ರಾಜ್ಯದಲ್ಲಿ ಬಹುತೇಕ ಕಡೆ ದಿಢೀರ್ ತಾಪಮಾನ ಏರಿಕೆ
* 4 ದಿನ ಉತ್ತಮ ಮಳೆ ಸಾಧ್ಯತೆ: ಹವಾಮಾನ ಇಲಾಖೆ
* ಉತ್ತಮ ಪ್ರಮಾಣದಲ್ಲಿ ಬಿತ್ತನೆ
* ವಿಜಯಪುರದಲ್ಲಿ ರಾಜ್ಯದಲ್ಲೇ ಗರಿಷ್ಠ 33.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
ಬೆಂಗಳೂರು(ಸೆ.19): ರಾಜ್ಯದ ಕರಾವಳಿ ಮತ್ತು ಒಳನಾಡಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು ಸಹಿತ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇದೇ ವೇಳೆ ರಾಜ್ಯದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ರಾಜ್ಯದ ಶೇ.81ಕ್ಕಿಂತ ಹೆಚ್ಚು ಭೂ ಭಾಗದಲ್ಲಿ 30 ಡಿಗ್ರಿ ಸೆಲ್ಸಿಯಸ್ ಮೀರಿ ದಿನದ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಒಂದೆಡೆ ಮಳೆ ಕಡಿಮೆಯಾಗಿದ್ದರೆ, ಇನ್ನೊಂದೆಡೆ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ವಿಜಯಪುರದಲ್ಲಿ ರಾಜ್ಯದಲ್ಲೇ ಗರಿಷ್ಠ 33.5 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ.
ರಾಜ್ಯದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗಿದೆ. ಆಕಾಶದಲ್ಲಿಯೂ ಮೋಡಗಳಿಲ್ಲ. ಹಾಗೆಯೇ ಮಾರುತ, ವಾಯುಭಾರ ಕುಸಿತ ಮುಂತಾದ ವಿದ್ಯಮಾನಗಳು ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಇನ್ನೂ ಮೂರು, ನಾಲ್ಕು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಮಾಲೋಚಕ ಡಾ. ಜಿ.ಎಸ್. ಶ್ರೀನಿವಾಸ್ ರೆಡ್ಡಿ ಹೇಳುತ್ತಾರೆ.
ಆಗಸ್ಟ್ ಮಧ್ಯ ಭಾಗದ ಹೊತ್ತಿಗೆ ರಾಜ್ಯದಲ್ಲಿ ಮಳೆಯ ಕೊರತೆಯಿತ್ತು. ಆದರೆ ಆ ಬಳಿಕ ಉತ್ತಮ ಮಳೆಯಾಗಿದ್ದು ರಾಜ್ಯದ ಈ ವರ್ಷದ ಮುಂಗಾರು ಮಳೆಯ ಸ್ಥಿತಿ ವಾಡಿಕೆಯಷ್ಟಿದೆ. ಸೆಪ್ಟೆಂಬರ್‌ನ ಆರಂಭದಲ್ಲಿಯೂ ಉತ್ತಮ ಮಳೆಯಾಗಿದೆ ಎಂದು ತಿಳಿಸುತ್ತಾರೆ.
ಕೆನಡಾದಲ್ಲಿ ದಿಢೀರ್ ಬಿಸಿ ಗಾಳಿಗೆ 500 ಸಾವು: ಕಂಡು ಕೇಳರಿಯದ ವಿದ್ಯಮಾನ!
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಕರಾವಳಿಯ ಅನೇಕ ಸ್ಥಳಗಳಲ್ಲಿ ಮತ್ತು ಒಳನಾಡಿನ ಕೆಲ ಸ್ಥಳಗಳಲ್ಲಿ ಮಳೆಯಾಗಿದೆ. ಒಟ್ಟಾರೆ ಮುಂಗಾರು ದುರ್ಬಲವಾಗಿ ಇತ್ತು. ಭಾನುವಾರದಿಂದ ಮತ್ತೆ ನೈರುತ್ಯ ಮುಂಗಾರು ಚುರುಕುಗೊಳ್ಳುವ ಸಾಧ್ಯತೆಯಿದೆ.
ದುರ್ಬಲಗೊಂಡ ಮುಂಗಾರು:
ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್‌ನ ಮೊದಲ ವಾರ ರಾಜ್ಯದಲ್ಲಿ ಚುರುಕಾಗಿದ್ದ ಮುಂಗಾರು ಸೆಪ್ಟೆಂಬರ್‌ನ ಎರಡನೇ ವಾರದ ಹೊತ್ತಿಗೆ ದುರ್ಬಲವಾಗಿದೆ. ಒಳನಾಡಿನ ಜಿಲ್ಲೆಗಳಲ್ಲಿ ಮುಂಗಾರು ಕಳೆಗುಂದಿದ್ದರೆ, ಮಲೆನಾಡಿನಲ್ಲಿ ವಾಡಿಕೆಯ ಮಳೆ ಮತ್ತು ಕರಾವಳಿಯಲ್ಲಿ ತುಸು ಉತ್ತಮ ಪ್ರಮಾಣದಲ್ಲಿ ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣೆ ಕೇಂದ್ರ ಹೇಳಿದೆ.
ರಾಜ್ಯದಲ್ಲಿ ಈ ವರ್ಷದ ಮುಂಗಾರು ಸೆಪ್ಟೆಂಬರ್ 16ರ ತನಕದ ಲೆಕ್ಕಾಚಾರದಲ್ಲಿ ವಾಡಿಕೆಯಷ್ಟಿದೆ. ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮಲೆನಾಡು ಮತ್ತು ಕರಾವಳಿಯಲ್ಲಿ ವಾಡಿಕೆಯಷ್ಟುಮಳೆಯಾಗಿದೆ.
ಉತ್ತಮ ಪ್ರಮಾಣದಲ್ಲಿ ಬಿತ್ತನೆ:
ರಾಜ್ಯದಲ್ಲಿ ಮುಂಗಾರು ಉತ್ತಮವಾಗಿರುವುದು ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರು ತಮ್ಮ ಊರುಗಳಿಗೆ ಹಿಂತಿರುಗಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ವಾಡಿಕೆ ವರ್ಷಗಳಿಗಿಂತ 9 ಲಕ್ಷ ಹೆಕ್ಟೇರ್ ಹೆಚ್ಚು ಬಿತ್ತನೆ ಈ ಬಾರಿ ನಡೆದಿದೆ. ಈ ವರ್ಷದ ಖಾರೀಫ್ ಬಿತ್ತನೆಯ ಗುರಿಯ ಶೇ. 98 ಸಾಧನೆಯಾಗಿದೆ. 77 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುವ ಗುರಿ ಇಟ್ಟುಕೊಳ್ಳಲಾಗಿದ್ದು 75.73 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ನಡೆದಿದೆ ಎಂದು ವಿಪತ್ತು ಮೇಲ್ವಿಚಾರಣೆ ಕೇಂದ್ರ ಅಂಕಿ- ಆಂಶ ನೀಡಿದೆ.