ಕೆಂಪೇಗೌಡ ಥೀಮ್ ಪಾರ್ಕ್‌ಗೆ ನಾಳೆಯಿಂದ ಮಣ್ಣು ಸಂಗ್ರಹ: ಸಚಿವ ಅಶ್ವತ್ಥ್ ನಾರಾಯಣ
ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬರುವ ನ.11ರಂದು ಲೋಕಾರ್ಪಣೆ ಮಾಡಲಿದ್ದಾರೆ.
ಬೆಂಗಳೂರು (ಅ.20): ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬರುವ ನ.11ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡರ ಥೀಮ್ ಪಾರ್ಕ್ಗೆ ಬಳಸುವ ಉದ್ದೇಶದಿಂದ ನಡೆಸಲಿರುವ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಚಾಲನೆ ನೀಡಲಿದ್ದಾರೆ. ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ವಿಷಯ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶುಕ್ರವಾರದಿಂದ ನ.7ರವರೆಗೆ ರಾಜ್ಯಾದ್ಯಂತ ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನ ನಡೆಯಲಿದ್ದು, ಇದಕ್ಕೆ ಸಿದ್ಧವಾಗಿರುವ 20 ನಾಡಪ್ರಭು ಕೆಂಪೇಗೌಡ ರಥಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ಸೂಕ್ತ ಸಮಿತಿಗಳನ್ನು ರಚಿಸಲಾಗಿದೆ. ಈ ರಥಗಳು ಆಯಾಯ ಪ್ರದೇಶ/ಜಿಲ್ಲೆಗಳನ್ನು ಪ್ರವೇಶಿಸಿದಾಗ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ
ಅಭಿಯಾನದ ಪ್ರಯುಕ್ತ ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಣಿ, ಪುಣ್ಯ ಪುರುಷರ ಸಮಾಧಿ ಸ್ಥಳಗಳಿಂದ ಪವಿತ್ರವಾದ ಮಣ್ಣನು ಸಂಗ್ರಹಿಸಲಾಗುವುದು. ಪ್ರತಿಯೊಂದು ರಥದ ಮಾರ್ಗನಕ್ಷೆಯನ್ನೂ ಸಿದ್ದಪಡಿಸಲಾಗಿದೆ. ಆಯಾಯ ಜಿಲ್ಲೆಗಳಲ್ಲಿ ಧಾರ್ಮಿಕ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು, ಪ್ರಗತಿಪರ ರೈತರು, ಸ್ವಸಹಾಯ ಸಂಘಗಳ ಸದಸ್ಯರು, ಹಿರಿಯ ನಾಗರಿಕರು, ಹಾಲು ಉತ್ಪಾದಕರ ಒಕ್ಕೂಟಗಳು, ಕೈಗಾರಿಕಾ ಸಂಘಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪವಿತ್ರ ಮೃತ್ತಿಕೆಯನ್ನು ವಿಮಾನ ನಿಲ್ದಾಣ ಆವರಣದಲ್ಲಿ ಅಭಿವೃದ್ಧಿಪಡಿಸುತ್ತಿರುವ 23 ಎಕರೆ ವಿಶಾಲವಾದ ಕೆಂಪೇಗೌಡ ಥೀಮ್ ಪಾರ್ಕ್ನಲ್ಲಿ ಬಳಸಿಕೊಳ್ಳಲಾಗುವುದು. ಇಡೀ ಕಾರ್ಯಕ್ರಮ ಮತ್ತು ಅಭಿಯಾನಗಳು ಪಕ್ಷಾತೀತವಾದ ಕಾರ್ಯಕ್ರಮವಾಗಿರಲಿದೆ. ಇಂತಹದೊಂದು ಭವ್ಯ ಪ್ರತಿಮೆಯನ್ನು ಸ್ಥಾಪಿಸಬೇಕು ಎನ್ನವು ಬೇಡಿಕೆ ಹಲವು ವರ್ಷಗಳಿಂದ ಇತ್ತು ಎಂದರು. ಅಭಿಯಾನವನ್ನು ಯಶಸ್ವಿಯಾಗಿ ನಡೆಸುವ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಅಗತ್ಯ ಸಲಹೆ, ಸೂಚನೆಗಳನ್ನು ಕೊಡಲಾಗಿದೆ. ಇದಕ್ಕೆ ಜಿಲ್ಲಾಪಂಚಾಯತ್ ಸಿಇಒಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ.
ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅವರಿಗಿದ್ದ ದೂರದೃಷ್ಟಿಯನ್ನು ಗೌರವಿಸಿ, 108 ಅಡಿ ಎತ್ತರದ ಪ್ರತಿಮೆಯನ್ನು ಪ್ರಗತಿ ಪ್ರತಿಮೆ ಎಂದು ನಾಮಕರಣ ಮಾಡಲಾಗಿದೆ. ಜಗತ್ತಿನ ಯಾವ ನಗರದ ವಿಮಾನ ನಿಲ್ದಾನದಲ್ಲಿಯೂ ಅಲ್ಲಿನ ಸಂಸ್ಥಾಪಕರ ಪ್ರತಿಮೆ ಇಲ್ಲ. ಇನ್ನು ಮುಂದೆ, ಬೆಂಗಳೂರು ವಿಮಾನ ನಿಲ್ದಾಣ ಸಮುಚ್ಛಯದಲ್ಲಿ ಕೆಂಪೇಗೌಡರ ಪ್ರತಿಮೆ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರ ಆಯುಕ್ತ ವಿನಯ್ ದೀಪ್, ಸದಸ್ಯರಾದ ತಲಕಾಡು ಚಿಕ್ಕರಂಗೇಗೌಡ, ಗಂಗಹನುಮಯ್ಯ ಉಪಸ್ಥಿತರಿದ್ದರು.
ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ನ.30 ಕೊನೆ ದಿನ: ಸಚಿವ ಅಶ್ವತ್ಥ್ ನಾರಾಯಣ
ಮೃತ್ತಿಕೆ ಸಂಗ್ರಹಕ್ಕೆ ದೇವೇಗೌಡರಿಗೆ ಆಹ್ವಾನ: ಕೆಂಪೇಗೌಡರ ಥೀಮ್ ಪಾರ್ಕ್ಗೆ ಬಳಸುವ ಉದ್ದೇಶದಿಂದ ನಡೆಸಲಿರುವ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನದ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಆಹ್ವಾನ ನೀಡಲಾಗಿದೆ. ಸಚಿವ ಅಶ್ವತ್ಥನಾರಾಯಣ ಅವರು ಬುಧವಾರ ದೇವೇಗೌಡರ ನಿವಾಸಕ್ಕೆ ತೆರಳಿ ಶುಕ್ರವಾರ ನಡೆಯಲಿರುವ ಸಮಾರಂಭಕ್ಕೆ ಸಂಬಂಧಿಸಿದ ಆಹ್ವಾನ ಪತ್ರ ನೀಡಿದರು.