Asianet Suvarna News Asianet Suvarna News

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ದಿಢೀರ್ ವರ್ಗಾವಣೆ: ಪ್ರಭಾವಿ ಸಚಿವರೊಬ್ಬರ ಒತ್ತಡವಿದೆಯಾ?

ವರ್ಗಾವಣೆ ಹಿಂದೆ ಪ್ರಭಾವಿ ಸಚಿವರೊಬ್ಬರ ಒತ್ತಡವಿದೆ ಎಂಬ ಮಾತು ನೌಕರರ ವಲಯದಲ್ಲಿ ಕೇಳಿಬರುತ್ತಿದೆ. ಷಡಾಕ್ಷರಿ ಅವರು ಜಿಲ್ಲಾಧ್ಯಕ್ಷರಾದ ಬಳಿಕ ಹಾಗೂ ರಾಜ್ಯಾಧ್ಯಕ್ಷರಾದ ಬಳಿಕ ಸರ್ಕಾರಿ ನೌಕರರಿಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ, ನೌಕರರ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೇ ಕಾರಣಕ್ಕೆ ಹಲವರ ವಿರೋಧವನ್ನೂ ಕಟ್ಟಿಕೊಂಡಿದ್ದರು.

State President of Government Employees Union Shadakshari Sudden Transfer grg
Author
First Published Nov 9, 2023, 7:31 AM IST

ಶಿವಮೊಗ್ಗ(ನ.09):  ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರನ್ನು ಸರ್ಕಾರ ದಿಢೀರನೆ ಕೋಲಾರಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದ್ದು, ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರನ್ನು ಆ ಹುದ್ದೆಯಲ್ಲಿ ಇರುವಾಗಲೇ ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆ ಪ್ರಭಾವಿ ಸಚಿವರೊಬ್ಬರ ಒತ್ತಡವಿದೆ ಎಂಬ ಮಾತು ನೌಕರರ ವಲಯದಲ್ಲಿ ಕೇಳಿಬರುತ್ತಿದೆ. ಷಡಾಕ್ಷರಿ ಅವರು ಜಿಲ್ಲಾಧ್ಯಕ್ಷರಾದ ಬಳಿಕ ಹಾಗೂ ರಾಜ್ಯಾಧ್ಯಕ್ಷರಾದ ಬಳಿಕ ಸರ್ಕಾರಿ ನೌಕರರಿಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ, ನೌಕರರ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೇ ಕಾರಣಕ್ಕೆ ಹಲವರ ವಿರೋಧವನ್ನೂ ಕಟ್ಟಿಕೊಂಡಿದ್ದರು.

ಎಲ್ಲದಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದಶಿಯಾಗಿದ್ದ ಬಳಿಕ, ಅದನ್ನು ತೊರೆದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾದರು. ಆದರೆ, ತಮ್ಮ ವಿಶ್ವಾಸ ಮತ್ತು ಸಂಬಂಧವನ್ನು ಯಡಿಯೂರಪ್ಪ ಕುಟುಂಬದ ಜೊತೆ ಹಾಗೆಯೇ ಉಳಿಸಿಕೊಂಡಿದ್ದರು. ಬಹುಶಃ ಇದು ಕೆಲವರ ಕೆಂಗಣ್ಣಿಗೆ ಗುರಿ ಆಗಿರಬಹುದು ಎಂಬ ಶಂಕೆ ನೌಕರರ ವಲಯದಲ್ಲಿದೆ.

ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ಅಧಿಕಾರಿಗಳೇ ಇಲ್ಲ: 2.58 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ, ಭರ್ತಿ ಯಾವಾಗ ?

ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಕುಮಾರ್ ಬಂಗಾರಪ್ಪ ಅವರು ಸರ್ಕಾರಿ ನೌಕರರ ವಿರುದ್ಧ ತಮ್ಮ ನಡೆ ಮುಂದುವರಿಸಿದಾಗ ಅವರನ್ನು ಷಡಾಕ್ಷರಿ ಎದುರು ಹಾಕಿಕೊಂಡಿದ್ದರು. ಇದೇ ಕಾರಣಕ್ಕೆ ಸಾಕಷ್ಟು ಜಟಾಪಟಿಯೂ ನಡೆದಿತ್ತು. ಕುಮಾರ್ ಬಂಗಾರಪ್ಪ ಅವರು ನೇರವಾಗಿ ಷಡಾಕ್ಷರಿ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದರು. ಇದಕ್ಕೆ ಷಡಾಕ್ಷರಿ ಕೂಡ ತಮ್ಮ ಮಿತಿಯಲ್ಲಿ ಕೌಂಟರ್ ನೀಡಿದ್ದರು. ಇದರ ಪರಿಣಾಮ ಸೊರಬ ವಿಧಾನಸಭಾ ಚುನಾವಣೆಯ ಮೇಲೆ ಬಿದ್ದಿತ್ತು. ಸರ್ಕಾರಿ ನೌಕರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮತವನ್ನು ಮಧು ಬಂಗಾರಪ್ಪ ಪರ ಚಲಾಯಿಸಿದ್ದು ಫಲಿತಾಂಶದ ವಿಶ್ಲೇಷಣೆ ವೇಳೆ ಹೊರಬಿದ್ದಿತ್ತು.

ಹೊಸ ಸರ್ಕಾರ ಕೆಂಗಣ್ಣು:

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಷಡಾಕ್ಷರಿ ಅವರ ವಿರುದ್ಧ ಕೆಂಗಣ್ಣು ಬೀರಿದ್ದು ಹಲವು ಬಾರಿ ಕಾಣಿಸಿತ್ತು. ವೇತನ ಆಯೋಗ ರಚನೆ ವಿಚಾರ ಬಜೆಟ್‌ನಲ್ಲಿ ಪ್ರಸ್ತಾಪವಾಗದೇ ಇದ್ದಾಗ, ಸರ್ಕಾರಿ ನೌಕರರು ಮುಷ್ಕರಕ್ಕೆ ಇಳಿದಿದ್ದರು. ಈ ವೇಳೆಯಲ್ಲಿ ಸರ್ಕಾರ ಮತ್ತು ನೌಕರರ ಸಂಘದ ನಡುವೆ ಬಿಸಿಯಾದ ವಾತಾವರಣ ಉಂಟಾಗಿದ್ದು, ಬಳಿಕ ಎಲ್ಲವೂ ತಿಳಿಯಾಗಿತ್ತು.

ಆರೋಪಗಳ ಹಿನ್ನೆಲೆ ವರ್ಗಾವಣೆ?:

ಇತ್ತ ಶಿವಮೊಗ್ಗದಲ್ಲಿ ಕೆಲವು ಸಂಘಟನೆಗಳು ಅಬ್ಬಲಗೆರೆ ಕೆರೆಯ ಮಣ್ಣನ್ನು ಅಕ್ರಮವಾಗಿ ತೆಗೆದು ಸರ್ಕಾರದ ಬೊಕ್ಕಸಕ್ಕೆ ಸುಮಾರು ₹70 ಲಕ್ಷ ನಷ್ಟ ಉಂಟು ಮಾಡಿದ ಆರೋಪ ಷಡಾಕ್ಷರಿ ಅವರ ಮೇಲಿತ್ತು. ಆದರೆ ಜಿಲ್ಲಾಧಿಕಾರಿ ನೀಡಿದ ವರದಿಯಲ್ಲಿ ಈ ಆರೋಪವನ್ನು ನಿರಾಕರಿಸಲಾಗಿತ್ತು. ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಮಧು ಬಂಗಾರಪ್ಪ ಅವರು ಇಂತಹ ಆರೋಪಗಳ ಕಾರಣದಿಂದಾಗಿ ಷಡಾಕ್ಷರಿ ಅವರನ್ನು ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ.

ಮುಖ್ಯವಾಗಿ ಲೋಕಸಭಾ ಚುನಾವಣೆ ಈ ವರ್ಗಾವಣೆಯ ಹಿಂದೆ ಕೆಲಸ ಮಾಡಿದೆ ಎಂಬ ವಿಶ್ಲೇಷಣೆಯೂ ಕೇಳಿಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಬಿಜೆಪಿ ಅಭ್ಯರ್ಥಿ ಆಗುವುದು ಬಹುತೇಕ ಖಚಿತ. ಇತ್ತ ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಅವರನ್ನು ಸ್ಪರ್ಧೆಗೆ ಇಳಿಸುವುದು ಮಧು ಬಂಗಾರಪ್ಪ ಇರಾದೆಯಾಗಿದೆ. ಒಂದು ಪಕ್ಷ ಇವೆಲ್ಲವೂ ಅಂದುಕೊಂಡಂತೆ. ಆದರೆ, ಷಡಾಕ್ಷರಿ ಅವರು ರಾಜ್ಯ ನೌಕರರ ಸಂಘದ ಅಧ್ಯಕ್ಷರಾಗಿಯೂ ಬಿ.ವೈ. ರಾಘವೇಂದ್ರ ಪರ ಕೆಲಸ ಮಾಡಬಹುದು ಎಂಬ ಆತಂಕ ಈ ವರ್ಗಾವಣೆ ಹಿಂದೆ ಇದೆಯೇ ಎಂಬ ವಿಚಾರವೂ ಚರ್ಚೆಯಲ್ಲಿ ಕೇಳಿಬರುತ್ತಿದೆ.

