ಹುದ್ದೆ ಮೇಲ್ದರ್ಜೆಗಾಗಿ ಪಿಡಿಒ ಶಕ್ತಿ ಪ್ರದರ್ಶನ
ಇಂದು ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ ಪಿಡಿಒಗಳ ಸಮಾವೇಶ ನಡೆಯುತ್ತಿದೆ. ಈ ಸಮಾವೇಶದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಿಡಿಒಗಳು ಪಾಲ್ಗೊಳ್ಳುತ್ತಿದ್ದಾರೆ.
ವರದಿ : ವಸಂತಕುಮಾರ್ ಕತಗಾಲ
ಕಾರವಾರ (ಜ.23): ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಯೋಜನೆಗಳ ಅನುಷ್ಠಾನ, ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಯನ್ನು ಮೇಲ್ದರ್ಜೆಗೆ (ಗ್ರೂಪ್ ಬಿ) ಏರಿಸುವುದು, ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟು ಹುಬ್ಬಳ್ಳಿಯಲ್ಲಿ ಶನಿವಾರ ರಾಜ್ಯದ ಪಿಡಿಒಗಳು ಸಮಾವೇಶ ನಡೆಸುತ್ತಿದ್ದಾರೆ.
ತ್ರೈಮಾಸಿಕ ಕೆಡಿಪಿ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಹಾಗೂ ಎಲ್ಲ 29 ಇಲಾಖೆಗಳ ಜತೆ ಸಮನ್ವಯ ಸಾಧಿಸಲು ಸಾಧ್ಯವಾಗುವಂತೆ ಪಿಡಿಒ ಹುದ್ದೆಯನ್ನು ಮೇಲ್ದರ್ಜೆಗೇರಿಸಬೇಕು. ಈ ಮೇಲ್ದರ್ಜೆಗೇರಿಸುವ ಕಡತ ಈ ಹಿಂದೆ ಸಚಿವ ಸಂಪುಟದ ಅನುಮೋದನೆಗೆ ಸಲ್ಲಿಕೆಯಾಗಿತ್ತು. ಅನಿವಾರ‍್ಯ ಕಾರಣಗಳಿಂದ ಸಚಿವ ಸಂಪುಟದಲ್ಲಿ ಮಂಡನೆಯಾಗಿಲ್ಲ. ಹೀಗಾಗಿ ವೇತನ ಆಯೋಗದ ವರದಿಯನ್ವಯ ಸರ್ಕಾರವು ತುರ್ತು ಕ್ರಮ ಕೈಗೊಂಡು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ.
ಗಂಡನ ಮೂಲಕ ಲಂಚಕ್ಕೆ ಬೇಡಿಕೆ: ಲೇಡಿ ಪಿಡಿಒ ಅಧಿಕಾರಿ ಎಸಿಬಿ ಬಲೆಗೆ ...
