Asianet Suvarna News Asianet Suvarna News

ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನ ಶಾಂತಿಯುತ ತೆರೆ; ಪೊಲೀಸ್ ಬಿಗಿಭದ್ರತೆ, ಮಳೆ ನಡುವೆ ಭಕ್ತರಿಂದ ದತ್ತಪಾದುಕೆ ದರ್ಶನ

ರಾಜ್ಯದ ವಿವಾದಿತ ಕೇಂದ್ರವಾದ ದತ್ತಪೀಠದಲ್ಲಿ  ಶ್ರೀರಾಮ ಸೇನೆ ಈ ಬಾರಿ ಹಮ್ಮಿಕೊಂಡಿದ್ದ 20ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇಂದು ಶಾಂತಿಯುತವಾಗಿ ತೆರೆ ಬಿದ್ದಿತು. ಚಿಕ್ಕಮಗಳೂರು ನಗರದಲ್ಲಿ ನಡೆದ ಶೋಭಾಯಾತ್ರೆ, ದತ್ತಪೀಠದಲ್ಲಿ ಧಾರ್ಮಿಕ ಕಾರ್ಯಗಳು ಸಾಂಗವಾಗಿ ನೆರವೇರಿದವು.

Sri Ram Sena's Dattamala campaign was a peaceful eding today rav at chikkamagaluru rav
Author
First Published Nov 5, 2023, 7:36 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ನ.5): ರಾಜ್ಯದ ವಿವಾದಿತ ಕೇಂದ್ರವಾದ ದತ್ತಪೀಠದಲ್ಲಿ  ಶ್ರೀರಾಮ ಸೇನೆ ಈ ಬಾರಿ ಹಮ್ಮಿಕೊಂಡಿದ್ದ 20ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಇಂದು ಶಾಂತಿಯುತವಾಗಿ ತೆರೆ ಬಿದ್ದಿತು. ಚಿಕ್ಕಮಗಳೂರು ನಗರದಲ್ಲಿ ನಡೆದ ಶೋಭಾಯಾತ್ರೆ, ದತ್ತಪೀಠದಲ್ಲಿ ಧಾರ್ಮಿಕ ಕಾರ್ಯಗಳು ಸಾಂಗವಾಗಿ ನೆರವೇರಿದವು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶಂಕರಮಠ ಮುಂಭಾಗದಲ್ಲಿ ಬೆಳಗ್ಗೆ ಧರ್ಮ ಸಭೆ ನಡೆಯಿತು. ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದಶೆಟ್ಟಿ ಅಡ್ಯಾರ್, ಯೋಗಿ ಸಂಜೀತ್ ಸುವರ್ಣ, ವಿವೇಕ್ನಾಥ್, ರಂಜಿತ್ ಶೆಟ್ಟಿ, ಅನಿಲ್ ಆನಂದ್, ನವೀನಾ ರಂಜಿತ್ ಪಾಲ್ಗೊಂಡಿದ್ದರು..

ನಗರದಲ್ಲಿ ಶೋಭಾಯಾತ್ರೆ : 

ಧರ್ಮ ಸಭೆಯ ಬಳಿಕ ಹಾಸನ, ದಾವಣಗೆರೆ, ಕೋಲಾರ, ಬೆಂಗಳೂರು, ಹುಬ್ಬಳ್ಳಿ, ಧಾರಾವಾಡ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ದತ್ತಭಕ್ತರು ಬಸವನಹಳ್ಳಿ ರಸ್ತೆಯ ಮೂಲಕ ಶೋಭಾಯಾತ್ರೆ ಹೊರಟಿತು.  ಹನುಮಂತಪ್ಪ ವೃತ್ತ ಬಳಸಿ ಮಹಾತ್ಮಗಾಂಧಿ ರಸ್ತೆಯಲ್ಲಿ ಸಾಗಿ ಆಜಾದ್ ವೃತ್ತದಲ್ಲಿ ಮುಕ್ತಾಯಗೊಂಡಿತು.ನಾಸಿಕ್ಡೋಲ್ ಸದ್ದಿಗೆ ದತ್ತಭಕ್ತರು ಭಗವಾದ್ಜಗಳನ್ನು ಹಿಡಿದು ಭಕ್ತಿಪೂರ್ವಕವಾಗಿ ಹೆಜ್ಜೆ ಹಾಕಿದರು. ಕೋಲಾರದಿಂದ ಬಂದಿದ್ದ ಭಕ್ತರೊಬ್ಬರು ಬೃಹತ್ ಧ್ವಜವನ್ನು ಹಿಡಿದು ಸಾಗಿದರು. ಶ್ರೀರಾಮಸೇನೆಯ ಕರ್ನಾಟಕ ದತ್ತಮಾಲಾ ಅಭಿಯಾನದ ಬ್ಯಾನರ್ ಹಿಡಿದು ಮುನ್ನೆಡೆದರು.

