ಬಳ್ಳಾರಿ :  ಬಜೆಟ್ ಸಂದರ್ಭದಲ್ಲಿ ಬಿಎಸ್ ವೈ ಕುರಿತ ಆಡಿಯೋವನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಮೊಳಕಲ್ಮೂರು ಶಾಸಕ ಬಿ. ಶ್ರೀರಾಮುಲು ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸಿಎಂ ಕುಮಾರ ಸ್ವಾಮಿ ಆಡಿಯೋ, ವಿಡಿಯೋ ಬಿಡುಗಡೆ ಮಾಡುವ ಮೂಲಕ ಮಿಮಿಕ್ರಿಯಲ್ಲಿ ತೊಡಗಿದ್ದಾರೆ. ನಕಲಿ ಆಡಿಯೋ ಬಿಡುಗಡೆ ಮಾಡುವ ಮೂಲಕ ಬಿಎಸ್ ವೈ ವಿರುದ್ಧ ತಂತ್ರ, ಕುತಂತ್ರ ಹೆಣೆಯಲಾಗುತ್ತಿದೆ. 

ಒಂದೆಡೆ ಕುಮಾರಸ್ವಾಮಿಯವರು ಆಡಿಯೋ ಬಗ್ಗೆ ಸ್ಪಷ್ಟತೆ ಇಲ್ಲದೆ ಮಾತನಾಡುತ್ತಿದ್ದಾರೆ.  ರಾಜ್ಯದ ಬಜೆಟ್ ಮಂಡಿಸುವ ಅಗತ್ಯಕ್ಕಿಂತ ಸಿಎಂಗೆ ಆಡಿಯೋ ಬಿಡುಗಡೆ ಮುಖ್ಯ ಎಂಬುದನ್ನು ಸಾಬೀತು ಪಡಿಸಿದರು. ಆಡಿಯೋ ವೀಡಿಯೋ ಡಬ್ಬಿಂಗ್ ನಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಸ್ಪೀಕರ್ ಹೇಸರನ್ನು ಹಾಳು ಮಾಡುವ ಉದ್ದೇಶದಿಂದ ಅವರ ಹೆಸರನ್ನು ಇದರಲ್ಲಿ ಎಳೆಯಲಾಗಿದೆ. ಬಜೆಟ್ ಸಂದರ್ಭದಲ್ಲಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸಮಾಡಿದ್ದಾರೆ ಎಂದರು.

ಈ ಹಿಂದೆ ಕುಮಾರಸ್ವಾಮಿ ನಾನು ಸಮ್ಮಿಶ್ರ ಸರ್ಕಾರದಲ್ಲಿ ಕ್ಲಕ್೯ ಇದ್ದಹಾಗೇ ಎನ್ನುವ ಹೇಳಿಕೆ ನೀಡಿದ್ದರು. ಇವರು ಗೆದ್ದಿರುವ 35ಸ್ಥಾನಕ್ಕೆ ಡಿಸಿ ಹುದ್ದೆ ಕೊಡಬೇಕಿತ್ತಾ ಎಂದು ಟೀಕಿಸಿದರು. ಬಜೆಟ್ ನಲ್ಲಿ ಉತ್ತರ ಕನ್ನಡ ಭಾಗವನ್ನು ಸಂರ್ಪೂ ಕಡೆಗಣಿಸಲಾಗಿದೆ. ರಾಜ್ಯದ ಕೇವಲ ಐದು ಜಿಲ್ಲೆಗಳಿಗೆ ಮಾತ್ರ ಬಜೆಟ್ ಸೀಮಿತವಾಗಿದೆ. ಬಜೆಟ್ ಪುಸ್ತಕ ನೀಡಿಲ್ಲ. ಸಮ್ಮಿಶ್ರ ಸರ್ಕಾರದ ಧೋರಣೆಯಿಂದ ಹೊರನಡೆಯಲಾಗಿದೆ ಎಂದರು.

ಸಿಎಂ ಕುಮಾರಸ್ವಾಮಿ ಐಶಾರಾಮಿ ಹೋಟೆಲ್ ನಲ್ಲಿ ಜೀವನ ನಡೆಸುವ ಮೂಲಕ ಕೋಟ್ಯಂತರ ರೂ. ವೆಚ್ಚವನ್ನು ಪಿಡಿಬ್ಲ್ಯೂಡಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ತಲೆಗೆ ಕಟ್ಟುತ್ತಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದರು.

ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಸುತ್ತಿಲ್ಲ. ಶಾಸಕ ಗಣೇಶ್ ಬಂಧನಕ್ಕೆ ಪಕ್ಷದಿಂದ ಒತ್ತಾಯಿಸಲಾಗಿದೆ. ಗಣೇಶ, ನಾಗೇಂದ್ರ ನಮ್ಮ ಸಂಪರ್ಕದಲ್ಲಿಲ್ಲ. ನಾವು ಯಾವುದೇ ಅತೃಪ್ತ ಸಂಪರ್ಕ ಮಾಡಿಲ್ಲ. ಅವರು ಎಲ್ಲಿ ಹೋದರೂ ನಮಗೆ ಸಂಬಂಧವಿಲ್ಲ. ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿವೆ ಎಂದು ಆಪರೇಷನ್ ಕಮಲ ಕುರಿತು ಮಾತನಾಡಲು ನುಣುಚಿಕೊಂಡರು.