ಬೆಂಗಳೂರು(ಜು.17): ಕೊರೋನಾ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಘೋಷಿಸಿರುವ ಲಾಕ್‌ಡೌನ್‌ಗೆ ಗುರುವಾರದಂದು ಜನರ ಸ್ಪಂದನೆ, ಪೊಲೀಸರ ಬಿಗಿ ಕ್ರಮದಿಂದಾಗಿ ಬಹುತೇಕ ಯಶಸ್ವಿಯಾಗಿದೆ. ಇದೇವೇಳೆ ದಕ್ಷಿಣ ಕನ್ನಡ, ಯಾದಗಿರಿ ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿದ ಮಳೆಯೇ ಜನರನ್ನು ಮನೆಯೊಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

"

ಬೆಂಗಳೂರು, ಧಾರವಾಡ, ಕಲಬುರಗಿ, ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಘೋಷಿಸಲ್ಪಟ್ಟಮೊದಲ ದಿನವಾದ ಬುಧವಾರ ಜನ ಬೇಕಾಬಿಟ್ಟಿಯಾಗಿ ತಿರುಗಾಡಿದ್ದರಿಂದ ಲಾಕ್‌ಡೌನ್‌ ಉದ್ದೇಶವೇ ಗಾಳಿಗೆ ತೂರಲ್ಪಟ್ಟಿತ್ತು. ಆದರೆ ಗುರುವಾರ ಲಾಕ್‌ಡೌನ್‌ ಪ್ರಾರಂಭವಾಗಿರುವ ದಕ್ಷಿಣ ಕನ್ನಡ, ಯಾದಗಿರಿ, ಬೀದರ್‌ ಜಿಲ್ಲೆಗಳೂ ಸೇರಿದಂತೆ ಅಷ್ಟೂಕಡೆ ಪೊಲೀಸರು ಜಾಗೃತರಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ಜನಸಂಚಾರ, ವಾಹನ ಸಂಚಾರ ನಿಯಂತ್ರಣಕ್ಕೆ ಬಂತು.

ಇನ್ನು 6-7 ತಿಂಗಳಲ್ಲಿ ಕೊರೋನಾ ತಾರಕಕ್ಕೆ, ಎಚ್ಚರಿಕೆ ಅನಿವಾರ್ಯ: ಆರ್‌.ಅಶೋಕ್‌

ಬೆಂಗಳೂರು ನಗರದಲ್ಲಿ ಪೊಲೀಸರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಮೊದಲ ದಿನ ಲಾಕ್‌ಡೌನ್‌ ಕಟ್ಟು ನಿಟ್ಟಾಗಿ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಆದರೆ ಗುರುವಾರ ಪೊಲೀಸ್‌ ಇಲಾಖೆ ಅನೇಕ ಕಡೆ ಸ್ವಯಂಸೇವಕರನ್ನು ನೇಮಕ ಮಾಡಿಕೊಂಡು ಅವರ ಮೂಲಕ ಬಿಗಿಯಾಗಿ ಲಾಕ್‌ಡೌನ್‌ ಜಾರಿಗೆ ಯತ್ನಿಸಿ ಯಶಸ್ವಿಯಾದರು.

ಧಾರವಾಡ ಜಿಲ್ಲೆಯಲ್ಲೂ ಗುರುವಾರ ಜನರ ಓಡಾಟ ಸಂಪೂರ್ಣ ಸ್ತಬ್ಧವಾಗಿತ್ತು. ನಿರಂತರ ಮಳೆಯಿಂದಾಗಿಯೂ ಜನ ಹೊರ ಬರದೇ ಮನೆಯಲ್ಲಿಯೇ ಬೆಚ್ಚಗೆ ಕೂತರು. ಪೊಲೀಸರೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು ಮಳೆಯ ಮಧ್ಯೆಯೇ ಅನವಶ್ಯಕವಾಗಿ ಅಲೆದಾಡುತ್ತಿದ್ದ ಯುವಕರ ಬೈಕ್‌ ಹಾಗೂ ಕಾರುಗಳನ್ನು ವಶಪಡಿಸಿಕೊಂಡರು.

ಕರ್ತವ್ಯ ಬಹಿಷ್ಕರಿಸಿದ ಆಯುಷ್‌ ವೈದ್ಯರು: 2000 ಸರ್ಕಾರಿ ವೈದ್ಯರಿಂದ ರಾಜೀನಾಮೆ

ಬೆಳಗಾವಿ ಜಿಲ್ಲೆಯಲ್ಲಿ ಲಾಕ್‌ಡೌನ್‌ ಹೇರಲ್ಪಟ್ಟಿರುವ 5 ತಾಲೂಕುಗಳಾದ ಗೋಕಾಕ್‌, ಅಥಣಿ, ಮೂಡಲಗಿ, ಕಾಗವಾಡ, ನಿಪ್ಪಾಣಿ ತಾಲೂಕುಗಳಲ್ಲಿ ಬುಧವಾರ ಜನಸಂಚಾರ ಅಧಿಕವಾಗಿದ್ದರೂ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಮನೆಗಳಲ್ಲಿ ಉಳಿದುಕೊಂಡದ್ದರಿಂದ ಪೊಲೀಸರಿಗೆ ಹೆಚ್ಚು ಶ್ರಮ ಪಡಬೇಕಾದ ಪ್ರಮೇಯ ಒದಗಲಿಲ್ಲ.

