ನ್ಯಾಯಾಲಯದ ತಡೆ ಹೊರತಾಗಿಯೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಬೆಳಗ್ಗೆ ಆರಂಭವಾಗಿದ್ದ ರಾಜ್ಯ ಸಾರಿಗೆ ಬಸ್ ನೌಕರರ ಮುಷ್ಕರ 10 ತಾಸಿನ ಬಳಿಕ ಅಂತ್ಯಗೊಂಡಿದೆ.
ಬೆಂಗಳೂರು (ಆ.06): ನ್ಯಾಯಾಲಯದ ತಡೆ ಹೊರತಾಗಿಯೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಬೆಳಗ್ಗೆ ಆರಂಭವಾಗಿದ್ದ ರಾಜ್ಯ ಸಾರಿಗೆ ಬಸ್ ನೌಕರರ ಮುಷ್ಕರ 10 ತಾಸಿನ ಬಳಿಕ ಅಂತ್ಯಗೊಂಡಿದೆ. ಮುಷ್ಕರದ ವಿರುದ್ಧ ಹೈಕೋರ್ಟ್ ತೀವ್ರ ಚಾಟಿ ಬೀಸಿದ ಕಾರಣ, ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಸಂಜೆಯ ಹೊತ್ತಿಗೆ ಮುಷ್ಕರ ಹಿಂಪಡೆದಿದೆ.
‘ನ್ಯಾಯಾಲಯದ ನಿರ್ದೇಶದನ ಹೊರತಾಗಿಯೂ ಸಾರಿಗೆ ನೌಕರರ ಸಂಘಟನೆ ಮುಷ್ಕರಕ್ಕಿಳಿದು ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡಿದೆ. ಒಂದು ವೇಳೆ ಮುಷ್ಕರ ನಿಲ್ಲಿಸದಿದ್ದರೆ ಪದಾಧಿಕಾರಿಗಳನ್ನು ಬಂಧಿಸಲು ಸೂಚಿಸುತ್ತೇವೆ’ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮಧ್ಯಾಹ್ನ 3.40ರ ವೇಳೆಗೆ ಅನಿವಾರ್ಯವಾಗಿ ಮುಷ್ಕರ ಹಿಂಪಡೆಯಲಾಯಿತು. ಅಲ್ಲಿಯವರೆಗೆ ಅಂದರೆ ಸುಮಾರು 10 ತಾಸು ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿ, ರಾಜ್ಯಾದ್ಯಂತ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸಬೇಕಾಯಿತು.
ಈ ಮಧ್ಯೆ, ಸಾರಿಗೆ ನೌಕರರ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಮುಷ್ಕರದ ಮೇಲೆ ಸೋಮವಾರ ವಿಧಿಸಿದ್ದ ಒಂದು ದಿನದ ನಿರ್ಬಂಧವನ್ನು ಆ.7ರವರೆಗೆ ವಿಸ್ತರಿಸಿ ಸ್ಪಷ್ಟ ನಿರ್ದೇಶನ ನೀಡಿದೆ ಹಾಗೂ 8ರಂದು ಮತ್ತೆ ವಿಚಾರಣೆ ನಡೆಸುವುದಾಗಿ ಹೇಳಿದೆ. ಅಷ್ಟರಲ್ಲಿ ಒಂದು ವೇಳೆ ಮುಷ್ಕರ ಮುಂದುವರೆಸಿದರೆ ಎಸ್ಮಾ ಕಾಯ್ದೆಯಡಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದೂ ಸೂಚಿಸಿದೆ. ಹೀಗಾಗಿ ಸಾರ್ವಜನಿಕರ ಸಾರಿಗೆ ನೆಚ್ಚಿಕೊಂಡಿರುವ ನಾಗರಿಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ರಾಜ್ಯಾದ್ಯಂತ ಬಸ್ ಇಲ್ಲದೆ ಜನ ಪರದಾಟ: ಸಂಬಳ ಹೆಚ್ಚಳ, ಬಾಕಿ ವೇತನ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮದ ನೌಕರರು ಮಂಗಳವಾರ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುಷ್ಕರ ಸ್ಥಗಿತ ಘೋಷಣೆ ಕಾರಣ ಮಧ್ಯಾಹ್ನದ ನಂತರ ಬಸ್‌ಗಳ ಓಡಾಟ ಸಹಜ ಸ್ಥಿತಿಗೆ ಮರಳಿತಾದರೂ, ಬೆಳಗ್ಗೆ ರಾಜ್ಯದ ಬಹುತೇಕ ಕಡೆ ಪ್ರಯಾಣಿಕರು ಪರದಾಡುವಂತಾಯಿತು. ಇದನ್ನೇ ಬಂಡವಾಳ ಮಾಡಿಕೊಂಡ ಆಟೋ ಚಾಲಕರು, ಖಾಸಗಿ ಬಸ್ಸುಗಳು ಕೆಲವೆಡೆ ಹೆಚ್ಚಿನ ಹಣ ವಸೂಲು ಮಾಡುತ್ತಿದ್ದುದು ಕಂಡು ಬಂತು.
ಮಧ್ಯೆ, ಕೋಲಾರ, ಗದಗ ಹಾಗೂ ಕೊಪ್ಪಳ ಜಿಲ್ಲೆಯ ಕುಕನೂರುಗಳಲ್ಲಿ ಬಸ್‌ಗಳಿಗೆ ಕಲ್ಲು ತೂರಿದ ಘಟನೆಗಳೂ ವರದಿಯಾಗಿವೆ. ಇದೇ ವೇಳೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
