ಕೊಡಗಿನ ರಾಜಾಸೀಟಿನಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಭೂಕುಸಿತದ ಭೀತಿಯಿರುವ ಪ್ರದೇಶದಲ್ಲಿ ಈ ಕಾಮಗಾರಿ ಸೂಕ್ತವೇ ಎಂಬ ಪ್ರಶ್ನೆ ಎದ್ದಿದೆ. ಬಿಜೆಪಿ ಈ ಯೋಜನೆಯನ್ನು ವಿರೋಧಿಸುತ್ತಿದ್ದರೆ, ಕಾಂಗ್ರೆಸ್ ಅಭಿವೃದ್ಧಿಗೆ ಅಗತ್ಯ ಎಂದು ವಾದಿಸುತ್ತಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.6) : ಕೊಡಗು ಪ್ರವಾಸೋದ್ಯಮ ಜಿಲ್ಲೆ, ಪ್ರವಾಸೋದ್ಯಮದಿಂದಲೇ ಒಂದಷ್ಟು ಅಭಿವೃದ್ಧಿಯನ್ನು ಕಾಣುತ್ತಿದೆ ಎನ್ನುವುದೇನೋ ಸರಿ. ಹಾಗಂತ ಭೂಕುಸಿತವಾಗುವಂತಹ ಅಪಾಯದ ಸ್ಥಳದಲ್ಲಿಯೂ ವಿವಿಧ ಕಾಮಗಾರಿಗಳನ್ನು ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಬೇಕಾ ಎನ್ನುವುದು ಸ್ಥಳೀಯರ ದೊಡ್ಡ ಪ್ರಶ್ನೆ. ದಕ್ಷಿಣ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರವಾಸಿಗರ ಹಾಟ್ಫೇವರೇಟ್ ಸ್ಪಾಟ್ ರಾಜಾಸೀಟು ಇದೆ. ಇಲ್ಲಿನ ಕಡಿದಾದ ಇಳಿಜಾರು ಪ್ರದೇಶದಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಸರ್ಕಾರವೇ ಗ್ಲಾಸ್ ಬ್ರಿಡ್ಜ್ ಮಾಡಲು ಹೊರಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ರಾಜಾಸೀಟಿನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ರಾಜಾಸೀಟು ಸಹಜ ಪ್ರಾಕೃತಿಕ ಸೌಂದರ್ಯ ತಾಣ. ಇದನ್ನು ನೋಡುವುದಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಬೇಕೆಂಬ ನೆಪವೊಡ್ಡಿ ಇಲ್ಲಿ ಗ್ಲಾಸ್ ಬ್ರಿಡ್ಜ್ ಮಾಡಲು ಹೊರಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜಾಸೀಟು ಅತ್ಯಂತ ಕಡಿದಾದ ಇಳಿಜಾರು ಪ್ರದೇಶವಾಗಿದ್ದು, ಇದಕ್ಕೆ ಹೊಂದಿಕೊಂಡಂತೆ ಇರುವ ಚಾಮುಂಡೇಶ್ವರಿ ನಗರ, ಇಂದಿರಾನಗರಲ್ಲಿ ಈಗಾಗಲೇ ಭೂಕುಸಿತವಾಗಿದೆ. ಜೊತೆಗೆ ರಾಜಾಸೀಟು ಕೆಳಭಾಗದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ 275 ಕ್ಕೆ ನಿರ್ಮಿಸಿದ್ದ ತಡೆಗೋಡೆಯಲ್ಲಿಯೂ ಭಾರಿ ಬಿರುಕು ಮೂಡಿದ್ದು ಯಾವುದೇ ಕ್ಷಣದಲ್ಲಾದರೂ ಕುಸಿಯುವ ಭೀತಿ ಇದೆ.

