ಕೊರೋನಾ ಭೀತಿ ಮಧ್ಯೆಯೂ ಸಂತ ಮೇರಿ ಬೆಸಿಲಿಕಾ ಉತ್ಸವಕ್ಕೆ ಚಾಲನೆ

ಆರ್ಚ್‌ ಬಿಷಪ್‌ ಡಾ.ಪೀಟರ್‌ ಮೆಚಾಡೋ ಧ್ವಜಾರೋಹಣ| 9 ದಿನ ಧಾರ್ಮಿಕ ಕಾರ್ಯಕ್ರಮ|ಈ ವರ್ಷ ಕಾರ್ಯಕ್ರಮಗಳನ್ನು ಡಿಜಿಟಲ್‌ ಮಾಧ್ಯಮಗಳ ಮೂಲಕ ನೇರ ಪ್ರಸಾರ ಮಾಡಲು ನಿರ್ಧಾರ| 

St Marys Basilica Festival Start in Shivajinagara Church in Bengaluru

ಬೆಂಗಳೂರು(ಆ.30): ಕೋವಿಡ್‌-19 ನಡುವೆಯೂ ಸಂತ ಮೇರಿ ಬೆಸಿಲಿಕಾ ವಾರ್ಷಿಕೋತ್ಸವದ ಉದ್ಘಾಟನೆ ಹಾಗೂ ಧ್ವಜಾರೋಹಣ ಶಿವಾಜಿನಗರದ ಸಂತ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ಶನಿವಾರ ಅತ್ಯಂತ ಸರಳವಾಗಿ ಜರುಗಿತು.

ಸಂತ ಮೇರಿ ಬೆಸಿಲಿಕಾದಲ್ಲಿ ಆರೋಗ್ಯ ಮಾತೆಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ ಆಚ್‌ರ್‍ ಬಿಷಪ್‌ ಡಾ.ಪೀಟರ್‌ ಮೆಚಾಡೋ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ 9 ದಿನಗಳ ಸಂತ ಮೇರಿ ಮಾತೆಯ ಉತ್ಸವಕ್ಕೆ ಚಾಲನೆ ನೀಡಿದರು.

ಪ್ರತಿ ವರ್ಷ ಸೆಪ್ಟೆಂಬರ್‌ ತಿಂಗಳು ಬಂತೆಂದರೆ ಶಿವಾಜಿನಗರ ರಂಗುಗೊಳ್ಳುತ್ತಿತ್ತು. ಸಾವಿರಾರು ಭಕ್ತಾದಿಗಳ ನೇತೃತ್ವದಲ್ಲಿ ಮುಗಿಲು ಮುಟ್ಟುವ ಪ್ರಾರ್ಥನೆಯೊಂದಿಗೆ ಸಂತ ಮೇರಿ ಬೆಸಿಲಿಕಾ ವಾರ್ಷಿಕೋತ್ಸವಕ್ಕೆ ಚಾಲನೆ ದೊರೆಯುತ್ತಿತ್ತು. ಆದರೆ, ಈ ವರ್ಷ ಕೊರೋನಾ ಹಿನ್ನೆಲೆ ಭಕ್ತರಿಗೆ ಚರ್ಚ್‌ಗೆ ಪ್ರವೇಶವಿರಲಿಲ್ಲ. ಚರ್ಚ್‌ ಹೊರಗಡೆಯೇ ನಿಂತು ನೂರಾರು ಭಕ್ತರು ಪ್ರಾರ್ಥಿಸಿ ಆರಾಧಿಸಿದರು.

ಕೊರೋನಾ ಸೋಂಕಿತೆಗೆ ಯಶಸ್ವಿ ಮಿದುಳು ಶಸ್ತ್ರಚಿಕಿತ್ಸೆ

ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಆಧ್ಯಾತ್ಮಿಕ ಕಾರ್ಯಕ್ರಮಗಳು, ಬಲಿಪೂಜೆ, ಪರಮಪ್ರಸಾದ, ಆಶೀರ್ವಚನ, ಆರಾಧನೆ ಆನ್‌ಲೈನ್‌ ಮೂಲಕವೇ ನಡೆಯಲಿದೆ ಎಂದು ಧರ್ಮಗುರುಗಳಾದ ಫಾ. ಮಾರ್ಟಿನ್‌ ಕುಮಾರ್‌ ತಿಳಿಸಿದ್ದಾರೆ.
ಭಕ್ತಾದಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ಕುಳಿತು ಮಾತೆ ಮರಿಯಮ್ಮನವರ ಸ್ವರೂಪವನ್ನು ಸ್ಥಾಪಿಸಿ, ಅದನ್ನು ಅಲಂಕರಿಸಿ ಪ್ರತಿನಿತ್ಯ ಜಪಮಾಲೆ ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳಬೇಕು. ಆನ್‌ಲೈನ್‌ ಮೂಲಕ ಪ್ರಸಾರ ಮಾಡುವ ಬಲಿಪೂಜೆ, ಪರಮ ಪ್ರಸಾದದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ ನೇರ ಪ್ರಸಾರ

ಈ ವರ್ಷ ಕಾರ್ಯಕ್ರಮಗಳನ್ನು ಡಿಜಿಟಲ್‌ ಮಾಧ್ಯಮಗಳ ಮೂಲಕ ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಭಕ್ತರು ಉಡುಗೊರೆ, ಕಾಣಿಕೆಗಳನ್ನು ಆನ್‌ಲೈನ್‌ ಮೂಲಕ ಕಳುಹಿಸಿಕೊಡಬಹುದು. ಬಲಿಪೂಜೆಗೆ ಬುಕ್ಕಿಂಗ್‌ ಮಾಡುವವರು ವಿವರಗಳಿಗೆ ಫಾ.ಸಿರಿಲ್‌ ವಿಕ್ಟರ್‌ ಮೊ.9886424928, ಫಾ. ಕ್ಲೆಮೆಂಟ್‌ ದೀಪ್‌ ಮೊ. 9880750545 ಸಂಪರ್ಕಿಸಬಹುದು. ಜಾಲತಾಣ www.stmarysbangalore.com, www.bangalorearchdiocese.org, ಯೂಟ್ಯೂಬ್‌, ಮೊಬೈಲ್‌ ಆ್ಯಪ್‌ ಮೂಲಕ ನೇರ ಪ್ರಸಾರ ವೀಕ್ಷಿಸಬಹುದು.

ಇಂದಿನಿಂದ ಸೆ.8ರವರೆಗೆ ಉತ್ಸವ

ಸಂತ ಮೇರಿ ಉತ್ಸವ ಶಿವಾಜಿನಗರದಲ್ಲಿ ಸೆ.8ರವರೆಗೆ ನಡೆಯಲಿದೆ. ಆ.29ರ ಶನಿವಾರ ಸಂಜೆ 5ಕ್ಕೆ ಕ್ರೈಸ್ತರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಸೆ. 8ರಂದು 9 ದಿನಗಳ ಉತ್ಸವಕ್ಕೆ ತೆರೆ ಬೀಳಲಿದೆ. ಈ ದಿನಗಳಲ್ಲಿ ಪ್ರತಿದಿನ ಮುಂಜಾನೆ 6 ರಿಂದ ವಿಶೇಷ ಪ್ರಾರ್ಥನೆ, ಬೆಳಗ್ಗೆ 11ಕ್ಕೆ ರೋಗಗಳ ಪರಿಹಾರಕ್ಕಾಗಿ ವಿಶೇಷ ಬಲಿ ಪೂಜೆಗಳು ನೆರವೇರಲಿವೆ. ಸೆ.8ರಂದು ಸಂತ ಮೇರಿಯವರ ರಥೋತ್ಸವ ನಡೆಯಲಿದ್ದು, ಅಂದು ಬೆಳಗ್ಗೆ 5ರಿಂದ ರಾತ್ರಿ ತನಕ ಅರ್ಧ ಗಂಟೆಗೊಮ್ಮೆ ದೇಶದ ಎಲ್ಲ ಭಾಷೆಗಳಲ್ಲಿ ಪ್ರಾರ್ಥನೆ ಮೊಳಗಲಿದೆ.
 

Latest Videos
Follow Us:
Download App:
  • android
  • ios