂದು ದಿನ ಮುಂದೂಡುವ ಬದಲು ಮಂಗಳವಾರಕ್ಕೇ ನಿಗದಿಪಡಿಸಿತು.