ವಿಶೇಷ ವರದಿ

ಬೆಂಗಳೂರು[ಫೆ.24]: ಯಲಹಂಕ ಬಳಿ ಬಯಲು ವಾಹನ ನಿಲುಗಡೆ ಪ್ರದೇಶದಲ್ಲಿ ಶನಿವಾರ ಉಂಟಾದ ಬೆಂಕಿ ಅನಾಹುತದಲ್ಲಿ ನೂರಾರು ಕಾರುಗಳು ಆಹುತಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಈ ರೀತಿ ದುರಂತ ಬೆಂಗಳೂರಿನ ಇತರೆಡೆ ಸಂಭವಿಸಿದರೆ ಯಾವ ರೀತಿ ಸುರಕ್ಷತೆ ಇದೆ ಎಂಬ ಬಗ್ಗೆ ರಿಯಾಲಿಟಿ ಚೆಕ್ ನಡೆಸಿತು. ಈ ವೇಳೆ ಬಯಲು ವಾಹನ ನಿಲುಗಡೆ ಪ್ರದೇಶಗಳಲ್ಲಿ ಯಾವ ರೀತಿಯ ಸುರಕ್ಷತೆಯೂ ಕಂಡುಬರಲಿಲ್ಲ. ಇಂಥ ಪಾರ್ಕಿಂಗ್ ಸ್ಥಳಗಳನ್ನು ನಿಯಂ ತ್ರಿಸಲು ಬೆಂಗಳೂರಿನಲ್ಲಿ ನಿಯ ಮಾವಳಿಗಳೇ ಇಲ್ಲ. ಇರುವ ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ. ಬಿಬಿಎಂಪಿ ಕೇವಲ ಕಟ್ಟಡಗಳಲ್ಲಿನ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ನಿಯಮಾವಳಿ ಹೊಂದಿದೆ. ನಿಗಾಕ್ಕೂ ವ್ಯವಸ್ಥೆಯನ್ನು ಹೊಂದಿದೆ.

ಆದರೆ, ಬಯಲು ವಾಹನ ನಿಲುಗಡೆ ಬಗ್ಗೆ ಯಾವುದೇ ನಿರ್ದಿಷ್ಟ ನಿಯಮವನ್ನು ಹೊಂದಿಲ್ಲ. ಹೀಗಾಗಿ, ನಗರ ದಲ್ಲಿ ನಿಮ್ಮ ಬಳಿ ಖಾಲಿ ನಿವೇಶನವೋ ಅಥವಾ ಒಂದಷ್ಟು ಖಾಲಿ ಪ್ರದೇಶವೋ ಇದ್ದರೇ ಅಲ್ಲಿ ನೀವು ಯಾವುದೇ ಸುರಕ್ಷತೆ ಕ್ರಮ ಕೈಗೊಳ್ಳದೇ ವಾಹನ ನಿಲುಗಡೆಯನ್ನು ಆರಂಭಿ ಸಬಹುದು. ಇದನ್ನು ನಿಗಾ ವಹಿಸಲು ಯಾರು ಇಲ್ಲ. ಪರಿಣಾಮ- ಯಲಹಂಕದಲ್ಲಿ ನಡೆದ ಭೀಕರ ದುರಂತ, ಬೆಂಗಳೂರು ನಗರದ ಯಾವುದೇ ಪ್ರದೇಶದಲ್ಲಿ ಯಾವುದೇ ಸಂದರ್ಭದಲ್ಲೂ ನಡೆಯಬಹುದು.

ತನ್ನ ವ್ಯಾಪ್ತಿಯಲ್ಲಿರುವ ಕಟ್ಟಡಗಳ ಪಾರ್ಕಿಂಗ್ ಕಡೆ ಮಾತ್ರ ಗಮನ ಹರಿಸಿರುವ ಬಿಬಿಎಂಪಿ, ಖಾಸಗಿ ಸಂಸ್ಥೆಗಳು ನಿರ್ಮಾಣ ಮಾಡಿರುವ ಮಲ್ಟಿ ಪಾರ್ಕಿಂಗ್ ವ್ಯವಸ್ಥೆಯತ್ತ ಲಕ್ಷ್ಯ ಕೊಟ್ಟಿಲ್ಲ. ಖಾಸಗಿ ಸಂಸ್ಥೆಗಳ ಪಾರ್ಕಿಂಗ್‌ನಲ್ಲಿ ವಿಮೆಯನ್ನೇ ಆಧಾರವಾಗಿಟ್ಟುಕೊಂಡು ಪಾರ್ಕಿಂಗ್ ಶುಲ್ಕಕ್ಕಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿವೆ. ನಗರ ವ್ಯಾಪ್ತಿಯಲ್ಲಿರುವ ಓಪನ್ ಸ್ಪೇಸ್ ಪಾರ್ಕಿಂಗ್‌ಗಳಿಗೆ ನಿಯಮಗಳೇ ಇಲ್ಲದಂತಾಗಿದೆ.

