ಬೆಂಗಳೂರು(ಸೆ.10): ರಾಜ್ಯ ಸರ್ಕಾರ ಲಾಕ್‌ಡೌನ್‌ ಇನ್ನಷ್ಟು ಸಡಿಲಿಕೆ ಮಾಡುತ್ತಿದ್ದಂತೆ ಬೆಂಗಳೂರು ಹೊರತುಪಡಿಸಿ ತೋಟಗಾರಿಕೆ ಇಲಾಖೆ ಅಧೀನದಲ್ಲಿರುವ ಪ್ರವಾಸಿ ತಾಣ, ಉದ್ಯಾನಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ.

ಕಳೆದ ಐದು ತಿಂಗಳಿನಿಂದ ನಂದಿಬೆಟ್ಟ ಹಾಗೂ ಕೆಮ್ಮಣ್ಣಗುಂಡಿಯಲ್ಲಿ ಸಾರ್ವಜನಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಸೆ.7ರಂದು ಎರಡೂ ಉದ್ಯಾನವನಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟ ನಂತರ ಸಾರ್ವಜನಿಕರು, ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ, ರಾಜಧಾನಿ ಬೆಂಗಳೂರು ನಗರದಲ್ಲಿನ ಕಬ್ಬನ್‌ ಉದ್ಯಾನವನ ಮತ್ತು ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದ್ದರೂ, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರ ನಂದಿ ಬೆಟ್ಟಕ್ಕೆ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಪ್ರತಿ ದಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ವಾರಾಂತ್ಯಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಗೆಸ್ಟ್‌ ಹೌಸ್‌ಗಳಲ್ಲಿ ಕೊಠಡಿಗಳ ಬುಕ್ಕಿಂಗ್‌ ಪ್ರಾರಂಭವಾಗಿದೆ ಎಂದು ನಂದಿ ಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್‌ ತಿಳಿಸಿದರು.

ಬೆಂಗಳೂರು: ಕಬ್ಬನ್‌- ಲಾಲ್‌ಬಾಗ್‌ ಉದ್ಯಾನದಲ್ಲಿ ವಾಯು ವಿಹಾರಕ್ಕೆ ಅವಕಾಶ

ಕೆಮ್ಮಣ್ಣಗುಂಡಿಯಲ್ಲಿ ಸೆ.1ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಾರದ ದಿನಗಳಲ್ಲಿ ಬೆರಳೆಣಿಕೆಯಷ್ಟುಜನ ಮಾತ್ರ ಉದ್ಯಾನಕ್ಕೆ ಬರುತ್ತಿದ್ದಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರು ತುಸು ಹೆಚ್ಚು ಬರಲಿದ್ದಾರೆ. ಈ ಭಾಗದ ಜನರಲ್ಲಿ ಕೊರೋನಾ ಕುರಿತು ಹೆಚ್ಚಿನ ಆತಂಕ ಇಲ್ಲದಿದ್ದರೂ ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ವಿಶೇಷಾಧಿಕಾರಿ ಯೋಗಾನಂದ ವಿವರಿಸಿದರು.

ಕಬ್ಬನ್‌ ಪಾಕ್‌, ಲಾಲ್‌ಬಾಗ್‌ಗೆ ಬಾರದ ಜನ:

ಬೆಂಗಳೂರಿನಲ್ಲಿ ಎಲ್ಲ ರೀತಿಯ ವಾಣಿಜ್ಯ ವ್ಯವಹಾರಗಳು ಪುನರಾರಂಭವಾಗಿದ್ದರೂ, ಕಬ್ಬನ್‌ ಉದ್ಯಾನವನ ಮತ್ತು ಲಾಲ್‌ಬಾಗ್‌ಗೆ ಬರಲು ಜನ ಹಿಂಜರಿಯುತ್ತಿದ್ದಾರೆ. ವಾಯು ವಿಹಾರಕ್ಕೆ ಸಾವಿರಾರು ಜನ ಬರುತ್ತಿದ್ದಾರೆ. ಆದರೆ, ಉದ್ಯಾನದ ವೀಕ್ಷಣೆಗೆ ಬರುವವರ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿದೇರ್ಶಕ ಬಿ.ವೆಂಕಟೇಶ್‌ ಮಾಹಿತಿ ನೀಡಿದರು.

ಲಾಲ್‌ಬಾಗ್‌ಗೆ ಸಾಮಾನ್ಯವಾಗಿ ಪ್ರತಿ ದಿನ 2000 ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಮಂಗಳವಾರ ಕೇವಲ 450 ಪ್ರವಾಸಿಗರು ಬಂದಿದ್ದರು. ಕಬ್ಬನ್‌ ಉದ್ಯಾನದಲ್ಲಿ ಪ್ರವಾಸಿಗರ ಸಂಖ್ಯೆ ಅತ್ಯಂತ ಕಡಿಮೆ ಇತ್ತು ಎಂದರು.