ಬೆಂಗಳೂರು(ಆ.24): ರಾಜಧಾನಿಯಲ್ಲಿ ಕಳೆದ 24 ತಾಸಿನಲ್ಲಿ 2,126 ಹೊಸ ಪ್ರಕರಣಗಳು ಪತ್ತೆಯಾಗಿವೆ, ವಿಶೇಷವೆಂದರೆ ಎರಡು ತಿಂಗಳ ಬಳಿಕ ಸಾವಿನ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಭಾನುವಾರ ನೀಡಿದ ವರದಿಯಲ್ಲಿ ಶನಿವಾರ ಸಂಜೆ 5ರಿಂದ ಭಾನುವಾರ ಸಂಜೆ 5ರವರೆಗೆ ನಗರದಲ್ಲಿ 2,126 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 1,07,875ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿಗೆ ಐದು ಮಂದಿ ಮೃತಪಟ್ಟಿದ್ದು, ಈವರೆಗೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 1,668ಕ್ಕೆ ಏರಿಕೆಯಾಗಿದೆ.

ಭಾನುವಾರ ಒಂದೇ ದಿನ 1,468 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 71,329ಕ್ಕೆ ಏರಿಕೆಯಾಗಿದೆ. ಈ ನಡುವೆ ನಗರದಲ್ಲಿ ಇನ್ನೂ 34,877 ಮಂದಿ ಸೋಂಕಿತರು ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರ ಮತ್ತು ಹೋಂ ಐಸೋಲೇಷನ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 340 ಮಂದಿ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕೃತಿ ಮನುಷ್ಯನಿಗೆ ಮತ್ತಷ್ಟು ಭಯಾನಕ ಪಾಠ ಕಲಿಸಲಿದೆ : ಸ್ವಾಮೀಜಿ ಭವಿಷ್ಯ

ಗುಣಮುಖರ ಪ್ರಮಾಣ ಶೇ.66:

ಬಿಬಿಎಂಪಿ ವ್ಯಾಪ್ತಿಯಯಲ್ಲಿ ಒಟ್ಟು 1.07 ಲಕ್ಷ ಮಂದಿ ಕೊರೋನಾ ಸೋಂಕಿತರ ಪೈಕಿ 71 ಸಾವಿರ ಮಂದಿ ಸೋಂಕಿನಿಂದ ಗುಣಮುಖ ಆಗುವುದರೊಂದಿಗೆ ಗುಣಮುಖರಾದವರ ಪ್ರಮಾಣ ಶೇ.66 ರಷ್ಟಕ್ಕೆ ಏರಿಕೆಯಾಗಿದೆ. ಇದು ಸೋಂಕು ನಿಯಂತ್ರಣದ ಹಂತದಲ್ಲಿದೆ ಎಂಬ ಸೂಚನೆ ನೀಡುತ್ತದೆ. ಮನೆ-ಮನೆ ಆರೋಗ್ಯ ಸಮೀಕ್ಷೆ, ಸೋಂಕಿನ ಲಕ್ಷಣಗಳಿದ್ದವರು ಹಾಗೂ ಕಂಟೈನ್ಮೆಂಟ್‌ ಪ್ರದೇಶದಲ್ಲಿ ಪ್ರತಿ 15 ದಿನಕ್ಕೊಮ್ಮೆ ಸೋಂಕು ಪರೀಕ್ಷೆ ಮಾಡಿದಲ್ಲಿ ಕೊರೋನಾ ಸೋಂಕನ್ನು ಮತ್ತಷ್ಟು ನಿಯಂತ್ರಿಸಬಹುದು ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ಹೇಳುತ್ತಾರೆ.

ಪಶ್ಚಿಮ ವಲಯದಲ್ಲಿ ಹೆಚ್ಚು ಪ್ರಕರಣ

ಕಳೆದ 24 ತಾಸಿನಲ್ಲಿ ವರದಿಯಾದ 2,126 ಹೊಸ ಕೊರೋನಾ ಸೋಂಕು ಪ್ರಕರಣಗಳ ಪೈಕಿ ಅತಿ ಹೆಚ್ಚು ಶೇ.23 ರಷ್ಟು ಪ್ರಕರಣ ಪಶ್ಚಿಮ ವಲಯದಲ್ಲಿ ಪತ್ತೆಯಾಗಿವೆ. ನಂತರ ದಕ್ಷಿಣ ವಲಯ ಶೇ.17, ಬೊಮ್ಮನಹಳ್ಳಿ ವಲಯ ಶೇ.16, ಪೂರ್ವ ವಲಯ ಶೇ.14, ರಾಜರಾಜೇಶ್ವರಿ ನಗರ ವಲಯ ಶೇ.10, ದಾಸರಹಳ್ಳಿ ಹಾಗೂ ಮಹದೇವಪುರ ವಲಯಗಳಲ್ಲಿ ತಲಾ ಶೇ.7ರಷ್ಟು ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ.

ಸೋಂಕಿಗೆ ಬಲಿ ಆದವರಲ್ಲಿ ಪುರುಷರೇ ಹೆಚ್ಚು

ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ಸೋಂಕಿಗೆ ಬಲಿಯಾಗಿರುವ ಒಟ್ಟು 1,669 ಮಂದಿ ಪೈಕಿ 547 ಮಂದಿ ಮಹಿಳೆಯರು ಹಾಗೂ 1,122 ಮಂದಿ ಪುರುಷರು ಇದ್ದಾರೆ. ಅದರಲ್ಲೂ 60-69 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

15,229 ಕಂಟೈನ್ಮೆಂಟ್‌ ಪ್ರದೇಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 38,123 ಪ್ರದೇಶಗಳನ್ನು ಗುರುತಿಸಿದ್ದು, ಈ ಪೈಕಿ 23,002 ಕಂಟೈನ್‌ಮೆಂಟ್‌ನಿಂದ ಹೊರ ಬಂದಿವೆ. ಇನ್ನು ಕೊರೋನಾ ಸೋಂಕು ಸಕ್ರಿಯ 15,229 ಕಂಟೈನ್ಮೆಂಟ್‌ ಪ್ರದೇಶಗಳಿವೆ. ಈ ಪೈಕಿ ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು 3,802 ಕಂಟೈನ್ಮೆಂಟ್‌ ಪ್ರದೇಶಗಳಿವೆ. ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ 841 ಕಂಟೈನ್ಮೆಂಟ್‌ ಪ್ರದೇಶಗಳಿವೆ. ನಗರದಲ್ಲಿ ಕೊರೋನಾ ಪಾಸಿಟಿವ್‌ ಪ್ರಮಾಣ ಶೇ.16.29 ಹಾಗೂ ಸಕ್ರಿಯ ಸೋಂಕು ಪ್ರಕರಣಗಳ ಪ್ರಮಾಣ ಶೇ.32 ರಷ್ಟಿದೆ.