ಗ್ರಾ.ಪಂ. ಹಾಗೂ ತಾ.ಪಂ. ನಡುವೆ ಕೇವಲ 226 ಸಹಾಯಕ ನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದಾರೆ. ಯೋಜನೆಗಳ ಅನುಷ್ಠಾನ ನಿರೀಕ್ಷಿತ ವೇಗದಲ್ಲಿ ನಡೆಯಬೇಕಾದರೆ ಹೆಚ್ಚುವರಿಯಾಗಿ ಪ್ರತಿ ತಾಲೂಕಿಗೆ 2 ಸಹಾಯಕ ನಿರ್ದೇಶಕರ ಹುದ್ದೆ ಸೃಜಿಸುವ ಅವಶ್ಯಕತೆ ಇದೆ. ಇಲಾಖೆಯಲ್ಲಿ 170ಕ್ಕೂ ಹೆಚ್ಚು ಸಹಾಯಕ ನಿರ್ದೇಶಕರ ಹುದ್ದೆಗಳು ಸುಮಾರು ಎರಡು ವರ್ಷಗಳಿಂದ ಖಾಲಿ ಇವೆ. ಈ ಹುದ್ದೆಗಳಿಗೆ ಶೀಘ್ರವಾಗಿ ಮುಂಬಡ್ತಿ ನೀಡಬೇಕೆನ್ನುವುದು ಪ್ರಮುಖ ಆಗ್ರಹವಾಗಿದೆ. ಇಲಾಖೆಯ ಅಧೀನದಲ್ಲಿರುವ ಎಲ್ಲ ಕಚೇರಿಗಳಲ್ಲಿ ಒಂದೇ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಿ ಎಲ್ಲ ಅಧಿಕಾರಿ, ನೌಕರರಿಗೂ ಅವರ ಸೇವಾವಧಿಯಲ್ಲಿ ಕನಿಷ್ಠ 2 ಪದೋನ್ನತಿಗೆ ಅವಕಾಶ ಕಲ್ಪಿಸಬೇಕು ಎಂಬುದು ಪಿಡಿಒಗಳ ಮತ್ತೊಂದು ಬೇಡಿಕೆಯಾಗಿದೆ.
ಸಮಾನಾಂತರ ಹುದ್ದೆಯಾಗಲಿ:
ಪಂಚಾಯತ್ ರಾಜ್ ಕಾಯ್ದೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯು ಉಪವಿಭಾಗಾಧಿಕಾರಿ ಹುದ್ದೆಯ ಸಮಾನಾಂತರ ಹುದ್ದೆಯಾಗಿರಬೇಕು ಎಂದು ತಿಳಿಸಲಾಗಿದೆ. ಪ್ರಸ್ತುತ, ಉಪವಿಭಾಗಾಧಿಕಾರಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯ ವೇತನ ಶ್ರೇಣಿಯಲ್ಲಿ ಉಂಟಾಗಿರುವ ವೇತನ ವ್ಯತ್ಯಾಸ ಸರಿಪಡಿಸಬೇಕು. ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಖಾಲಿ ಇರುವ ಹುದ್ದೆಗಳಿಗೆ ಶೀಘ್ರವಾಗಿ ಮುಂಬಡ್ತಿ ನೀಡಬೇಕು. ಗ್ರಾಪಂಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ಕಾರ್ಯದರ್ಶಿ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ನೇಮಕಾತಿ ಮಾಡಿ ಕಾಲಮಿತಿಯೊಳಗೆ ಬಡ್ತಿ ನೀಡುವುದು ಹಾಗೂ ಅಗತ್ಯವಿರುವ ಎಲೆಕ್ಟ್ರಿಷಿಯನ್, ಡ್ರೈವರ್, ಹೆಚ್ಚುವರಿ ಸ್ವಚ್ಛತಾಗಾರರು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳ ನೇಮಕ ಮಾಡುವ ಮೂಲಕ ಗ್ರಾಪಂ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂದು ಆಗ್ರಹ ಮುಂದಿಟ್ಟಿದ್ದಾರೆ.
ಛತ್ರಿ ಹಿಡಿಸಿಕೊಂಡ PDO, ಮೈಸೂರಿನ ಕತೆ ಮೋದಿವರೆಗೆ! ...
