ಕೆಎಸ್‌ಸಿಎ ಕಾರ್ಯದರ್ಶಿ ಆಗಿದ್ದ ಶಂಕರ್‌, ಖಜಾಂಚಿಯಾಗಿದ್ದ ಜಯರಾಮ್‌ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಎ.ಕೆ.ಗಿರೀಶ್ ಹಾಜರಾಗಿದ್ದರು. ಈ ಮೂವರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಸಿಐಡಿ ಹೇಳಿಕೆ ದಾಖಲಿಸಿಕೊಂಡಿದೆ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ ಸಂಬಂಧ ಕಬ್ಬನ್‌ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಬುಧವಾರ ವಿಚಾರಣೆ ನಡೆಸಿದೆ.

ನೋಟಿಸ್ ಹಿನ್ನೆಲೆಯಲ್ಲಿ ನಗರದ ಸಿಐಡಿ ಕೇಂದ್ರ ಕಚೇರಿಯಲ್ಲಿ ತನಿಖಾಧಿಕಾರಿ ಮುಂದೆ ಕೆಎಸ್‌ಸಿಎ ಕಾರ್ಯದರ್ಶಿ ಆಗಿದ್ದ ಶಂಕರ್‌, ಖಜಾಂಚಿಯಾಗಿದ್ದ ಜಯರಾಮ್‌ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಎ.ಕೆ.ಗಿರೀಶ್ ಹಾಜರಾಗಿದ್ದರು. ಈ ಮೂವರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಸಿಐಡಿ ಹೇಳಿಕೆ ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ತಮ್ಮ ಮೇಲಿನ ಆರೋಪವನ್ನು ಈ ಮೂವರೂ ಬಲವಾಗಿ ನಿರಾಕರಿಸಿದ್ದಾರೆ. ನಾವು ಕಾರ್ಯಕ್ರಮ ಆಯೋಜಕರಲ್ಲ. ಜನರು ಸೇರಲು ಸರ್ಕಾರವೇ ಕಾರಣವಾಗಿದೆ ಎಂದು ಕೆಎಸ್‌ಸಿಎ ಪದಾಧಿಕಾರಿಗಳು ದೂರಿದ್ದಾರೆ ಎನ್ನಲಾಗಿದೆ. ಅದೇ ರೀತಿ ಆರ್‌ಸಿಬಿ ಹಾಗೂ ಕೆಎಸ್‌ಸಿಎ ಮೇಲೆ ಇನ್ಸ್‌ಪೆಕ್ಟರ್ ಗಿರೀಶ್‌ ಆಪಾದಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಲ್ತುಳಿತ ದುರಂತ ಬಳಿಕ ಇನ್ಸ್‌ಪೆಕ್ಟರ್ ಗಿರೀಶ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಇನ್ನು ಘಟನೆಗೆ ನೈತಿಕ ಹೊಣೆ ಹೊತ್ತು ಕೆಎಸ್‌ಸಿಎ ಆಡಳಿತಾತ್ಮಕ ಹುದ್ದೆಗಳಿಗೆ ಶಂಕರ್ ಹಾಗೂ ಜಯರಾಮ್ ರಾಜೀನಾಮೆ ಸಲ್ಲಿಸಿದ್ದರು. ವಿಚಾರಣೆಗೆ ತಮ್ಮ ವಕೀಲರ ತಂಡದೊಂದಿಗೆ ಕೆಎಸ್‌ಸಿಎ ಪದಾಧಿಕಾರಿಗಳು ಹಾಜರಾಗಿದ್ದರು. ಈಗಾಗಲೇ ಇವರ ಮೇಲೆ ಬಲವಂತದ ಕ್ರಮ ಜರುಗಿಸದಂತೆ ತನಿಖಾಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ.

ಕಪ್‌ತುಳಿತ ಮಾಹಿತಿ ಇದ್ದರೆ ಕೊಡಿ: ನ್ಯಾ। ಕುನ್ಹಾ ಆಯೋಗ 

ಕಾಲ್ತುಳಿತ ಘಟನೆ ಸಂಬಂಧ ವಿಚಾರಣೆ ನಡೆಸಲು ರಚನೆಯಾಗಿರುವ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಆಯೋಗಕ್ಕೆ ಘಟನೆ ಸಂಬಂಧ ಇರುವ ಮಾಹಿತಿ, ಸಾಕ್ಷ್ಯ, ಹೇಳಿಕೆಗಳನ್ನು ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಘಟನೆ ಬಗ್ಗೆ ಸತ್ಯ ಸಂಗತಿ, ಮಾಹಿತಿ ತಿಳಿದಿರುವವರು ಮತ್ತು ತನಿಖಾ ಆಯೋಗದ ನಡಾವಳಿಗಳ ಬಗ್ಗೆ ಆಸಕ್ತಿ ಇರುವ ಹಾಗೂ ಆಯೋಗಕ್ಕೆ ಸಹಕರಿಸಲು ಇಚ್ಛಿಸುವವರು ತಮ್ಮ ಹೇಳಿಕೆ ಮತ್ತು ಸಾಕ್ಷ್ಯ ದಾಖಲೆಗಳನ್ನು ಎರಡು ಪ್ರತಿಗಳಲ್ಲಿ ಪ್ರಮಾಣಿತ ಅಫಿಡವಿಟ್‌ನೊಂದಿಗೆ 15 ದಿನದೊಳಗೆ ಸಲ್ಲಿಸಲು ಕೋರಲಾಗಿದೆ.

