ಬೆಂಗಳೂರು(ಸೆ.10): ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರದ ಕಬ್ಬನ್‌ ಉದ್ಯಾನವನವನ್ನು ಎರಡು ಹಂತಗಳಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದು, ಈ ಸಂಬಂಧ ಬುಧವಾರದಿಂದ ಸರ್ವೇ ಕಾರ್ಯ ಪ್ರಾರಂಭಿಸಲಾಗಿದೆ.

ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಗಳು ಸರ್ವೇ ಕಾರ್ಯ ಪ್ರಾರಂಭಿಸಿದ್ದು, ಇನ್ನು ಒಂದು ವಾರ ಕಾಲ ಈ ಪ್ರಕ್ರಿಯೆ ಮುಂದುವರಿಯಲಿದೆ. ಅಲ್ಲದೆ, ಉದ್ಯಾನದ ಯಾವ ಭಾಗಗಳಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬುದರ ಕುರಿತಂತೆ ಸಂಪೂರ್ಣ ವರದಿ ಸಿದ್ಧಪಡಿಸಲಾಗುತ್ತಿದೆ. ಈ ವರದಿ ಆಧಾರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಾರಂಭಿಕ ಹಂತದಲ್ಲಿ ಉದ್ಯಾನದ ಪಾದಚಾರಿ ಮಾರ್ಗ ನವೀಕರಣ, ವಾಯುವಿಹಾರ ಪಥ, ಉದ್ಯಾನದೊಳಗಿನ ವಿವಿಧ ರಸ್ತೆಗಳ ಅಭಿವೃದ್ಧಿ, ನೀರು ಶುದ್ಧೀಕರಣ, ಸೈಕಲ್‌ ಪಥ, ಜಾಗಿಂಗ್‌ ಪಥ, ಕಮಲದ ಕೊಳ, ನಾಲೆ ಮತ್ತು ಸೇತುವೆ ನಿರ್ಮಿಸಲಾಗುತ್ತದೆ.

'ನಂದಿಬೆಟ್ಟ, ಕೆಮ್ಮಣ್ಣಗುಂಡಿಗೆ ಮುಗಿಬೀಳುವ ಜನ, ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗೆ ಬರ್ತಿಲ್ಲ'

ಬಳಿಕ ಕರಗದ ಕುಂಟೆ ಮತ್ತು ಜೌಗು ಪ್ರದೇಶ, ಕಾರಂಜಿಗಳು, ಆಸನಗಳ ವ್ಯವಸ್ಥೆ, ಕಲ್ಯಾಣಿ ಹಾಗೂ ನಾಲೆಗಳ ಅಭಿವೃದ್ಧಿ ಮಾಡಲಾಗುವುದು. ಜೊತೆಗೆ, ಸಸಿಗಳನ್ನು ನೆಡುವುದು, ದಿವ್ಯಾಂಗ ಸ್ನೇಹಿ ಆವರಣ, ಆಯುರ್ವೇದ ಸಸ್ಯಗಳ ಉದ್ಯಾನ ನಿರ್ಮಾಣ, ಹಿರಿಯ ನಾಗರಿಕರು, ಮಕ್ಕಳಿಗಾಗಿ ಪ್ರತ್ಯೇಕ ಆವರಣ, ಯೋಗಾಭ್ಯಾಸಕ್ಕೆ ಪ್ರತ್ಯೇಕ ಸ್ಥಳಾವಕಾಶ, ಕಬ್ಬನ್‌ ಉದ್ಯಾನದ ಇತಿಹಾಸ ಹಾಗೂ ಮಾಹಿತಿ ನೀಡುವ ಫಲಕವನ್ನು ಅಳವಡಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ (ಕಬ್ಬನ್‌ ಉದ್ಯಾನವನ) ಗುಣವಂತ ಮಾಹಿತಿ ನೀಡಿದರು.

ಇಂದಿನಿಂದ ವಾಹನ ಸಂಚಾರಕ್ಕೆ ಅವಕಾಶ

ದೇಶದಲ್ಲಿ ಆನ್‌ಲಾಕ್‌ 4 ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಉದ್ಯಾನವನಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರದ ಸೂಚನೆ ನೀಡಿರುವುರಿಂದ ಕಬ್ಬನ್‌ ಉದ್ಯಾನದ ಎಲ್ಲ ದ್ವಾರಗಳಲ್ಲಿ ವಾಹನಗಳ ಸಂಚಾರಕ್ಕೆ ಬುಧವಾರದಿಂದ ಅವಕಾಶ ಮಾಡಿಕೊಡಲಾಗಿದೆ.

ಕಬ್ಬನ್‌ ಉದ್ಯಾನವನದಲ್ಲಿ ಪರಿಸರ ಸಂರಕ್ಷಣೆಗಾಗಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ತೋಟಗಾರಿಕೆ ಇಲಾಖೆಯಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಅಲ್ಲದೆ, ಮುಂದಿನ ಒಂದು ವಾರದಲ್ಲಿ ವಾಹನಗಳ ಸ್ಥಗಿತಕ್ಕೆ ಅದೇಶ ಹೊರಬೀಳಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ, ಸರ್ಕಾರದ ಅದೇಶ ನೀಡಿರುವ ಹಿನ್ನೆಲೆಯಲ್ಲಿ ಉದ್ಯಾನದ ಎಲ್ಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.