ಇಲಾಖೆಯ ಅಧಿಕಾರಿ ಮತ್ತು ನೌಕರರ ಸಮಸ್ಯೆಗಳ ಅಧ್ಯಯನಕ್ಕಾಗಿ ಹಲವಾರು ಸಮಿತಿ ವರದಿ ನೀಡಿವೆ. ಹಲವು ಸಮಿತಿ ವರದಿಗಳ ನಿರೀಕ್ಷೆಯಲ್ಲಿದ್ದು, ಅವುಗಳನ್ನು ಶೀಘ್ರ ಜಾರಿಗೊಳಿಸಬೇಕು. ಸಣ್ಣ ಪುಟ್ಟವಿಷಯಗಳಿಗೆ ಲೋಕಾಯುಕ್ತ ಪ್ರಕರಣಗಳನ್ನು ದಾಖಲಿಸಿ ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿಸಲಾಗುತ್ತಿದೆ. ಆದುದರಿಂದ ಎಲ್ಲ ಜಿಲ್ಲೆಗಳಲ್ಲಿ ಕುಂದು-ಕೊರತೆ ನಿವಾರಣಾ ಪ್ರಾಧಿಕಾರ ರಚಿಸಬೇಕು. ಉದ್ಯೋಗ ಖಾತರಿ ಯೋಜನೆ ದಾಖಲೀಕರಣಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಕ ಮತ್ತು ಬಯೋಮೆಟ್ರಿಕ್ ಹಾಜರಾತಿ ಜಾರಿಗೊಳಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡಿದ್ದಾರೆ.
ನೌಕರರಿಗೆ ಸೂಕ್ತ ರಕ್ಷಣೆ ನೀಡಿ:
ಗ್ರಾಪಂ ಸಿಬ್ಬಂದಿ ಮತ್ತು ಪಿಡಿಒ ಮೇಲೆ ಹಲ್ಲೆ, ದೌರ್ಜನ್ಯ, ಮಾನಸಿಕ ಕಿರುಕುಳ ಹೆಚ್ಚಾಗಿ ಕರ್ತವ್ಯ ನಿರ್ವಹಿಸುವುದು ಕಷ್ಟಕರವಾಗಿದೆ. ಇದರಿಂದಾಗಿ ಸುಮಾರು 800 ಪಿಡಿಒಗಳು ತಮ್ಮ ಹುದ್ದೆ ತೊರೆದಿದ್ದಾರೆ ಹಾಗೂ ಕಾರ್ಯದೊತ್ತಡ ಮತ್ತು ವಿವಿಧ ಕಾರಣಗಳಿಂದ 100ಕ್ಕೂ ಹೆಚ್ಚು ಪಿಡಿಒಗಳು ಪ್ರಾಣ ಕಳೆದುಕೊಂಡಿರುತ್ತಾರೆ. ಇದರಿಂದ ಇಲಾಖೆ ಅಧಿಕಾರಿಗಳು ಮತ್ತು ನೌಕರರ ರಕ್ಷಣೆಗಾಗಿ ಆರೋಗ್ಯ ಇಲಾಖೆಯಲ್ಲಿನ ಅಧಿಕಾರಿ, ಸಿಬ್ಬಂದಿ ರಕ್ಷಣೆಗೆ ಇರುವ ಕಾಯ್ದೆಯನ್ನು ಜಾರಿಗೊಳಿಸಿ ಮತ್ತು ನೌಕರರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಿಶ್ಚಿತ ಪಿಂಚಣಿ ಯೋಜನೆ:
ನೌಕರರ ಸಂಧ್ಯಾ ಜೀವನಕ್ಕೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಮೊದಲಿನಂತೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಪಂಚಾಯಿತಿ ಸಿಬ್ಬಂದಿಗೆ ಮುಂಗಡವಾಗಿ 3 ತಿಂಗಳ ವೇತನವನ್ನು ಬಿಡುಗಡೆ ಮಾಡುವುದು. ಹಾಗೆಯೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಸಮಸ್ಯೆಗಳನ್ನು ಪರಿಹರಿಸುವ ಬೇಡಿಕೆ ಮುಂದಿಟ್ಟು ಸಮಾವೇಶ ನಡೆಯುತ್ತಿದೆ.
