ಬೆಂಗಳೂರು(ಜ.07): ಬ್ರಾಹ್ಮಣ ಸಮುದಾಯದವರು ಶೈಕ್ಷಣಿಕವಾಗಿ ಬುದ್ಧಿವಂತರಾಗಿದ್ದರೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಹೀಗಾಗಿ ಬ್ರಾಹ್ಮಣ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ವಿಪ್ರ ಗಣ್ಯರಿಗೆ ಗೌರವ ಸಮರ್ಪಣೆಯ ‘ಪ್ರತಿಭೋತ್ಸವ’ ಕಾರ್ಯಕ್ರಮದಲ್ಲಿ ವಿಡಿಯೋ ಭಾಷಣದ ಮೂಲಕ ಮಾತನಾಡಿದರು.

ಸಮುದಾಯವನ್ನು ಮೇಲೆತ್ತಲು ನಮ್ಮ ಸರ್ಕಾರ ಬದ್ಧವಾಗಿದೆ. ಬ್ರಾಹ್ಮಣ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ಸೇರಿದಂತೆ 10 ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಇನ್ನಷ್ಟುಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ತುರ್ತಾಗಿ ಆಗಬೇಕಿರುವ ಕಾರ್ಯಗಳ ಬಗ್ಗೆ ಅಧ್ಯಕ್ಷರು ವಿಶೇಷ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಅಂಧವಿಶ್ವಾಸ ಮೂಡಿಸುವ ಕಾರ್ಯಕ್ರಮ ಪ್ರಸಾರ ಮಾಡಿದ್ರೆ ಹುಷಾರ್, ಹೈಕೋರ್ಟ್ ಮಹತ್ವದ ತೀರ್ಪು!

ವಿವಿಧ ಯೋಜನೆಗಳು ಪ್ರಕಟ:

ಇದೇ ವೇಳೆ ವಾರ್ಷಿಕ 550 ಬಡ ಬ್ರಾಹ್ಮಣ ಹೆಣ್ಣುಮಕ್ಕಳ ಮದುವೆಗಾಗಿ ತಲಾ 25 ಸಾವಿರ ರು. ಸಹಾಯಧನ ನೀಡುವ ‘ಅರುಂಧತಿ’, ಪುರೋಹಿತರು-ಅರ್ಚಕರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ 3 ಲಕ್ಷ ರು. ಬಾಂಡ್‌ ನೀಡುವ ‘ಮೈತ್ರಿ’ ಯೋಜನೆ, 14 ಕೋಟಿ ರು. ವೆಚ್ಚದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಹಾಯ ಧನ, 161 ಮಂದಿಗೆ ಸಂಕಲ್ಪ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ತರಬೇತಿ, ದೇವತಾರ್ಚನೆ ಹಾಗೂ ಸಂಧ್ಯಾವಂದನೆ ಕುರಿತ ತರಬೇತಿ ಶಿಬಿರಕ್ಕೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಪ್ರಕಟಿಸಲಾಯಿತು.