ಬೆಂಗಳೂರು :  ಎತ್ತಿನಹೊಳೆ ಯೋಜನೆ ಮೂಲಕ ಬಯಲು ಸೀಮೆ ಜಿಲ್ಲೆಗಳಿಗೆ ಹರಿಸುವ ನೀರು ಮಾರ್ಗಮಧ್ಯೆ ಎಲ್ಲೂ ಸೋರಿಕೆ, ದುರುಪಯೋಗವಾಗದಂತೆ ಕಾನೂನು ರೂಪಿಸಲಾ ಗುವುದು.  ಹಂತ ಹಂತವಾಗಿ ಇತರೆ ಎಲ್ಲಾ ನೀರಾವರಿ ಮತ್ತು ಕುಡಿಯುವ ನೀರು ಯೋಜನೆ ಗಳಿಗೂ ವಿಸ್ತರಿಸಲಾಗುವುದು. ಅಗತ್ಯ ಕಾನೂನು ರೂಪಿಸಲು ಸಮಿತಿ ರಚಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. 

ರಾಷ್ಟ್ರೀಯ ಜಲಮಿಷನ್ ಹಾಗೂ ಕೇಂದ್ರ ಮತ್ತು ರಾಜ್ಯ ಜಲಸಂಪನ್ಮೂಲ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹೆಬ್ಬಾಳದ ಜಿಕೆವಿಕೆ ಕ್ಯಾಂಪಸ್‌ನ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜಿಸಿದ್ದ ‘ಅಂತರ್ಜಲ ಶೋಷಿತ ಪ್ರದೇಶ ಗಳಲ್ಲಿ ನೀರಿನ ಸಂರಕ್ಷಣೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 

ಉ.ಕರ್ನಾಟಕ, ಹಳೇ ಮೈಸೂರು, ಮಲೆನಾಡುಗಳಲ್ಲಿ ನೀರಾವರಿಗೆ ನದಿ ಮೂಲಗಳಿವೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ನೀರಾವರಿ ಮೂಲಗಳಿಲ್ಲ. ಹಾಗಾಗಿ ಕುಡಿಯುವ ನೀರು ಪೂರೈಸಲು 18 ಸಾವಿರ ಕೋಟಿ ರು. ವೆಚ್ಚದಲ್ಲಿ ಎತ್ತಿನಹೊಳೆ ನೀರು ತರಲಾಗುತ್ತಿದೆ ಎಂದು ಹೇಳಿದರು.