2018 ರಿಂದಲ್ಲೂ ರಾಜಾಸೀಟು ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವೆಡೆ ಭೂಕುಸಿತವಾಗಿದೆ. ಇದರ ಜೊತೆಗೆ ಕಳೆದ ಎರಡು ವರ್ಷಗಳ ಹಿಂದೆ ರಾಜಾಸೀಟಿನ ಪಕ್ಕದಲ್ಲಿ ಇದ್ದ ಬೆಟ್ಟ ಪ್ರದೇಶವನ್ನು ಅಭವೃದ್ಧಿಗೊಳಿಸುವುದಾಗಿ ಗ್ರೇಟರ್ ರಾಜಾಸೀಟು ಹೆಸರಿನಲ್ಲೂ ಒಂದಿಷ್ಟು ಕಾಮಗಾರಿ ಮಾಡಲಾಗಿದೆ. ಇದೀಗ ಮತ್ತೆ ರಾಜಾಸೀಟಿನಲ್ಲಿ ಗಾಜಿನ ಸೇತುವೆ ನಿರ್ಮಿಸಲು ಮುಂದಾಗಿದ್ದು ಬೆಟ್ಟಪ್ರದೇಶದಲ್ಲಿ ಇಂತಹ ಕಾಮಗಾರಿ ಮಾಡಿದರೆ ಭೂಕುಸಿತವಾಗುವುದು ಖಚಿತ ಎಂಬ ಆತಂಕವನ್ನು ಬಿಜೆಪಿ ವ್ಯಕ್ತಪಡಿಸುತ್ತಿದೆ. ಇಲ್ಲಿನ ಭೂಪ್ರದೇಶದ ಸ್ಥಿತಿಗತಿ, ಅಂತಹ ಕಾಮಗಾರಿ ಮಾಡಿದರೆ ಅದು ಅಲ್ಲಿ ನಿಲ್ಲಲಿದೆಯೇ ಎನ್ನುವ ಯಾವ ಪರಿಶೀಲನೆಯನ್ನು ಮಾಡಿಲ್ಲ. ಇದ್ಯಾವುದನ್ನು ಮಾಡದೆ ಇಂತಹ ಅಪಾಯಕಾರಿ ಪ್ರದೇಶದಲ್ಲಿ ಗ್ಲಾಸ್ ಬ್ರಿಡ್ಜ್ ಮಾಡಲು ಈಗಾಗಲೇ ಇ ಟೆಂಡರ್ ಮಾಡಿರುವುದು ಎಷ್ಟು ಸರಿ. ಇದನ್ನು ನೋಡಿದರೆ ಕಾಂಗ್ರೆಸ್ ಮುಖಂಡರ ಅನುಕೂಲಕ್ಕಾಗಿ ಇಂತಹ ಕಾಮಗಾರಿಯನ್ನು ಮಾಡಲು ಮುಂದಾಗಲಾಗಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜೊತೆಗೆ ರಾಜಾಸೀಟಿನಲ್ಲಿರುವ ಗುಂಬಜ್ ಪಾರಂಪರಿಕ ಕಟ್ಟಡವಾಗಿದ್ದು, ಅದರಿಂದ 100 ಮೀಟರ್ ಅಂತರದಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಆದರೂ ಗ್ಲಾಸ್ ಬ್ರಿಡ್ಜ್ ಮಾಡುತ್ತಿರುವ ಉದ್ದೇಶವೇನು ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಅಭಿವೃದ್ಧಿಗಾಗಿ ಗ್ಲಾಸ್ ಬ್ರಿಡ್ಜ್ ಮಾಡುವುದು ಅಗತ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಗ್ಲಾಸ್ ಬ್ರಿಡ್ಜ್ ಮಾಡಿದರೆ ಕೊಡಗಿನ ಪ್ರವಾಸೋದ್ಯಮಕ್ಕೆ ಇನ್ನಷ್ಟು ಅನುಕೂಲವಾಗಲಿದೆ.
ಹಿಂದೆ ರಾಜಾಸೀಟಿನಲ್ಲಿ ಟಾಯ್ ಟ್ರೈನ್ ಇತ್ತು. ಸಾಕಷ್ಟು ಆಟಿಕೆಗಳು ಇದ್ದವು. ಇದು ರಾಜಾಸೀಟಿಗೆ ಬರುವ ಪ್ರವಾಸಿಗರಿಗೆ ಆಕರ್ಷಣೀಯ ಎನಿಸುತಿತ್ತು. ಇದರಿಂದ ಗ್ಲಾಸ್ ಬ್ರಿಡ್ಜ್ ಮಾಡಿದರೆ ಕೊಡಗಿನ ಪ್ರವಾಸೋದ್ಯಮಕ್ಕೆ ದೊಡ್ಡ ಅನುಕೂಲ ಆಗಲಿದೆ. ಇದನ್ನು ಮಾಡಿದರೆ ತಪ್ಪೇನು ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಮಡಿಕೇರಿಯ ರಾಜಾಸೀಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಗ್ಲಾಸ್ ಬ್ರಿಡ್ಜ್ ಮಾಡುತ್ತಿರುವುದು ಸಾಕಷ್ಟು ಪರವಿರೋಧದ ಚರ್ಚೆಗೆ ಗ್ರಾಸವಾಗಿದೆ.
