ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ಕುರಿತು ನಡೆಯುತ್ತಿರುವ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಎರಡನೇ ಬಾರಿಯು ಗೈರು ಹಾಜರಾಗಿದ್ದಾರೆ.

ಬೆಂಗಳೂರು (ಜೂ.21): ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ಕುರಿತು ನಡೆಯುತ್ತಿರುವ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಎರಡನೇ ಬಾರಿಯು ಗೈರು ಹಾಜರಾಗಿದ್ದಾರೆ. ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ದಯಾನಂದ್‌ಗೆ ವಿಚಾರಣಾಧಿಕಾರಿ ಜಿ.ಜಗದೀಶ್ ಅವರು ನೋಟಿಸ್ ನೀಡಿದ್ದರು. ಆದರೆ, ಅವರು ವಿಚಾರಣೆಗೆ ಬಂದಿರಲಿಲ್ಲ. ಈ ಹಿಂದೆಯೂ ನೀಡಿದ್ದ ವಿಚಾರಣೆಗೆ ಹಾಜರಾಗಿಲ್ಲ. ಗೈರು ಹಾಜರಿಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ.

ಉಳಿದಂತೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಕಬ್ಬನ್‌ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ, ಕಬ್ಬನ್‌ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಗಿರೀಶ್ ಮತ್ತು ಸಬ್ ಇನ್ಸ್‌ಪೆಕ್ಟರ್‌ ಸೇರಿ ಸಂಬಂಧಿಸಿದ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ವಿಜಯೋತ್ಸವ ಆಚರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಕೆ, ಪ್ರಕ್ರಿಯೆಗಳು, ಭದ್ರತೆ, ಮೇಲ್ವಿಚಾರಣೆ, ಲಭ್ಯವಿದ್ದ ಪೊಲೀಸ್ ಸಿಬ್ಬಂದಿ, ಸಿದ್ಧತೆಗಳು, ಕೆಎಸ್‌ಸಿಎ ಪದಾಧಿಕಾರಿಗಳು ಹಾಗೂ ಈವೆಂಟ್ ಮ್ಯಾನೇಜ್ಮೆಂಟ್ ಕೈಗೊಂಡಿದ್ದ ಪೂರ್ವ ಸಿದ್ಧತೆಗಳ ಕುರಿತು ವಿಚಾರಣಾಧಿಕಾರಿಯವರು ಈಗಾಗಲೇ ಹೇಳಿಕೆ ದಾಖಲಿಸಿದ್ದಾರೆ. ಗಾಯಾಳುಗಳು, ಸಾರ್ವಜನಿಕರು, ಪ್ರತ್ಯಕ್ಷದರ್ಶಿಗಳು ಹಾಗೂ ಮೃತರ ಕುಟುಂಬದ ಸದಸ್ಯರಿಂದಲೂ ಹೇಳಿಕೆ ಪಡೆದಿರುವ ಜಿಲ್ಲಾಧಿಕಾರಿಗೆ 15 ದಿನಗಳಲ್ಲಿ ವರದಿ ಸಲ್ಲಿಸಲು ಗಡುವು ನೀಡಲಾಗಿದೆ. ಮುಂದಿನ ವಾರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ದಯಾನಂದ ಅಮಾನತು ವಾಪಸ್‌ ಪಡೆಯಲು ಹೆಚ್ಚಿದ ಆಗ್ರಹ: ಐಪಿಎಲ್‌ ಕ್ರಿಕೆಟ್‌ ವಿಜಯೋತ್ಸವದ ಭದ್ರತಾ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ ದಯಾನಂದ ಅವರನ್ನು ಅಮಾನತು ಪಡಿಸಿದ್ದನ್ನು ವಿರೋಧಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಮತ್ತು ಯುವ ಘಟಕ, ರೈತ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಸೋಮವಾರ ರಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

ಐಪಿಎಲ್ ಲೀಗ್ ನಲ್ಲಿ ಗೆದ್ದಿರುವ ಹಿನ್ನಲೆ ಇತ್ತೀಚೆಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಿರೀಕ್ಷೆಯು ಮೀರಿ ಸೇರಿದ್ದ ಜನಸಂದಣಿಯಲ್ಲಿ 11 ಜನ ಕಾಲ್ತುಳಿತದಿಂದ ಮೃತಪಟ್ಟಿದ್ದರು. ಈ ವಿಚಾರದ ಸಲುವಾಗಿ ಪೊಲೀಸ್ ಇಲಾಖೆ ಮತ್ತು ಭದ್ರತೆಗೆ ಸಂಬಂಧಪಟ್ಟಂತೆ ಕ್ರಮವಹಿಸಿದ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ ಇವರನ್ನು ಅಮಾನತುಗೊಳಿಸಿದ್ದ ಕ್ರಮ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಎಸ್‌ಎಸ್‌ಕೆ ವೃತ್ತದವರೆವಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿದರು.

ನಗರದ ಬಳ್ಳಾರಿ ರಸ್ತೆಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದ ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಸೊಗಡು ವೆಂಕಟೇಶ್‌ ಮಾತನಾಡಿ, ಐಪಿಎಲ್‌ ವಿಜಯೋತ್ಸದ ಸಂಬಂಧಪಟ್ಟಂತೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದ್ದು ಇದರ ಹೊಣೆ, ರಾಜ್ಯವನ್ನಾಳುವ ಸಿಎಂ ಹಾಗೂ ಡಿಸಿಎಂ ಹೊರಬೇಕು. ಸರ್ಕಾರದ ಆದೇಶದಂತೆ ಸೂಕ್ತ ಬಂದೋ ಬಸ್ತ್ ಒದಗಿಸಿದ್ದರೂ ಏನು ತಪ್ಪು ಮಾಡದ ಪೊಲೀಸ್‌ ಕಮಿಷನರ್‌ ದಯಾನಂದವರನ್ನು ಅಮಾನತುಗೊಳಿಸಿದ ಕ್ರಮ ಖಂಡನೀಯ ಎಂದು ಕಿಡಿಕಾರಿದರು.