ಒಟ್ಟಾರೆ ಈ ವರ್ಗಾವಣೆ ಸರ್ಕಾರಿ ನೌಕರರ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿ, ದೊಡ್ಡ ಸದ್ದು ಮಾಡುತ್ತಿದೆ.

ಷಡಾಕ್ಷರಿ ಆಗಲಿ, ಮತ್ತೊಬ್ಬರು ಆಗಲಿ ಸರ್ಕಾರ ಬಂದಾಗ ಅಧಿಕಾರಿಗಳು ಬದಲಾಗುತ್ತಾರೆ. ಒಳ್ಳೆಯ ಅಧಿಕಾರಿಗಳಿಂದ ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು. ರಾಜಕೀಯ ಕಾರಣಕ್ಕೆ ಈ ರೀತಿಯ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. 

ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರನ್ನು ವರ್ಗಾಯಿಸಲಾಗಿದೆ. ಆದರೆ, ಯಾವ ಕಾರಣಕ್ಕೆ ವರ್ಗಾಯಿಸಲಾಗಿದೆ ಎಂದು ಗೊತ್ತಿಲ್ಲ. ನನ್ನ ವರ್ಗಾವಣೆಗೆ ಯಾರು ಒತ್ತಡ ಹೇರಿದ್ದರೋ, ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಆದರೆ ನನ್ನ ಮೇಲೆ ಬಂದಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಜಿಲ್ಲಾಧಿಕಾರಿ ಅವರೇ ವರದಿ ನೀಡಿದ ಬಳಿಕವೂ ಅದೇ ಕಾರಣ ಮುಂದಿರಿಸಿರುವುದು ಎಷ್ಟು ಸರಿ? ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ. 

ನೌಕ​ರರ ಬಲಿಷ್ಠ ಹೋರಾ​ಟಕ್ಕೆ ಸರ್ಕಾರ ತಲೆ​ಬಾ​ಗ​ಬೇ​ಕಾ​ಗಿ​ದೆ: ಯಡಿ​ಯೂ​ರಪ್ಪ

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ಸರ್ಕಾರದ ತೀರ್ಮಾನ. ಸರ್ಕಾರದಲ್ಲಿ ವರ್ಗಾವಣೆ ಮಾಡಿದ್ದಾರೆ. ಅದೇನು ದೊಡ್ಡ ವಿಷಯ ಏನಲ್ಲ. ಅವರ ಮೇಲೆ ಹಗರಣಗಳ ಆರೋಪ ಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.  

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬಳಿಕ ಷಡಾಕ್ಷರಿ ಉತ್ತಮ ರೀತಿಯ ಕೆಲಸ ಮಾಡಿದ್ದಾರೆ ಮತ್ತು ಈಗಲೂ ಮುಂದುವರಿಸಿದ್ದಾರೆ. ಇಂಥವರನ್ನು ಯಾರದೋ ಮಾತು ಕೇಳಿ, ಇನ್ನಾವುದೋ ಒತ್ತಡಕ್ಕೆ ಒಳಗಾಗಿ ವರ್ಗಾವಣೆ ಮಾಡುವುದು ಸರಿಯಲ್ಲ. ಷಡಾಕ್ಷರಿ ಅವರು ಎಂದೂ, ಯಾವುದೇ ಸರ್ಕಾರಿ ನೌಕರರ ಮೇಲೆ ಯಾವುದೇ ತರಹದ ಒತ್ತಡ ಹೇರಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಸರ್ಕಾರಿ ನೌಕರ ತಿಳಿಸಿದ್ದಾರೆ. 

Follow Us:
Download App:
  • android
  • ios