Subsidy Electricity: ಕಾಫಿ ಬೆಳೆಗಾರಿಗೂ ಸಬ್ಸಿಡಿ ವಿದ್ಯುತ್‌: ಸಿಎಂ ಬೊಮ್ಮಾಯಿ

*  ಕೆಲವು ಷರತ್ತಿನೊಂದಿಗೆ 10 ಎಚ್‌ಪಿವರೆಗಿನ ಪಂಪ್‌ಗೆ ಪೂರೈಕೆ
*  ದುರ್ಬಳಕೆ ತಡೆಗೆ ಕಟ್ಟುನಿಟ್ಟಿನ ನಿಯಮ ಅನುಷ್ಠಾನ: ಸಿಎಂ
*  ಹೆಬ್ಬಾಳ ಫ್ಲೈಓವರ್‌ ವಿಸ್ತರಣೆಗೆ ಏಪ್ರಿಲಲ್ಲಿ ಟೆಂಡರ್‌
 

Subsidy electricity to Coffee Growers in Karnataka Says CM Basavaraj Bommai grg

ಬೆಂಗಳೂರು(ಮಾ.23): ಕಾಫಿ ಬೆಳೆಗಾರರಿಗೆ(Coffee Growers) ಸರ್ಕಾರವು ಸಿಹಿ ಸುದ್ದಿ ನೀಡಿದ್ದು, ಕೃಷಿ ಪಂಪ್‌ಸೆಟ್‌ ಬಳಸುವ ರೈತರಿಗೆ ನೀಡುವಂತೆ ಕಾಫಿ ಬೆಳೆಗಾರರಿಗೂ ಕೆಲವು ಷರತ್ತುಗಳೊಂದಿಗೆ 10 ಎಚ್‌ಪಿವರೆಗೆ ಸಬ್ಸಿಡಿ ದರದಲ್ಲಿ ವಿದ್ಯುತ್‌ ಪೂರೈಕೆ ಮಾಡಲು ಸರ್ಕಾರವು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

ಮಂಗಳವಾರ ಶೂನ್ಯವೇಳೆಯಲ್ಲಿ ಜೆಡಿಎಸ್‌(JDS) ಸದಸ್ಯ ಎ.ಟಿ.ರಾಮಸ್ವಾಮಿ ಮತ್ತು ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್‌ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ(BJP) ಸದಸ್ಯರಾದ ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮಿ, ಕೆ.ಜಿ.ಬೋಪಯ್ಯ ಸೇರಿದಂತೆ ಇತರರು ಧ್ವನಿಗೂಡಿಸಿದರು. ಕಾಫಿ ನಾಡಿನ ಶಾಸಕರ ಒತ್ತಾಯಕ್ಕೆ ಮಣಿದ ಮುಖ್ಯಮಂತ್ರಿಗಳು ಸದನದಲ್ಲಿ ಕೆಲವು ಷರತ್ತುಗಳೊಂದಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್‌ ಪೂರೈಕೆ ಮಾಡಲು ಸಿದ್ಧವಿದೆ ಎಂದು ಪ್ರಕಟಿಸಿದರು.

ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗೋ ಕನಸು ಕಾಣುತ್ತಿದ್ದವರಿಗೆ ಬಿಗ್‌ ಶಾಕ್‌

ಕಾಫಿ ವಾಣಿಜ್ಯ ಬೆಳೆ ಹಾಗೂ ಕಾಫಿ ಬೆಳೆಗಾರರು ಶ್ರೀಮಂತರು ಎಂಬ ಮನೋಭಾವದ ಕಾರಣಕ್ಕಾಗಿ ಅವರನ್ನು ವಿದ್ಯುತ್‌ ಸಬ್ಸಿಡಿ ವ್ಯಾಪ್ತಿಗೆ ಸೇರಿಸಿರಲಿಲ್ಲ. ವಿದ್ಯುತ್‌ ಸಬ್ಸಿಡಿ ನೀಡಲು ಸರ್ಕಾರ ವಾರ್ಷಿಕವಾಗಿ 12-14 ಸಾವಿರ ಕೋಟಿ ರು. ಮೊತ್ತ ಒದಗಿಸಬೇಕಿದೆ. ಕಾಫಿ ಬೆಳೆಗಾರರಿಗೆ 10 ಎಚ್‌ಪಿವರೆಗೆ ವಿದ್ಯುತ್‌(Electricity) ಸಬ್ಸಿಡಿ ನೀಡಲು ಸಮಸ್ಯೆ ಇಲ್ಲ. ಆದರೆ, ಇದರ ದುರ್ಬಳಕೆ ತಡೆಗೆ ಕಟ್ಟುನಿಟ್ಟಿನ ನಿಯಮ ರೂಪಿಸಲಾಗುವುದು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ವಿಷಯ ಪ್ರಸ್ತಾಪಿಸಿದ ಅಪ್ಪಚ್ಚು ರಂಜನ್‌, ಎ.ಟಿ.ರಾಮಸ್ವಾಮಿ ಅವರು, ಅಡಿಕೆ, ತಂಬಾಕು ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಆದರೆ, ಕಾಫಿ ಬೆಳೆಗಾರರಿಗೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ. ವಾಣಿಜ್ಯ ದರ ವಿಧಿಸುವುದು ಸರಿಯಲ್ಲ. ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಹೆಬ್ಬಾಳ ಫ್ಲೈಓವರ್‌ ವಿಸ್ತರಣೆಗೆ ಏಪ್ರಿಲಲ್ಲಿ ಟೆಂಡರ್‌

