ಚಿಕ್ಕಮಗಳೂರಲ್ಲಿ ವರುಣನ ಆರ್ಭಟ, ಕಲಬುರಗಿಯಲ್ಲಿ ಹೆಚ್ಚು ತಾಪ: ಇನ್ನೂ 2-3 ದಿನ ಮಳೆ
ಬಿಸಿಲ ಪ್ರಮಾಣ ಹೆಚ್ಚಾಗಿ ಹಾಗೂ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ವಿವಿಧೆಡೆ ಮಳೆ ಆಗುತ್ತಿದೆ.
ಬೆಂಗಳೂರು(ಮಾ.16): ರಾಜ್ಯದಲ್ಲಿ ಮಂಗಳವಾರ ಮುಂಗಾರು ಪೂರ್ವ ಮಳೆ ಮುಂದುವರೆದಿದ್ದು, ಬುಧವಾರವೂ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿರುವ ವರದಿಯಾಗಿದೆ. ಬಿಸಿಲ ಪ್ರಮಾಣ ಹೆಚ್ಚಾಗಿ ಹಾಗೂ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ವಿವಿಧೆಡೆ ಮಳೆ ಆಗುತ್ತಿದೆ. ಮಂಗಳವಾರ ಚಿಕ್ಕಮಗಳೂರು ಜಿಲ್ಲೆಯ ಜಯಪುರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 3 ಸೆಂ.ಮೀ. ಮಳೆಯಾಗಿರುವ ವರದಿಯಾಗಿದೆ.
ಉಳಿದಂತೆ ಬಾಳೆಹೊನ್ನೂರಿನಲ್ಲಿ 2 ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಾನ್ಮನೆ ಹಾಗೂ ಶಿವಮೊಗ್ಗದ ಹುಂಚದಕಟ್ಟೆ, ಕೊಡಗಿನ ಸುಂಟಿಕೊಪ್ಪದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಬುಧವಾರ ಚಿಕ್ಕಮಗಳೂರಿನ ಅಣ್ಣೀಗೆರೆಯಲ್ಲಿ 5 ಸೆಂ.ಮೀ.ವರೆಗೆ ಮಳೆಯಾದ ವರದಿಯಾಗಿದೆ. ಉಳಿದಂತೆ ಶಿವಮೊಗ್ಗ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ದಾವಣಗೆರೆ, ಧಾರವಾಡ ಜಿಲ್ಲೆಯ ಕೆಲವು ಪ್ರದೇಶದಲ್ಲಿ ಮಳೆಯಾದ ವರದಿಯಾಗಿದೆ. ಮಂಗಳವಾರ ಕಲಬುರಗಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಗರಿಷ್ಠ ಉಷ್ಣಾಂಶ 37.5 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕನಿಷ್ಠ ಉಷ್ಣಾಂಶ ಬಾಗಲಕೋಟೆಯಲ್ಲಿ 13.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದಕ್ಷಿಣ ಕನ್ನಡದಲ್ಲಿ ಬೇಸಗೆ ಮಳೆ ಸಿಂಚನ: ಉಡುಪಿಯಲ್ಲಿ ತುಂತುರು
ಇನ್ನೂ ಎರಡ್ಮೂರು ದಿನ ಮಳೆ:
ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರಾವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಯ ಒಂದೆರಡು ಕಡೆ ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಒಳನಾಡಿನಲ್ಲಿ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟುಕನಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.