ಬಳ್ಳಾರಿ (ಸೆ.01):  ದೇಶದಲ್ಲೇ ಅತ್ಯುನ್ನುತ, ಸುಸಜ್ಜಿತ ಮಟ್ಟದ ದೆಹಲಿಯ ಏಮ್ಸ್‌ ಮಾದರಿ ಆಸ್ಪತ್ರೆಯನ್ನು ಕರ್ನಾಟಕದಲ್ಲೂ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ.ಹರ್ಷವರ್ಧನ್‌, ಈ ಯೋಜನೆ ಹಣಕಾಸು ಇಲಾಖೆಯ ಮುಂದಿದ್ದು ಶೀಘ್ರದಲ್ಲೇ ಅನುಮತಿ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಅಡಿ . 150 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಪರ್‌ ಸ್ಪೆಷಾಲಿಟಿ ಟ್ರಾಮಾ ಕೇರ್‌(ತುರ್ತು ಚಿಕಿತ್ಸಾ ಘಟಕ) ಅನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜೊತೆ ವರ್ಚುವಲ್‌ ಸಮಾರಂಭದಲ್ಲಿ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಸ್ವಾತಂತ್ರ್ಯ ಬಂದು 50 ವರ್ಷ ಕಳೆದರೂ ದೆಹಲಿಯ ಏಮ್ಸ್‌ ಮಾದರಿ ಆಸ್ಪತ್ರೆ ಒಂದೇ ಇತ್ತು. ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಅವರು 2003ರಲ್ಲಿ ದೆಹಲಿಯ ಏಮ್ಸ್‌ ಮಾದರಿ ಆಸ್ಪತ್ರೆಗಳನ್ನು ವಿವಿಧೆಡೆ ಆರಂಭಿಸಲು ನಿರ್ಧರಿಸಿದರು. ಕಳೆದ ವರ್ಷ ರಾಯಬರೇಲಿ ಏಮ್ಸ್‌ ಆಸ್ಪತ್ರೆ ಸೇರಿದಂತೆ 7 ಕಡೆ ನಿರ್ಮಿಸಲಾಗಿದೆ. ಇದೀಗ ಪ್ರಧಾನಿ ಮೋದಿ ಆಶಯದಂತೆ 22 ಏಮ್ಸ್‌ ಆಸ್ಪತ್ರೆ ಆರಂಭಿಸಲು ನಿರ್ಧರಿಸಲಾಗಿದ್ದು, ಅದರಲ್ಲಿ ಒಂದು ಕರ್ನಾಟಕಕ್ಕೂ ಮಂಜೂರಾಗಲಿದೆ ಎಂದು ವಿವರಿಸಿದರು.

ಸಚಿವ ಅಶೋಕ್ ಉಸ್ತುವಾರಿ ವಯಲಯದಲ್ಲಿ ಕೈಮೀರಿದ ಕೊರೋನಾ: ಸುಧಾಕರ್ ಕಳವಳ

ಕಳೆದ ನಾಲ್ಕು ವ​ರ್ಷದಲ್ಲಿ ದೇಶದಲ್ಲಿ 57 ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಮೂಲಕ ವೈದ್ಯರ ಸಮಸ್ಯೆ ನೀಗಿಸುವ ಪ್ರಯತ್ನ ನಡೆದಿದೆ. ಕರ್ನಾಟಕದ ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ಸೇರಿದಂತೆ ನಾಲ್ಕು ಕಡೆಗಳಲ್ಲಿ ಈ ವರ್ಷ ವೈದ್ಯಕೀಯ ಕಾಲೇಜುಗಳ ಆರಂಭಿಸಲು ಉದ್ದೇಶಿಸಲಾಗಿದೆ. ಇನ್ನು ಮುಂದೆ ದೇಶದಲ್ಲಿ ವೈದ್ಯರ ಕೊರತೆ ಎದುರಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೇವೇಳೆ ಬಳ್ಳಾರಿಯಿಂದ ಸುಷ್ಮಾ ಸ್ವರಾಜ್‌ ಅವರು ಸ್ಪರ್ಧಿಸಿ ಸತತ ಸಂಪರ್ಕದ ಮೂಲಕ ಇಲ್ಲಿ ಟ್ರಾಮ್‌ ಕೇರ್‌ ಸೆಂಟರ್‌ ಆರಂಭಕ್ಕೆ ಅವರು ಆರೋಗ್ಯ ಸಚಿವರಾಗಿದ್ದಾಗ ಮಂಜೂರಾತಿ ನೀಡಿದ್ದರು. ಈಗ ಅದು ಕೈಗೂಡಿದೆ ಎಂದರು.

ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ: ಸಚಿವ ಕೆ. ಸುಧಾಕರ್...

