Asianet Suvarna News Asianet Suvarna News

ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ: ಓರ್ವ ಬಲಿ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಗುರುವಾರ ಸಂಜೆಯ ವೇಳೆ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಹಾಸನ, ಧಾರವಾಡ ಜಿಲ್ಲೆಯ ಹಲವೆಡೆಯೂ ಗುರುವಾರ ಮಧ್ಯಾಹ್ನದ ನಂತರ ತುಂತುರು ಮಳೆಯಾಗಿದೆ.

Summer Rains in Eight Districts of Karnataka on March 16th grg
Author
First Published Mar 17, 2023, 8:00 AM IST

ಬೆಂಗಳೂರು(ಮಾ.17):  ರಾಜ್ಯದ ಕೆಲವೆಡೆ ಗುರುವಾರವೂ ಬೇಸಿಗೆ ಮಳೆಯಾಗಿದ್ದು, ಬಿಸಿಲಿನ ಹೊಡೆತಕ್ಕೆ ಸಿಲುಕಿದ್ದ 8 ಜಿಲ್ಲೆಗಳಲ್ಲಿ ವರುಣ ತಂಪೆರೆದಿದ್ದಾನೆ. ಈ ನಡುವೆ, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನಲ್ಲಿ ಸಿಡಿಲಿಗೆ ರೈತನೊಬ್ಬ ಬಲಿಯಾಗಿದ್ದರೆ, ಕೋಲಾರದಲ್ಲಿ ಮನೆಯ ಸಜ್ಜಾ ಕುಸಿದ, ಮರ ಉರುಳಿ ಬಿದ್ದ ಘಟನೆ ವರದಿಯಾಗಿವೆ. ಅಲ್ಲದೆ, ಅಕಾಲಿಕ ಮಳೆಯಿಂದಾಗಿ ಮಾವು ಹಾಗೂ ಹುಣಸೆ ಬೆಳೆಗಾರರು ಆತಂಕಗೊಂಡಿದ್ದು, ಹೂಗಳು ಉದುರಿ ಹೋಗುವ ಭಯ ರೈತರನ್ನು ಕಾಡುತ್ತಿದೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ರಾಮನಗರ, ಹಾಸನ, ರಾಯಚೂರು, ಹಾವೇರಿ, ಧಾರವಾಡ ಜಿಲ್ಲೆಗಳ ವಿವಿಧೆಡೆ ಗುರುವಾರ ಮಳೆಯಾಗಿದೆ. ಸಿಡಿಲಬ್ಬರದ ಮಳೆಗೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ರೈತನೊಬ್ಬ ಬಲಿಯಾಗಿದ್ದಾನೆ. ತಡಸದ ಗೌಡ್ರ ಓಣಿ ನಿವಾಸಿ ನಿಂಗನಗೌಡ ಸಿದ್ದನಗೌಡ ಪಾಟೀಲ (63) ಮೃತ ರೈತ. ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಸಿಡಿಲು ಬಡಿದು ದುರ್ಘಟನೆ ಸಂಭವಿಸಿದೆ.

ಚಿಕ್ಕಮಗಳೂರಲ್ಲಿ ವರುಣನ ಆರ್ಭಟ, ಕಲಬುರಗಿಯಲ್ಲಿ ಹೆಚ್ಚು ತಾಪ: ಇನ್ನೂ 2-3 ದಿನ ಮಳೆ

ಶ್ರೀನಿವಾಸಪುರ ಸೇರಿದಂತೆ ಕೋಲಾರ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಕೋಲಾರದ ಆರ್‌ಟಿಓ ಕಚೇರಿ ಸಮೀಪ ಬೃಹತ್‌ ಮರ ಉರುಳಿ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದರಿಂದಾಗಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು ಅಲ್ಲದೆ, ನಗರದ ಕಾರಂಜಿಕಟ್ಟೆಯಲ್ಲಿ ಸುಬ್ರಮಣ್ಯ ಎಂಬುವರ ಮನೆಯ ಸಜ್ಜಾ ಮುರಿದು ಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಸ್ಥಳೀಯ ನಿವಾಸಿಗಳು ಬವಣೆ ಪಡುವಂತಾಯಿತು. ನೆರೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವೆಡೆಯೂ ಉತ್ತಮ ಮಳೆಯಾಗಿದೆ. ಅಕಾಲಿಕ ಮಳೆಗೆ ಈ ಭಾಗದ ರೈತರು ಆತಂಕಗೊಂಡಿದ್ದು, ಮಾವು ಹಾಗೂ ಹುಣಸೆ ಹೂಗಳು ಉದುರಿ ಹೋಗುವ ಭಯ ರೈತರನ್ನು ಕಾಡುತ್ತಿದೆ.

ಇದೇ ವೇಳೆ, ರಾಯಚೂರು ಜಿಲ್ಲೆಯ ವಿವಿಧೆಡೆಯೂ ಆಲಿಕಲ್ಲು ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದೇವದುರ್ಗ ತಾಲೂಕಿನ ಗಲಗ ಗ್ರಾಮದಲ್ಲಿ ಸುಬ್ರಮಣ್ಯ ಎಂಬುವರಿಗೆ ಸೇರಿದ ಎತ್ತೊಂದು ಸಿಡಿಲಿಗೆ ಬಲಿಯಾಗಿದೆ. ಅದೃಷ್ಟವಶಾತ್‌ ಸುಬ್ರಮಣ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಬೇಸಗೆ ಮಳೆ ಸಿಂಚನ: ಉಡುಪಿಯಲ್ಲಿ ತುಂತುರು

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಗುರುವಾರ ಸಂಜೆಯ ವೇಳೆ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಹಾಸನ, ಧಾರವಾಡ ಜಿಲ್ಲೆಯ ಹಲವೆಡೆಯೂ ಗುರುವಾರ ಮಧ್ಯಾಹ್ನದ ನಂತರ ತುಂತುರು ಮಳೆಯಾಗಿದೆ.

ಈ ಮಧ್ಯೆ, ರೇಷ್ಮೆ ನಗರಿ ರಾಮನಗರ, ಮಾಗಡಿ, ಚನ್ನಪಟ್ಟಣಗಳಲ್ಲಿ ಮಧ್ಯಾಹ್ನದ ನಂತರ ಸುರಿದ ವರ್ಷದ ಮೊದಲ ಮಳೆ, ಇಳೆಗೆ ತಂಪನ್ನೆರೆಯಿತು. ಸುಮಾರು ಒಂದು ಗಂಟೆ ಕಾಲ ಸುರಿದ ತುಂತುರು ಮಳೆ, ಬಿಸಿಲ ಝಳದಿಂದ ಬಳಲಿದ್ದ ಜನರಿಗೆ ತಂಪಿನ ಅನುಭವ ನೀಡಿತು.

Follow Us:
Download App:
  • android
  • ios