ಬೆಂಗಳೂರು[ಡಿ.01]: ಅಂಬರೀಷ್‌ ಅವರು ಕೇವಲ ನನ್ನವರಾಗಿ ಉಳಿಯದೇ ಇಡೀ ನಾಡಿನ ಮಗನಾಗಿದ್ದರು ಎಂದು ಅಂಬರೀಷ್‌ ಪತ್ನಿ ಸುಮಲತಾ ಭಾವುಕರಾಗಿ ನುಡಿದರು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅಂಬಿಗೆ ನಮನ’ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಕಳೆದ 27 ವರ್ಷಗಳ ಜೀವನದಲ್ಲಿ ನಾನು ಅಂಬರೀಷ್‌ ಅವರಲ್ಲಿ ಒಳ್ಳೆಯ ಮಗ, ಸಹೋದರ, ಗಂಡ, ತಂದೆ, ಸ್ನೇಹಿತ, ರಾಜಕೀಯ ನಾಯಕ, ಸಮಾಜ ಸೇವಕ, ಉತ್ಸಾಹಿ ಕ್ರೀಡಾಳುವನ್ನು ಕಂಡಿದ್ದೇನೆ. ಅಷ್ಟೇ ಅಲ್ಲದೆ ಉತ್ತಮವಾದ ಮನುಷ್ಯತ್ವವುಳ್ಳ ವ್ಯಕ್ತಿತ್ವವನ್ನು ನೋಡಿದ್ದೇನೆ. ಆದರೆ, ಅಭಿಷೇಕ್‌ ನಟಿಸಿರುವ ಮೊದಲ ಸಿನಿಮಾ ನೋಡಬೇಕು ಎಂಬುದು ಅವರ ಆಸೆಯಾಗಿತ್ತು. ಅದು ಸಾಧ್ಯವಾಗಿಲ್ಲ. ಅಂಬರೀಷ್‌ ಅವರ ಮೇಲಿದ್ದ ಆಶೀರ್ವಾದ ಅಭಿಷೇಕ್‌ಗೂ ನೀಡಬೇಕು ಎಂದು ಮನವಿ ಮಾಡಿದರು.

ಅವರಿಗೆ ಉತ್ತಮ ಪಾತ್ರಗಳನ್ನು ನೀಡಿ ರಾಜ್ಯದ ಜನತೆಗೆ ಒಳ್ಳೆಯ ನಟ ಎಂದು ಗುರುತಿಸುವಂತೆ ಮಾಡಿದ್ದ ನಿರ್ಮಾಪಕರು, ನಿರ್ದೇಶಕರು, ಅಂಬರೀಷ್‌ ಅವರನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದ ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಪ್ರಾರಂಭದಿಂದಲೂ ಅವರು ರಾಜನಾಗಿ ಬಾಳಿದ್ದರು. ಕೊನೆ ದಿನಗಳಲ್ಲಿ ಅವರನ್ನು ಅರಸನನ್ನಾಗಿ ಕಳಿಸಿಕೊಟ್ಟಿದ್ದೀರಿ. ಇದಕ್ಕೆ ಕಾರಣವಾದ ಮುಖ್ಯಮಂತ್ರಿಗಳು, ಅಂಬಿ ಅಭಿಮಾನಿಗಳು, ಭದ್ರತೆ ನೀಡಿದ ಪೊಲೀಸ್‌ ಕುಟುಂಬ, ಅವರ ಸುಂದರ ಭಾಷೆಯನ್ನು ಬೇಸರಿಸಿಕೊಳ್ಳದೆ ಸಹಿಸಿಕೊಂಡಿದ್ದ ಸಚಿವ ಸಂಪುಟದ ಸಹೋದರರಿಗೆ ಕೃತಜ್ಞತೆಗಳನ್ನು ತಿಳಿಸುವುದಾಗಿ ಹೇಳಿದರು.

‘ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ, ಬರುವಾಗಲೂ ಏನನ್ನೂ ತೆಗೆದುಕೊಂಡು ಬರುವುದಿಲ್ಲ ಎಂದು ದೇವರು ಮನುಷ್ಯನಿಗೆ ಕೇಳುತ್ತಾನೆ. ಅದಕ್ಕೆ ಉತ್ತರಿಸಿದ ಮನುಷ್ಯ ನೀನು ಕಳಿಸುವಾಗ ಒಂದು ಹೃದಯ ಕೊಟ್ಟಿದ್ದೀಯ, ನಾನು ಬರುವಾಗ ಸಾವಿರಾರು ಹೃದಯಗಳಲ್ಲಿ ನೆಲೆಸುತ್ತೇನೆ ಎಂದು ಹೇಳಿದ್ದರು’ ಎಂಬ ಅಂಶ ಭಗವದ್ಗೀತೆಯಲ್ಲಿ ಉಲ್ಲೇಖವಾಗಿದೆ. ಅದರಂತೆ ಅಂಬರೀಷ್‌ ಸಹಾ ನಾಡಿನ ಜನತೆಯ ಹೃದಯಗಳಲ್ಲಿ ನೆಲೆಸಿದ್ದಾರೆ ಎಂದು ಕಂಠ ತುಂಬಿಕೊಂಡು ಹೇಳಿದಾಗ ಸಭೆಯಲ್ಲಿ ನೆರೆದಿದ್ದವರು ಕಣ್ಣಾಲಿಗಳಲ್ಲಿ ನೀರು ಹರಿಯುತ್ತಿತ್ತು.