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವೀನಿಕುಮಾರ್‌,ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಮಾತನಾಡಿದರು. ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಸಂಸದ ನಾಸೀರ್‌ ಹುಸೇನ್‌, ಶಾಸಕರಾದ ಸೋಮಶೇಖರರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಸೇರಿದಂತೆ ಅನೇಕರು ಇದ್ದರು.

200 ಹಾಸಿಗೆ ಸೌಲಭ್ಯದ ಹೈಟೆಕ್‌ ಟ್ರಾಮಾ ಸೆಂಟರ್‌

ವಿಮ್ಸ್‌ ಸೂಪರ್‌ ಸ್ಪೆಷಾಲಿಟಿ ಟ್ರಾಮಾ ಕೇರ್‌ ಸೆಂಟರ್‌ ಒಟ್ಟು 200 ಹೈಟೆಕ್‌ ಹಾಸಿಗೆ ಸೌಲಭ್ಯ ಹೊಂದಿದೆ. 49 ಸಾಮಾನ್ಯ ಹಾಸಿಗೆ, 72 ಐಸಿಯು ಹಾಸಿಗೆ ಮತ್ತು ತುರ್ತು ಚಿಕಿತ್ಸಾ ಘಟಕದಲ್ಲಿ 79 ಹಾಸಿಗೆಗಳನ್ನು ಹೊಂದಿದೆ. ಇದರ ಜೊತೆಗೆ ನ್ಯೂರೋ ಸರ್ಜರಿ ವಿಭಾಗ, ಪ್ಲಾಸ್ಟಿಕ್‌ ಸರ್ಜರಿ ವಿಭಾಗ, ಆರ್ಥೋಪಿಡಿಕ್ಸ್‌ ವಿಭಾಗ, ರೇಡಿಯೋಲಜಿ ವಿಭಾಗ, ಅನಸ್ಥೇಷಿಯ ವಿಭಾಗಗಳನ್ನು ಹೊಂದಿದೆ. ಬಳ್ಳಾರಿಯಲ್ಲಿ ಟ್ರಾಮಾಕೇರ್‌ ಸೆಂಟರ್‌ ನಿರ್ಮಾಣ ಮಾಡುವುದರಿಂದಾಗಿ ತುರ್ತು ಚಿಕಿತ್ಸೆಗಳಿಗಾಗಿ ಬೆಂಗಳೂರು ಮತ್ತು ಇತರ ಕಡೆ ತೆರಳುವುದು ತಪ್ಪಲಿದ್ದು, ಇದು ಈ ಭಾಗದ ಜನರಿಗೆ ಸಂಜೀವಿನಿಯಾಗಲಿದೆ ಎಂದರು.

ಕಲಬುರಗಿಯಲ್ಲೇ ಏಮ್ಸ್‌ ನಿರ್ಮಿಸಲು ಸಿಎಂ ಮನವಿ

ರಾಜ್ಯಕ್ಕೆ ಮಂಜೂರಾಗಲಿರುವ ಏಮ್ಸ್‌ ಆಸ್ಪತ್ರೆಯನ್ನು ಹೈದರಾಬಾದ್‌ ಕರ್ನಾಟಕ ಭಾಗದ ಪ್ರಮುಖ ನಗರಗಳಲ್ಲೊಂದಾಗಿರುವ ಕಲಬುರಗಿಯಲ್ಲಿ ನಿರ್ಮಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು, ಕೇಂದ್ರ ಸಚಿವ ಡಾ. ಹರ್ಷವರ್ಧನ್‌ ಅವರಿಗೆ ಮನವಿ ಮಾಡಿದ್ದಾರೆ.

ವಿಮ್ಸ್‌$ನ ಸೂಪರ್‌ ಸ್ಪೆಷಾಲಿಟಿ ಟ್ರಾಮಾಕೇರ್‌ ಸೆಂಟರ್‌ಗೆ ಕೇಂದ್ರ ಆರೋಗ್ಯ ಸಚಿವರ ಜತೆಗೂಡಿ ಆನ್‌ಲೈನ್‌(ಇ-ಉದ್ಘಾಟನೆ) ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕಲಬುರಗಿಯಲ್ಲಿರುವ ಆಸ್ಪತ್ರೆಯನ್ನು ಏಮ್ಸ್‌ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಹಿಂದುಳಿದ ಆ ಭಾಗದ ಜನರಿಗೆ ಹೆಚ್ಚಿನ ಆರೋಗ್ಯ ಸವಲತ್ತುಗಳು ಸಿಗುವಂತಾಗಬೇಕು ಎಂದು ಕೋರಿದರು. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತಮಗೆ ಪತ್ರ ಬರೆದಿರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.