ಗುರುವಾರ ಲಾಕ್‌ಡೌನ್‌ ಜಾರಿಗೊಂಡ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಮೊದಲ ದಿನ ಬೆಳಗ್ಗೆ 8ರಿಂದ 11 ಗಂಟೆವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ಇದ್ದರೂ ಜನತೆ ಮನೆಯಿಂದ ಹೊರಗೆ ಬಂದಿಲ್ಲ. ಇದೇವೇಳೆ ಮಧ್ಯಾಹ್ನ ವರೆಗೆ ಧಾರಾಕಾರ ಮಳೆ ಸುರಿದಿದ್ದರಿಂದ ವಾಹನ ಸಂಚಾರವೂ ಅತಿ ವಿರಳವಾಗಿತ್ತು.

ಇಂದಿನಿಂದ ಅಮೆರಿಕ, ಫ್ರಾನ್ಸ್‌ಗೆ ವಿಮಾನ ಸಂಚಾರ ಆರಂಭ

ಇದೇವೇಳೆ ಗುರುವಾರ ಲಾಕ್‌ಡೌನ್‌ ಜಾರಿಯಾಗಿರುವ ಮತ್ತೊಂದು ಜಿಲ್ಲೆಯಾದ ಯಾದಗಿರಿ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಮಧ್ಯಾಹ್ನವರೆಗೆ ಮಾರುಕಟ್ಟೆಗಳಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ಆದರೆ ಮಧ್ಯಾಹ್ನ ಬಳಿಕ ಪೊಲೀಸರು ಲಾಠಿ ಬೀಸಿದ್ದರಿಂದ ಜನಸಂಚಾರ, ವಾಹನ ಸಂಚಾರ ಕಡಿಮೆಯಾಯಿತು. ಬೀದರ್‌ ಜಿಲ್ಲೆಯಲ್ಲೂ ಮಿಶ್ರ ಪ್ರತಿಕ್ರಿಯೆ ದೊರಕಿದ್ದು ಜಿಲ್ಲಾ ಕೇಂದ್ರ ಬೀದರ್‌, ಬಸವ ಕಲ್ಯಾಣ, ಔರಾದ್‌ಗಳಲ್ಲಿ ವಾಹನ ದಟ್ಟಣೆ ಎಂದಿನಂತೆಯೇ ಇತ್ತು. ಈ ವೇಳೆ ಅನಗತ್ಯವಾಗಿ ರಸ್ತೆಳಿದವರ ತಡೆಯಲು ಪೊಲೀಸರು ಪ್ರಯಾಸಪಟ್ಟರು. ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲೂ ಜನ- ವಾಹನ ಸಂಚಾರ ನಿಯಂತ್ರಿಸಲು ಪೊಲೀಸರು ಪರದಾಡಿದ್ದಾರೆ.

ಏತನ್ಮಧ್ಯೆ ಉಡುಪಿ ಜಿಲ್ಲಾಡಳಿತ ಜಿಲ್ಲೆಯ ಗಡಿಗಳನ್ನು ಗುರುವಾರಿಂದ 14 ದಿನ ಸಂಪೂರ್ಣ ಸೀಲ್‌ಡೌನ್‌ ಮಾಡಿದ್ದು ಜಿಲ್ಲೆಯೊಳಗೆ ಬಸ್ಸುಗಳ ಓಡಾಟವನ್ನು ಸಂಪೂರ್ಣ ನಿಲ್ಲಿಸಿದೆ.

350ಕ್ಕೂ ಅಧಿಕ ವಾಹನ ಜಪ್ತಿ

ಧಾರವಾಡ/ಬೆಂಗಳೂರು: ಬೆಂಗಳೂರು, ಧಾರವಾಡ, ರಾಯಚೂರು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದ ಸುಮಾರು 350ಕ್ಕೂ ಅಧಿಕ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ 100ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಧಾರವಾಡದಲ್ಲಿ 54 ಬೈಕ್‌ ಜಪ್ತಿ ಮಾಡಲಾಗಿದೆ. ಮಾಸ್ಕ್‌ ಧರಿಸದೆ ಇರುವುದು, ಇತರ ನಿಯಮ ಪಾಲನೆ ಮಾಡದವರ ಮೇಲೆ 130 ಕೇಸ್‌ ದಾಖಲಿಸಲಾಗಿದೆ. . 13 ಸಾವಿರ ದಂಡ ವಿಧಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ 264 ಬೈಕ್‌, 20 ಕಾರು, 15 ಆಟೋ ಜಪ್ತಿ ಮಾಡಿರುವ ಪೊಲೀಸರು 52 ಸಾವಿರ ದಂಡ ಕಟ್ಟಿಸಿಕೊಂಡಿದ್ದಾರೆ.