ಮುಂಬೈ(ಜ.06): ಬಾಂಬೆ ಹೈಕೋರ್ಟ್‌ನ ಔರಂಗಬಾದ್‌ನ ಪೀಠ ಮಂಗಳವಾರದಂದು ಅಂಧವಿಶ್ವಾಸಕ್ಕೆ ಪ್ರೋತ್ಸಾಹ ನೀಡುವುದನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಬಾಂಬೆ ಹೈಕೋರ್ಟ್ ಮೂಢನಂಬಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ಬಗೆಯ ಜಾಹೀರಾತು ಪ್ರಸಾರಕ್ಕೆ ತಡೆಯೊಡ್ಡುತ್ತಾ ಇಂತಹ ಕಾರ್ಯಕ್ರಮ ಪ್ರಸಾರ ಮಾಡುವುದು ದಂಡನೀಯ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಚಾನೆಲ್ ಹಾಗೂ ಜಾಹೀರಾತು ನೀಡುವ ಕಂಪನಿಗಳು ಕಾನೂನು ತನಿಖೆ ಎದುರಿಸಬೇಕಾಗುತ್ತದೆ ಎಂದಿದೆ.

ನ್ಯಾಯಾಂಗ ಪೀಠವು ಮಂಗಳವಾರ ಹನುಮಾನ್ ಚಾಲೀಸಾ ಯಂತ್ರದ ಜಾಹೀರಾತು ಪ್ರಸಾರ ವಿಚಾರದಲ್ಲಿ ವಿಚಾರಣೆ ನಡೆಸುತ್ತಾ ನಾಲ್ಕು ಟಿವಿ ಚಾನೆಲ್‌ಗಳ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವ ಆದೇಶವನ್ನೂ ನೀಡಿದೆ. ಇದರಿಂದ ಜನರ ನಡುವೆ ಅಂಧವಿಶ್ವಾಸ ಹೆಚ್ಚುತ್ತದೆ ಎಂದಿದೆ.

ಚಾನೆಲ್‌ಗಳ ಮೇಲೂ ತನಿಖೆ

ಪ್ರಕರಣದ ತನಿಖೆ ವೇಳೆ ನ್ಯಾಯಪೀಠವು ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ 3ರಡಿ ಕೇವಲ ಜಾದೂ, ಕೆಟ್ಟ ಪದ್ಧತಿಯನ್ನು ನಿಷೇಧಿಸುವುದರೊಂದಿಗೆ, ಇದರ ಪ್ರಸಾರವನ್ನೂ ತಡೆಯುವ ಕೆಲಸ ನಿರ್ವಹಿಸುತ್ತದೆ. ಅಧಿನಿಯಮ 3 (2)ರಡಿ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅಪರಾಧದ ಶ್ರೇಣಿಗೊಳಪಡುತ್ತದೆ ಎಂದಿದ್ದಾರೆ. ಹೀಗಾಗಿ ಇಂತಹ ಜಾಹೀರಾತು ಪ್ರಸಾರ ಮಾಡುವವರೂ ಇದರಡಿ ತನಿಖೆಗೊಳಪಡುತ್ತಾರೆ ಎಂದಿದೆ. 

ಅರ್ಜಿಯಲ್ಲೇನಿತ್ತು?

ಶಿಕ್ಷಕ ರಾಜೇಂದ್ರ ಅಂಭಾರೆ  ಹೈಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದು, ಇದರಲ್ಲಿ ಅವರು ದೇವ ದೇವತೆಗಳ ಹೆಸರಿನಲ್ಲಿ ಮಾಡಲಾಗುವ ಯಂತ್ರದ ಕುರಿತಾಗಿ ವಾಹಿನಿಯಲ್ಲಿ ಪ್ರಸಾರವಾಗುವ ಇಂತಹ ಕಾರ್ಯಕ್ರಮಗಳ ಬಗ್ಗೆ ಉಲ್ಲೇಖಿಸಿದ್ದರು. ಅಲ್ಲದೇ ಜನರಲ್ಲಿ ಆಸೆ ಹುಟ್ಟಿಸಿ ಖರೀದಿಸುವಂತೆ ಮಾಡುತ್ತಿದ್ದಾರೆಂದೂ ಉಲ್ಲೇಖಿಸಿದ್ದರು.