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Kempegowda International Airport) ಸಂಪರ್ಕ ಕಲ್ಪಿಸುವ ಹೆಬ್ಬಾಳ ಮೇಲ್ಸೇತುವೆಯಲ್ಲಿ(Hebbal Flyover) ಸಂಚಾರ ದಟ್ಟಣೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಮೇಲ್ಸೇತುವೆಯನ್ನು ವಿಸ್ತರಣೆ ಮಾಡಲು ಏಪ್ರಿಲ್‌ನಲ್ಲಿ ಟೆಂಡರ್‌ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ಕೃಷ್ಣಭೈರೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮೊದಲು ಮೇಖ್ರಿ ವೃತ್ತದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತಿತ್ತು. ಅಂಡರ್‌ಪಾಸ್‌ ನಿರ್ಮಾಣದ ಬಳಿಕ ಅಲ್ಲಿನ ಸಂಚಾರ ದಟ್ಟಣೆ ಒತ್ತಡ ಹೆಬ್ಬಾಳಕ್ಕೆ ಸ್ಥಳಾಂತರವಾಗಿದೆ. ಹೆಬ್ಬಾಳ ಮೇಲ್ಸೇತುವೆ ರಸ್ತೆಯನ್ನು ವಿಸ್ತರಣೆ ಮಾಡಲು ಈ ಹಿಂದೆಯೇ ಟೆಂಡರ್‌ ಆಹ್ವಾನಿಸಲಾಗಿತ್ತು. ಆದರೆ, ಈ ಮಾರ್ಗದಲ್ಲಿ ಮೆಟ್ರೋ ರೈಲು ಸಹ ಬರುತ್ತಿರುವ ಕಾರಣ ಟೆಂಡರ್‌ ಪ್ರಕ್ರಿಯೆಯು ವಿಳಂಬವಾಗಿದೆ. ಏಪ್ರಿಲ್‌ ತಿಂಗಳಲ್ಲಿ ವಿಸ್ತರಣೆಗೆ ಟೆಂಡರ್‌ ಕರೆಯಲಾಗುವುದು ಎಂದು ಹೇಳಿದರು.

Mekedatu Dispute: ತಮಿಳುನಾಡು ವಿಧಾನಸಭೆ ಮೇಕೆದಾಟು ನಿರ್ಣಯ ಕಾನೂನುಬಾಹಿರ: ಸಿಎಂ

ಬಿಬಿಎಂಪಿ, ಬಿಡಿಎ, ಬಿಎಂಆರ್‌ಸಿಎಲ್‌ ಮೂಲಕ ವಿಸ್ತರಣೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಸಾಕಷ್ಟುಅಭಿಪ್ರಾಯಗಳು ಬಂದಿದ್ದು, ಅವುಗಳನ್ನು ತಜ್ಞರೊಂದಿಗೆ ವಿಶ್ಲೇಷಿಸಲಾಗುತ್ತಿದೆ. 80 ಕೋಟಿ ರು. ಅನುದಾನ ಸಹ ನೀಡಲಾಗಿದೆ. ಬಿಡಿಎನಿಂದ ಹಣ ಭರಿಸಲು ಸಾಧ್ಯವಾಗದಿದ್ದರೆ ಸರ್ಕಾರವು ಸಹ ನೆರವಿನ ಹಸ್ತ ಚಾಚಲಿದೆ. ಅನುದಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಹೆಬ್ಬಾಳ ಜಂಕ್ಷನ್‌ ಮೇಲ್ಸೇತುವೆ ವಿಸ್ತರಿಸುವ ಕಾಮಗಾರಿಯನ್ನು ಮೆಟ್ರೋ ಯೊಜನೆಯೊಂದಿಗೆ ಸಂಯೋಜನೆಗೊಳಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಮತ್ತು ಹೆಬ್ಬಾಳ ಜಂಕ್ಷನ್‌ನ ಸಾಮರ್ಥ್ಯವನ್ನು ಹೆಚ್ಚಿಸುವ ಅಧ್ಯಯನಕ್ಕಾಗಿ ರೈಟ್ಸ್‌ ಸಂಸ್ಥೆಗೆ ವಹಿಸಲಾಗಿದೆ. ಸಂಸ್ಥೆಯು ಸಲ್ಲಿಸಿರುವ ವಿವಿಧ ಆಯ್ಕೆಯ ಕುರಿತು ಚರ್ಚಿಸಿ ಸುಧಾರಿತ ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.

ಅನುದಾನ ವಾಪಸ್‌: ಕೃಷ್ಣಬೈರೇಗೌಡ

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಕೃಷ್ಣಭೈರೇಗೌಡ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಟೆಂಡರ್‌ಗೆ 80 ಕೋಟಿ ರು. ಅನುದಾನ ಬಿಡುಗಡೆ ಮಾಡಿತ್ತು. ನಂತರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಸಹ ಯೋಜನೆಯನ್ನು ಮುಂದುವರಿಸಿತ್ತು. ತದನಂತರ ಬಿಜೆಪಿ ಸರ್ಕಾರ ಬಂದ ಮೇಲೆ ಯೋಜನೆ ಸ್ಥಗಿತಗೊಂಡಿತು. ಮೆಟ್ರೋ ಬರುತ್ತಿರುವ ಕಾರಣ ವಿಸ್ತರಣೆ ಕಾಮಗಾರಿ ನಿಲ್ಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ಅನುದಾನ ನೀಡಲಾಗಿತ್ತು. ಆದರೆ, ಈಗ ವಾಪಸ್‌ ಪಡೆಯಲಾಗಿದೆ ಎಂದು ಸರ್ಕಾರದ ಗಮನಕ್ಕೆ ತಂದರು.
 

Latest Videos
Follow Us:
Download App:
  • android
  • ios