ಮಂಗಳೂರು, (ಜ.20): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬ್ಯಾಗ್‌ನಲ್ಲಿ ಪತ್ತೆಯಾಗಿದ್ದ ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.

ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಕೆಂಜಾರು ಮೈದಾನದಲ್ಲಿ 12 ಅಡಿ ಗುಂಡಿ ತೋಡಿ ಅದರಲ್ಲಿ ಬಾಂಬ್‌ ಇರಿಸಿ ರಿಮೋಟ್ ಮೂಲಕ ಸ್ಫೋಟಿಸಿ ನಿಷ್ಕ್ರಿಸಿದ್ದಾರೆ.

ಮಂಗಳೂರು ಕೆಂಜಾರು ಮೈದಾನದಲ್ಲಿ ಬಾಂಬ್ ನಿಷ್ಕ್ರಿಯ ಪ್ರಕ್ರಿಯೆ!

10 ಕೆ.ಜಿ. ಸುಧಾರಿತ ಬಾಂಬ್‌ನ್ನು  ನಿಷ್ಕ್ರಿಯ ತಜ್ಞರು ಕಾರ್ಯಚರಣೆಗೊಳಿಸಿ ಸ್ಪೋಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಬೆಳಗ್ಗೆ 10 ಗಂಟೆಯಿಂದಲೇ ಶುರುವಾಗಿದ್ದ ಕಾರ್ಯಚರಣೆ ಸಂಜೆ 30ಕ್ಕೆ ಯಶಸ್ವಿಯಾಗಿದೆ.

ಈ ಮೂಲಕ ದೊಡ್ಡ ದುರಂತವೊಂದು ತಪ್ಪಿದಂತಾಗಿದ್ದು, ಮಂಗಳೂರು ಜನತೆ ನಿಟ್ಟುಸಿರು ಬಿಡುವಂತಾಗಿದೆ. 

ಸೋಮವಾರ ಬೆಳಗ್ಗೆ ಸುಮಾರು 10 ಗಂಟೆಗೆ  ಮಂಗಳೂರಿನ ಬಜ್ಪೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಲ್ಯಾಪ್ ಟ್ಯಾಪ್ ಬ್ಯಾಗೊಂದು ಟಿಕೆಟ್ ಕೌಂಟರ್ ಹತ್ತಿರ ಅನುಮಾನಸ್ಪದವಾಗಿ ಪತ್ತೆಯಾಗಿತ್ತು. 

ಬ್ಯಾಗ್‌ನ್ನು ಶ್ವಾನಗಳು ಪರಿಶೀಲಿಸಿದಾಗ ಬಾಂಬ್ ಇರುವುದು ಖಚಿತವಾಗಿತ್ತು.ಕೂಡಲೇ ಎಚ್ಚೆತ್ತ ಸಿಬ್ಬಂದಿ, ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದರು.

ವಿಮಾನ ನಿಲ್ದಾಣದಿಂದ ಸುಮಾರು 500 ಮೀಟರ್ ನಷ್ಟು ದೂರದಲ್ಲಿ ಇದನ್ನು ಇರಿಸಲಾಗಿದ್ದು, ಈ ಭಾಗಕ್ಕೆ ಯಾರಿಗೂ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿತ್ತು.