ಸಾರ್ವಜನಿಕರು ಕೆಳಕಂಡ ವಿಳಾಸಕ್ಕೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ/ಕೊರಿಯರ್‌ ಮೂಲಕ ಸಲ್ಲಿಸಬಹುದಾಗಿದೆ.

ಸಹಿ ಮಾಡಿದ, ಸ್ಕ್ಯಾನ್ ಮಾಡಿದ ಅಫಿಡವಿಟ್‌ ಮತ್ತು ದಾಖಲೆಗಳನ್ನು ಇ-ಮೇಲ್‌ cdinqcom@gmail.com ಗೆ ಕಳುಹಿಸಬೇಕು. ಕಚೇರಿ ವಿಳಾಸ-ಕೊಠಡಿ ಸಂಖ್ಯೆ 12, ಒಂದನೇ ಮಹಡಿ, ಹಳೆ ಕಟ್ಟಡ, ಕುಮಾರ ಕೃಪಾ ಅತಿಥಿ ಗೃಹ, ಬೆಂಗಳೂರು-560001 ಈ ವಿಳಾಸಕ್ಕೂ ಸಹ ಸಲ್ಲಿಸಬಹುದು.

ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮಕ್ಕೆ ಗೌರ್ನರ್‌ನ ನಾನೇ ಆಹ್ವಾನಿಸಿದ್ದೆ: ಸಿಎಂ 

ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡಿದ್ದ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರನ್ನು ನಾನೇ ಆಹ್ವಾನಿಸಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜೂ.4 ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು ತನ್ನ ತಂಡ ಐಪಿಎಲ್‌ ಟ್ರೋಫಿ ಗೆದ್ದಿದ್ದಕ್ಕೆ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನನಗೆ ಕೆಎಸ್‌ಸಿಎ ವತಿಯಿಂದ ಆಹ್ವಾನ ನೀಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿಕೊಂಡರು. ಇದಕ್ಕೆ ನಾನು ಒಪ್ಪಿಗೆ ನೀಡಿದೆ. ಬಳಿಕ ಅವರು ರಾಜ್ಯಪಾಲರನ್ನು ಆಹ್ವಾನ ಮಾಡಿರುವುದಾಗಿ ತಿಳಿಸಿದರು. ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ರಾಜ್ಯಪಾಲರು ಅವರಾಗಿಯೇ ಬಂದಿದ್ದರು ಎಂದು ಪ್ರಾಚಾರವಾಗಿದೆ. ಅದು ತಪ್ಪು. ನನ್ನ ರಾಜಕೀಯ ಕಾರ್ಯದರ್ಶಿ ಆಗಿದ್ದ ಗೋವಿಂದರಾಜು ಅವರು ರಾಜ್ಯಪಾಲರಿಗೆ ಕರೆ ಮಾಡಿ ಫೋನ್ ನನಗೆ ಕೊಟ್ಟರು. ಆಗ ನಾನು ಕೂಡ ಕಾರ್ಯಕ್ರಮಕ್ಕೆ ತೆರಳುತ್ತಿದ್ದು ನೀವು ಬನ್ನಿ ಎಂದು ಆಹ್ವಾನಿಸಿದೆ’ ಎಂದರು.

‘ರಾಜ್ಯಪಾಲರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದರು. ಸನ್ಮಾನ ಕಾರ್ಯಕ್ರಮ 20 ನಿಮಿಷಗಳಲ್ಲಿ ಮುಗಿದುಹೋಯಿತು. ಮಾಧ್ಯಮಗಳು ಹಾಗೂ ಸುದ್ದಿ ವಾಹಿನಿಗಳಲ್ಲಿ ರಾಜ್ಯಪಾಲರು ತಾವಾಗಿಯೇ ಬಂದಿದ್ದಾರೆ ಎಂದು ವರದಿಯಾದ್ದರಿಂದ ಸ್ಪಷ್ಟೀಕರಣ ನೀಡುತ್ತಿದ್ದೇನೆ’ ಎಂದರು.