ಅಪ್ಪನನ್ನು ನೆನಪಿಸಿಕೊಂಡ ಅಭಿಷೇಕ್‌

ಅಂಬರೀಷ್‌ ಪುತ್ರ ಅಭಿಷೇಕ್‌ ಮಾತನಾಡಿ, ತಮ್ಮ ತಂದೆಯೊಂದಿಗಿನ ಹಲವಾರು ಘಟನೆಗಳನ್ನು ಹಂಚಿಕೊಂಡರು. ನನಗೆ ಸುಮಾರು ಮೂರ್ನಾಲ್ಕು ವರ್ಷವಾಗಿದ್ದಾಗ ಸಿಂಗಾಪುರಕ್ಕೆ ಪ್ರವಾಸ ಹೋಗಿದ್ದೆವು. ಅಮ್ಮ ಪ್ರತಿ ದಿನ ಹೊರಗಡೆ ಸುತ್ತಾಡುವುದಕ್ಕೆ ಹೋದರೆ ಅಪ್ಪ ಮಾತ್ರ ಹೋಟೆಲ್‌ ಬಿಟ್ಟು ಹೊರಗಡೆ ಕಾಲಿಡುತ್ತಿರಲಿಲ್ಲ. ಪ್ರವಾಸಿ ತಾಣಗಳನ್ನು ನೋಡುವುದಕ್ಕಾಗಲಿ, ಶಾಪಿಂಗ್‌ ಮಾಡುವುದಕ್ಕಾಗಲಿ ಯಾವುದಕ್ಕೂ ಹೋಗುತ್ತಿರಲಿಲ್ಲ. ಅಲ್ಲಿಗೆ ಬರುವ ಸ್ನೇಹಿತರೊಂದಿಗೆ ಮಾತನಾಡುವುದು ಮತ್ತೆ ಮಲಗುವುದೇ ಆಗಿತ್ತು. ಕೊನೆಗೆ ಒಂದು ದಿನ ನಾನು ಮತ್ತು ಅಪ್ಪ ಇನ್ನೂ ಮಲಗಿರುವಾಗಲೇ ಅಮ್ಮ, ಶಾಪಿಂಗ್‌ಗೆ ಹೋಗುತ್ತಿದ್ದೇನೆ. ಬರುವುದಕ್ಕೆ ತಡವಾಗುತ್ತೆ ಎಂದು ಬರೆದಿಟ್ಟು ಹೋಗಿದ್ದರು.

ನಾನು ಎದ್ದು ನೋಡುತ್ತೇನೆ. ನಮ್ಮ ತಾಯಿ ಕಾಣಲಿಲ್ಲ. ಆಗ ಅಳುವುದಕ್ಕೆ ಶುರು ಮಾಡಿದೆ. ಅಪ್ಪ ಯಾಕೋ ಮಗನೆ.... ಏನು ಬೇಕೋ... ಸುಸ್ಸು ಮಾಡಬೇಕಾ ಎಂದು ಶೌಚಾಲಯಕ್ಕೆ ಕರೆದುಕೊಂಡು ಹೋದರು. ಅದಾದ 10 ನಿಮಿಷಕ್ಕೆ ಮತ್ತೆ ಅಳುವುದಕ್ಕೆ ಶುರು ಮಾಡಿದೆ. ಮತ್ತೆ ಸಮಾಧಾನ ಮಾಡಿದರು. ಮೂರನೇ ಬಾರಿ ಅಳುವುದಕ್ಕೆ ಶುರು ಮಾಡಿದಾಗ ಮತ್ತೆ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಕೂರಿಸಿ ಏನಾದ್ರೂ ಮಾಡಿಕೋ ಎಂದರು. ಬಳಿಕ ಎರಡು ತಾಸು ಆದ ಮೇಲೆ ಬಂದ ತಾಯಿಯನ್ನು ಇವನನ್ನು ಏಕೆ ನನ್ನೊಟ್ಟಿಗೆ ಬಿಟ್ಟು ಹೋದೆ ಎಂದು ರೇಗಿದ್ದರು ಎಂದು ಬಾಲ್ಯದಲ್ಲಿ ನಡೆದ ಘಟನೆಯನ್ನು ಬಿಚ್ಚಿಟ್ಟರು.

ತಂದೆಗೆ ಸಿಂಗಾಪುರಕ್ಕೆ ಹೋದರೂ ಇಲ್ಲಿನ ವಾತಾವರಣ, ಊಟವೇ ಬೇಕಿತ್ತು. ಅವರದೇ ಶೈಲಿಯಲ್ಲಿ ಬದುಕಲು ಇಷ್ಟಪಡುತ್ತಿದ್ದರು. ಅವರ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು. ಅಪ್ಪನ ಅಂತ್ಯ ಸಂಸ್ಕಾರವನ್ನು ಶಾಂತಿಯುತವಾಗಿ ನಡೆಸಿಕೊಟ್ಟರಾಜ್ಯದ ಜನತೆ, ಮುಖ್ಯಮಂತ್ರಿಗಳು, ಮಂಡ್ಯ ಜಿಲ್ಲೆ ಜನರಿಗೆ ಕುಟುಂಬದ ಸದಸ್ಯರಿಗೆ ಕೃತಜ್ಞನಾಗಿರುವುದಾಗಿ ಹೇಳಿದರು.