2010ರಲ್ಲಿ ರಾಜ್ಯದಲ್ಲಿ ಪಿಡಿಒ ಹುದ್ದೆಗಳನ್ನು ಸೃಜಿಸಲಾಯಿತು. ಪಿಡಿಒ ನೇಮಕಾತಿಯ ನಂತರ ಗ್ರಾಮಮಟ್ಟದ ಆಡಳಿತ ಸಾಕಷ್ಟುಸುಧಾರಿಸಿದ್ದು, ಕಾಯ್ದೆಯ ಉದ್ದೇಶವನ್ನು ಸಂಪೂರ್ಣ ಸಾಕಾರಗೊಳಿಸುವತ್ತ ಗ್ರಾಮ ಪಂಚಾಯಿತಿಗಳು ಹೆಜ್ಜೆ ಹಾಕುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜ್ಯವು, ರಾಷ್ಟ್ರ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ನಿರಂತರವಾಗಿ ಪ್ರತಿ ವರ್ಷ ಪಡೆಯುತ್ತಿದ್ದು, ಕಳೆದ 5 ವರ್ಷಗಳಿಂದ ಆಡಳಿತದಲ್ಲಿ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಇ-ಆಡಳಿತ ಪುರಸ್ಕಾರವನ್ನು ಪಡೆದುಕೊಂಡಿದೆ. ಇದಲ್ಲದೇ ರಾಷ್ಟ್ರ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ. ಇವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿ ಬೇಡಿಕೆ ಈಡೇರಿಸಿದಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಇನ್ನಷ್ಟುವೇಗವನ್ನು ಪಡೆದುಕೊಳ್ಳುವುದು ನಿಶ್ಚಿತ.
ಸಚಿವ ಈಶ್ವರಪ್ಪ ಉದ್ಘಾಟನೆ
ಹುಬ್ಬಳ್ಳಿಯ ಗೋಕುಲ ಗಾರ್ಡನ್‌ನಲ್ಲಿ ಶನಿವಾರ ಪಿಡಿಒಗಳ ರಾಜ್ಯಮಟ್ಟದ ಸಮಾವೇಶ ನಡೆಯುತ್ತಿದೆ. ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಉಪ ಸ್ವೀಕರ್ ಆನಂದ ಮಾಮನಿ, ಮಹಾಂತೇಶ ಕವಟಗಿಮಠ ಮತ್ತಿತರ ಗಣ್ಯರು ಭಾಗವಸಲಿದ್ದಾರೆ.
ಬೇಡಿಕೆ ಈಡೇರಿಸಲಿ
ಶನಿವಾರ ನಡೆಯಲಿರುವ ರಾಜ್ಯ ಮಟ್ಟದ ಸಮಾವೇಶದಲ್ಲಿ ಪಿಡಿಒ ಹುದ್ದೆಯನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತಿದ್ದೇವೆ.
-ಎಚ್.ಬೋರಯ್ಯ ಅಧ್ಯಕ್ಷರು ಪಿಡಿಒ ಕ್ಷೇಮಾಭಿವೃದ್ಧಿ ಸಂಘ
ಪ್ರಮುಖ ಬೇಡಿಕೆಗಳು
1. ಪಿಡಿಒಗಳನ್ನು ಗ್ರೂಪ್ ಬಿ ಹುದ್ದೆಗೆ ಏರಿಸಬೇಕು
2. ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಮುಂಬಡ್ತಿ ಕೊಡಬೇಕು
3. ಒಂದೇ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಬೇಕು
4. ಎಲ್ಲ ಅಧಿಕಾರಿ, ನೌಕರರಿಗೆ ಕನಿಷ್ಠ 2 ಪದೋನ್ನತಿ ನೀಡಬೇಕು
5. ಎಸಿ ಹಾಗೂ ತಾಪಂ ಇಒ ವೇತನ ಶ್ರೇಣಿ ವ್ಯತ್ಯಾಸ ಸರಿಪಡಿಸಬೇಕು
6. ಗ್ರಾಪಂಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆ ಭರ್ತಿ ಮಾಡಬೇಕು
7. ನೌಕರರ ಭದ್ರತೆ, ರಕ್ಷಣೆಗಾಗಿ ಸರ್ಕಾರ ಕಾಯ್ದೆ ಜಾರಿಗೊಳಿಸಬೇಕು