Asianet Suvarna News Asianet Suvarna News

SSLC ಪರೀಕ್ಷೆ ಸಿಬ್ಬಂದಿಗೆ ಕೋವಿಡ್‌ ಲಸಿಕೆ ಕಡ್ಡಾಯ, ಹೊಸ ಮಾರ್ಗಸೂಚಿ ಹೀಗಿದೆ

  • ವಿದ್ಯಾರ್ಥಿಗಳು, ಸಿಬ್ಬಂದಿ ಮಾಸ್ಕ್‌ ಧರಿಸುವುದು ಕಡ್ಡಾಯ
  • ಪರೀಕ್ಷಾ ಕೇಂದ್ರ ಪ್ರವೇಶ ವೇಳೆ ಮಕ್ಕಳ ಆರೋಗ್ಯ ಟೆಸ್ಟ್‌
  • ಇದಕ್ಕಾಗಿ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಕೌಂಟರ್‌
  • ಮಾಸ್ಕ್‌ ತಂದಿಲ್ಲದಿದ್ದರೆ ಕೌಂಟರ್‌ನಲ್ಲೇ ಮಾಸ್ಕ್‌ ವಿತರಣೆ
SSLC exam new guidelines for teachers and students dpl
Author
Bangalore, First Published Jun 24, 2021, 8:43 AM IST

ಬೆಂಗಳೂರು(ಜೂ.24): ‘ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾಗುವ ಶಿಕ್ಷಕರು, ಸಿಬ್ಬಂದಿ ಹಾಗೂ ಅಧಿಕಾರಿಗಳು ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವುದು ಕಡ್ಡಾಯ. ಪ್ರತಿ ಬೆಂಚ್‌ಗೆ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಯಲ್ಲಿ ಗರಿಷ್ಠ 12 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿರಬೇಕು. ನಿತ್ಯ ಪರೀಕ್ಷೆಗೆ ಮೊದಲು ಮತ್ತು ನಂತರ ಸೋಂಕು ನಿವಾರಕ ದ್ರಾವಣದಿಂದ ಪರೀಕ್ಷಾ ಕೇಂದ್ರಗಳನ್ನು ಸ್ವಚ್ಛಗೊಳಿಸಬೇಕು. ಕೋವಿಡ್‌ ಲಕ್ಷಣಗಳಿರುವವರಿಗೆ ಪ್ರತ್ಯೇಕ ಕೊಠಡಿ, ಸೋಂಕಿತ ಮಕ್ಕಳಿಗೆ ಕೋವಿಡ್‌ ನಿಗಾ ಕೇಂದ್ರದಲ್ಲಿ ಪರೀಕ್ಷೆ.’

ಇವು, ಜುಲೈ ಮೂರನೇ ವಾರದಲ್ಲಿ ನಡೆಸಲುದ್ದೇಶಿಸಿರುವ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಮುಖ ಮಾರ್ಗಸೂಚಿಗಳು. ಅತ್ಯಂತ ಸುರಕ್ಷತಾ ಕ್ರಮದಲ್ಲಿ ಪರೀಕ್ಷೆ ನಡೆಸಲು ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಿದ್ಧಪಡಿಸಿ ನೀಡಿರುವ ಸುದೀರ್ಘ ಒಂಬತ್ತು ಪುಟಗಳ ಮಾರ್ಗಸೂಚಿಯನ್ನು (ಎಸ್‌ಒಪಿ) ಶಿಕ್ಷಣ ಇಲಾಖೆಯು ಬುಧವಾರ ಬಿಡುಗಡೆ ಮಾಡಿದ್ದು, ಅದರ ಅನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಎಸ್‌ಒಪಿ ಅನುಷ್ಠಾನ ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪ್ರತಿದಿನವೂ ಪರೀಕ್ಷೆಗೆ ಮುನ್ನ ಮತ್ತು ನಂತರ ಸೋಂಕು ನಿವಾರಕ ದ್ರಾವಣದಿಂದ ಇಡೀ ಪರೀಕ್ಷಾ ಕೇಂದ್ರವನ್ನು ಸ್ಯಾನಿಟೈಜೇಷನ್‌ ಮಾಡಬೇಕು. ಸಾಮಾಜಿಕ ಅಂತರ, ಕೈಗೆ ಸ್ಯಾನಿಟೈಸ್‌ ಮಾಡುವುದು ಕಡ್ಡಾಯ. ಪ್ರತಿ ಬೆಂಚ್‌ಗೆ ಒಬ್ಬ ವಿದ್ಯಾರ್ಥಿಯಂತೆ ಗರಿಷ್ಠ 12 ಮಕ್ಕಳಿರಬೇಕು. ಮನೆಯಿಂದ ನೀರಿನ ಬಾಟಲ… ಮತ್ತು ಊಟದ ಡಬ್ಬಿ ತರಬಹುದು ಎಂದು ತಿಳಿಸಲಾಗಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಪ್ರವೇಶಿಸುತ್ತಿದ್ದಂತೆ ಆರೋಗ್ಯ ತಪಾಸಣಾ ಕೌಂಟರ್‌ ಪ್ರವೇಶಿಸುವಂತೆ ನಿರ್ದೇಶಿಸಬೇಕು. ಆರೋಗ್ಯ ಕೌಂಟರ್‌ಗಳು ಬೆಳಗ್ಗೆ 8.30ಕ್ಕೆ ಆರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ತನಕ ತೆರೆದಿರಲಿವೆ. ಥರ್ಮಲ್‌ ಸ್ಕಾ್ಯನರ್‌, ಪಲ್ಸ್‌ ಆಕ್ಸಿಮೀಟರ್‌ ಸೇರಿದಂತೆ ಸಂಪುರ್ಣ ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಹೊಂದಿರಬೇಕು. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಆರೋಗ್ಯ ಕೌಂಟರ್‌ಗಳಲ್ಲೇ ಮಾಸ್ಕ್ ನೀಡಬೇಕು. ಗಡಿ ಭಾಗದ ಪರೀಕ್ಷಾ ಕೇಂದ್ರಗಳಿಗೆ ಹೊರ ರಾಜ್ಯದಿಂದ ಬರುವ ಪರೀಕ್ಷಾರ್ಥಿಗಳಿಗೆ ಅನುವಾಗುವಂತೆ ಪರೀಕ್ಷೆಗಳ ದಿವಸದಂದು ರಾಜ್ಯದ ಗಡಿ ಪ್ರವೇಶಕ್ಕೆ ಜಿಲ್ಲಾಡಳಿತದ ಸಮನ್ವಯದೊಂದಿಗೆ ಕ್ರಮ ವಹಿಸಬೇಕು ಎಂದು ತಿಳಿಸಲಾಗಿದೆ.