ದರ್ಗಾದಲ್ಲಿ ದತ್ತಮಾಲಾ ಅಭಿಯಾನ: ಚಿಕ್ಕಮಗಳೂರು ಜಿಲ್ಲಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್

ಪುಷ್ಪಾಲಂಕೃತಗೊಂಡ ತೆರೆದ ವಾಹನದಲ್ಲಿ ದತ್ತಾತ್ರೇಯರ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬಾಣಗಳ ಬತ್ತಳಿಕೆಯನ್ನು ಹೆಗಲಮೇರಿಸಿಕೊಂಡು, ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ನಿಂತಿದ್ದ ಶ್ರೀರಾಮನ ಬೃಹತ್ಮೂರ್ತಿ ನೋಡುಗರ ಗಮನ ಸೆಳೆಯಿತು. ಆಜಾದ್ ವೃತ್ತದಲ್ಲಿ ದತ್ತಾತ್ರೇಯರ ವಿಗ್ರಹ ಮತ್ತು ಶ್ರೀರಾಮನ ಮೂರ್ತಿ ಅಕ್ಕಪಕ್ಕದಲ್ಲಿ ನಿಂತಿದ್ದಾಗ ಮಹಿಳೆಯರಾದಿಯಾಗಿ ದತ್ತಭಕ್ತರು ಸೆಲಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಳಿಕ ದತ್ತಭಕ್ತರು ತಾವು ಆಗಮಿಸಿದ್ದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದರು.

ದತ್ತಪೀಠದಲ್ಲಿ ಹೋಮ ಹವನ ,ಪಾದುಕೆ ದರ್ಶನ : 

ದತ್ತಪೀಠದಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್ನಲ್ಲಿ ಸರದಿ ಸಾಲಿನಲ್ಲಿ ನಿಂತು ದತ್ತ ಗುಹೆಯೊಳಗೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದರು. ನಂತರ ದತ್ತಪೀಠದ ಹೊರ ವಲಯದಲ್ಲಿ ನಿರ್ಮಾಣ ಮಾಡಲಿರುವ ಶೆಡ್ನಲ್ಲಿ ಸತ್ಯದತ್ತ ವ್ರತ, ದತ್ತಹೋಮ, ಪೂರ್ಣಾಹುತಿಯ ನಂತರ ದತ್ತಭಕ್ತರು ಊರುಗಳಿಗೆ ವಾಪಸ್ ತೆರಳಿದರು.

ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೋಡ, ಕೆಲವೆಡೆ ಮಳೆಯ ವಾತಾವರಣ ಇತ್ತು. ದತ್ತಪೀಠ ಸುತ್ತಮುತ್ತ ಮಧ್ಯಾಹ್ನದ ನಂತರ ಮಳೆ ಬಂದಿತು. ಈ ಮಳೆಯಲ್ಲಿಯೇ ದತ್ತಭಕ್ತರು, ಸರದಿ ಸಾಲಿನಲ್ಲಿ ನಿಂತು ದತ್ತ ಪಾದುಕೆಗಳ ದರ್ಶನ ಪಡೆದರು.

ಶ್ರೀ ರಾಮಸೇನೆ ವತಿಯಿಂದ ನಡೆಯುವ ದತ್ತ ಜಯಂತಿಗೆ ಕಾಫಿನಾಡು ಹೈಅಲರ್ಟ್ 

 ದತ್ತಭಕ್ತರು ಪೀಠಕ್ಕೆ ಎಂಟ್ರಿ ಕೊಟ್ಟ ಕೆಲವೇ ಸಮಯದಲ್ಲಿ ಆರಂಭವಾದ ಮಳೆ ಸಂಜೆಯವರೆಗೆ ನಿರಂತರವಾಗಿ ಬರುತ್ತಲೇ ಇತ್ತು.ದತ್ತಪೀಠಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಎಚ್.ಡಿ. ರಾಜೇಶ್, ತಹಶೀಲ್ದಾರ್ ಡಾ. ಸುಮಂತ್ ಭೇಟಿ ನೀಡಿದ್ದರು. ಈ ಬಾರಿ ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನಕ್ಕೆ ಶಾಂತಿಯುತ ತೆರೆ ಬಿದ್ದಿತು.

Follow Us:
Download App:
  • android
  • ios