ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಸೇರಿದಂತೆ ಯಾವುದೇ ರೀತಿ ಕೋವಿಡ್‌ ಸೋಂಕಿನ ಲಕ್ಷಣಗಳು ಕಂಡುಬಂದರೆ ನಾಗರಿಕರು ತಡ ಮಾಡದೆ ಸಮೀಪದ ಫೀವರ್‌ ಕ್ಲಿನಿಕ್‌, ಕೋವಿಡ್‌ ಆಸ್ಪತ್ರೆಗೆ ತೆರಳಿ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು| ಸೋಂಕಿನ ತ್ವರಿತ ಪತ್ತೆಗೆ ಆರ್‌ಟಿಪಿಸಿಆರ್‌ ಪರೀಕ್ಷೆಗಿಂತ ರ‍್ಯಾಪಿಡ್ ಆ್ಯಂಟಿಜನ್‌ ಟೆಸ್ಟ್‌ ಬಹಳ ಪರಿಣಾಮಕಾರಿ|

ಬೆಂಗಳೂರು(ಆ.24): ಕೋವಿಡ್‌ ಪರೀಕ್ಷೆಗೆ ನಾಗರಿಕರು ಯಾವುದೇ ಕಾರಣಕ್ಕೂ ಭಯ, ಆತಂಕ ಪಡಬಾರದು. ಹೆಚ್ಚು ಪರೀಕ್ಷೆಗಳ ಮೂಲಕ ತ್ವರಿತವಾಗಿ ಸೋಂಕು ಪತ್ತೆಯಾದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತು ಆದಷ್ಟು ಬೇಗ ಈ ಹೆಮ್ಮಾರಿಯನ್ನು ಹೊಡೆದೊಡಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಕೋವಿಡ್‌ ಪರೀಕ್ಷಾ ಉಸ್ತುವಾರಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಮನವಿ ಮಾಡಿದ್ದಾರೆ. 

ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಸೇರಿದಂತೆ ಯಾವುದೇ ರೀತಿ ಕೋವಿಡ್‌ ಸೋಂಕಿನ ಲಕ್ಷಣಗಳು ಕಂಡುಬಂದರೆ ನಾಗರಿಕರು ತಡ ಮಾಡದೆ ಸಮೀಪದ ಫೀವರ್‌ ಕ್ಲಿನಿಕ್‌, ಕೋವಿಡ್‌ ಆಸ್ಪತ್ರೆಗೆ ತೆರಳಿ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಸೋಂಕಿನ ತ್ವರಿತ ಪತ್ತೆಗೆ ಆರ್‌ಟಿಪಿಸಿಆರ್‌ ಪರೀಕ್ಷೆಗಿಂತ ರ‍್ಯಾಪಿಡ್ ಆ್ಯಂಟಿಜನ್‌ ಟೆಸ್ಟ್‌ ಬಹಳ ಪರಿಣಾಮಕಾರಿ. ಮೂಗಿನ ದ್ರವದ ಮಾದರಿ ಸಂಗ್ರಹಿಸಿ ನಡೆಸುವ ಈ ಪರೀಕ್ಷೆಯನ್ನು ಮಾದರಿ ಸಂಗ್ರಹಿಸಿದ ಒಂದು ಗಂಟೆಯೊಳಗೆ ಮಾಡಿ ಮುಗಿಸಬೇಕು. ಇದರ ವರದಿ ಕೇವಲ ಅರ್ಧಗಂಟೆಯಲ್ಲಿ ಸಿಗಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು: ಎರಡು ತಿಂಗಳ ಬಳಿಕ ಕೊರೋನಾ ಸಾವಿನ ಸಂಖ್ಯೆ ಒಂದಂಕಿಗೆ ಇಳಿಕೆ

ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆ ಜನವಸತಿ ಪ್ರದೇಶಗಳಿಗೂ ತೆರಳಿ ನಡೆಸಬಹುದಾಗಿದೆ. ಈಗಾಗಲೇ ಸರ್ಕಾರ ರಾರ‍ಯಂಡಮ್‌ ಪರೀಕ್ಷೆಗಳನ್ನು ನಡೆಸುತ್ತಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಈ ಪರೀಕ್ಷೆ ಖಚಿತ ನಿರ್ಣಾಯಕ ಪರೀಕ್ಷೆ ಎಂದು ಹೇಳಲಾಗುವುದಿಲ್ಲವಾದರೂ ಮೊದಲ ಹಂತದ ಪರೀಕ್ಷೆಯಾಗಿ ಬೇಗ ವರದಿ ಪಡೆಯಲು ಇದು ಸಹಕಾರಿ. ಈ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದರೆ ನಿರ್ಣಾಯಕವಾದ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಇದರ ವರದಿಗೆ ಎರಡರಿಂದ ಐದು ಗಂಟೆ ಸಮಯ ಬೇಕಾಗುತ್ತದೆ. ನಾಗರಿಕರು ಆತಂಕ ಪಡದೆ ಹೆಚ್ಚು ಹೆಚ್ಚು ಪರೀಕ್ಷೆಗೆ ಒಳಪಡಬೇಕು. ಡಯಾಬಿಟೀಸ್‌, ಕಿಡ್ನಿ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳಿರುವವರಿಗೆ ಸೋಂಕು ದೃಢಪಟ್ಟರೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.