ಲಕ್ಷಣವುಳ್ಳವರಿಗೆ, ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ:

ಕೆಮ್ಮು, ನೆಗಡಿ, ಜ್ವರ ಮತ್ತು ಯಾವುದೇ ಕೋವಿಡ್‌ ಲಕ್ಷಣಗಳಿರುವ ಅಭ್ಯರ್ಥಿಗಳಿಗೆ ಪ್ರತಿ ಕೇಂದ್ರದಲ್ಲಿ ಕನಿಷ್ಠ 2 ಕೊಠಡಿಗಳನ್ನು ಕಾಯ್ದಿರಿಸಬೇಕು. ಅದೇ ರೀತಿ ಯಾವುದೇ ವಿದ್ಯಾರ್ಥಿಗೆ ಕೋವಿಡ್‌ ಪಾಸಿಟಿವ್‌ ಕಂಡುಬಂದಲ್ಲಿ ಅಂತಹವರಿಗಾಗಿ ತಾಲ್ಲೂಕಿಗೊಂಡು ಕೋವಿಡ್‌ ನಿಗಾ ಕೇಂದ್ರ ತೆರೆದು ಅಲ್ಲಿಯೇ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ.

ಯಾವುದೇ ಪರೀಕ್ಷಾರ್ಥಿಯ ಕುಟುಂಬ ಸದಸ್ಯರಿಗೆ ಸೋಂಕಿದ್ದರೂ ವಿದ್ಯಾರ್ಥಿ ಪ್ರತ್ಯೇಕ ಐಸೋಲೇಷನ್‌ನಲ್ಲಿದ್ದು ಆರೋಗ್ಯವಾಗಿರುವುದು ಕಂಡು ಬಂದರೆ ಅವರಿಗೂ ನಿಗಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಪ್ರತಿ ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನವನ್ನು ಮೀಸಲಿಡಬೇಕು ಎಂದು ಎಸ್‌ಒಪಿಯಲ್ಲಿ ಸೂಚಿಸಲಾಗಿದೆ.

ಜೂ.28ಕ್ಕೆ ಸಚಿವರ ವಿಡಿಯೋ ಕಾನ್ಫೆರೆನ್ಸ್‌

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಅತ್ಯಂತ ಸುರಕ್ಷಿತವಾಗಿ ನಡೆಸಲು ಸೂಚಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂಬಂಧ ಜೂ. 28ರಂದು ಎಲ್ಲಾ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು, ಖಜಾನಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಸೂಕ್ತ ಮಾರ್ಗದರ್ಶನದ ಜತೆಗೆ ಯಾವುದೇ ಸಮಸ್ಯೆಗಳಿದ್ದರೆ ಮಾಹಿತಿ ಪಡೆದು ಪರಿಹರಿಸಲಾಗುವುದು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಆಯುಕ್ತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios