ಬೆಂಗಳೂರು : ಜೆಡಿಎಸ್‌ ಭದ್ರಕೋಟೆ ಎನ್ನಿಸಿಕೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಿವಂಗತ ನಟ, ರಾಜಕಾರಣಿ ಅಂಬರೀಷ್‌ ಅವರ ಪತ್ನಿ ಸುಮಲತಾ ಅಂಬರೀಷ್‌ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ. 

ಚುನಾವಣಾ ಕಣಕ್ಕೆ ಇಳಿಯಲು ಸುಮಲತಾ ಅವರೂ ಕೂಡ ಮನಸ್ಸು ಮಾಡಿದಂತಿದ್ದು,  ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜಕೀಯಕ್ಕೆ ಬರುವ ಆಲೋಚನೆ ತಮಗೆ ಇರಲಿಲ್ಲ. ಆದರೆ ಅಭಿಮಾನಿಗಳ ಆಶಯದಂತೆ ನಡೆಯುತ್ತೇನೆ. . ಅಲ್ಲದೇ ರಾಜಕೀಯಕ್ಕೆ ಬಂದರೆ ಮಂಡ್ಯದಿಂದ ಮಾತ್ರ ಎಂದಿದ್ದಾರೆ. 

ಅಭಿಮಾನಿಗಳೇ ನನ್ನ ಶಕ್ತಿಯಾಗಿದ್ದು, ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡವರು. ಅವರ ಜೊತೆ ಇದ್ದ ಮುಖಂಡರು ಮೈತ್ರಿ ಪಕ್ಷದ ಮುಂದೆ ಈ ತೀರ್ಮಾನ ಮಾಡಬೇಕು ಎಂದರು. 

ಇನ್ನು ಅಭಿಮಾನಿಗಳು ಯಾವ ತೀರ್ಮಾನ ಮಾಡುತ್ತಾರೆ, ಅದೇ ತಮ್ಮ ಆಯ್ಕೆಯೂ ಆಗಿರುತ್ತದೆ ಎಂದು ಪರೋಕ್ಷವಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. 

ಮಂಡ್ಯ ಜನರ ಭಾವನೆಗೆ ಬೆಲೆ ಕೊಡುವುದು ನನ್ನ ಕರ್ತವ್ಯವಾಗಿದ್ದು, ಮಂಡ್ಯ ಜನತೆಯೊಂದಿಗೆ ಅಂಬರೀಶ್ ಅವರಿಗೆ ಇದ್ದ ಸಂಬಂಧವನ್ನು ಕಡಿದುಕೊಳ್ಳಲು ಸಾಧ್ಯವಿಲ್ಲ, ಅವರು ಹೇಳಿದಂತೆ ತಾವು ನಡೆದುಕೊಳ್ಳುವುದಾಗಿ ಸುಮಲತಾ ಹೇಳಿದರು.