ವಿಶಾಲವಾದ ಖಾಲಿ ಜಾಗಗಳಲ್ಲಿ ವಿವಿಧ ಖಾಸಗಿ ಸಂಸ್ಥೆಗಳ ‘ಓಪನ್ ಸ್ಪೇಸ್ ಪಾರ್ಕಿಂಗ್’, ಕಾರುಗಳ ಖರೀದಿ ಮತ್ತು ಮಾರಾಟ, ಲೋನ್ ಪಾವತಿಸದ ವಾಹನಗಳ ಜಪ್ತಿ ಮಾಡಿ ಪಾರ್ಕಿಂಗ್ ಮಾಡುವುದಕ್ಕಾಗಿ ಪಾಲಿಕೆ ವತಿಯಿಂದ ಅನುಮತಿ ಪಡೆಯುವ ಕುರಿತು ನಿಯಮಗಳನ್ನು ರೂಪಿಸಿಲ್ಲ. ಕಾರುಗಳಿಗೆ ವಿಮೆ ಇರುವುದರಿಂದ ಯಾವುದೇ ತೊಂದರೆ ಇಲ್ಲ. ಅವಶ್ಯವಿದ್ದಲ್ಲಿ ಅಗ್ನಿಶಾಮಕ ದಳದ ಸಹಾಯ ಪಡೆಯುತ್ತೇವೆ ಎಂದು ಖಾಸಗಿ ಕಾರು ಪಾರ್ಕಿಂಗ್ ಮಾಲೀಕರೊಬ್ಬರು ತಿಳಿಸಿದ್ದಾರೆ.

ಇಎಂಐ ಪಾವತಿಸದ ವಾಹನಗಳನ್ನು ಜಪ್ತಿ ಮಾಡಿ, ಓಪನ್ ಸ್ಪೇಸ್ ಪಾರ್ಕಿಂಗ್‌ನಲ್ಲಿಯೇ ನಿಲ್ಲಿಸಲಾಗುತ್ತಿದೆ. ಇಲ್ಲಿಯೂ ಬಿಬಿಎಂಪಿ ಹಾಗೂ ಸಾರಿಗೆ ಇಲಾಖೆಯಿಂದಲೂ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿರುವ ಕುರಿತ ಯಾವುದೇ ನಿಯಮಗಳಿಲ್ಲ.

ಬಿಬಿಎಂಪಿ ಪಾರ್ಕಿಂಗ್:

ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ನಗರದ 10 ಕಡೆ ಬಹು ಅಂತಸ್ತಿನ ಸಂಚಾರ ಸಾಗಣೆ ನಿರ್ವಹಣೆ ಕೇಂದ್ರ(ಟಿಟಿಎಂಸಿ) ನಿರ್ಮಿಸಿದೆ. ಇದರಲ್ಲಿ ವಾಹನ ನಿಲುಗಡೆಗೂ ಕೆಲ ಅಂತಸ್ತುಗಳನ್ನು ಮೀಸಲಿರಿಸಿದೆ.

ಶಾಂತಿನಗರ, ಜಯನಗರ, ಕೆಂಗೇರಿ, ಬನಶಂಕರಿ, ಕೋರಮಂಗಲ, ಯಶವಂತಪುರ, ವಿಜಯನಗರ, ದೊಮ್ಮಲೂರು, ಐಟಿಪಿಎಲ್, ಬನ್ನೇರುಘಟ್ಟದಲ್ಲಿ ಟಿಟಿಎಂಸಿ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣದ ವೇಳೆ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗ್ನಿ ಶಾಮಕ ಇಲಾಖೆಯವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕ್ಲಿಯರೆನ್ಸ್ ನೀಡುತ್ತಾರೆ. ಇದು ಕೇವಲ ವಾಹನ ನಿಲುಗಡೆ ಸ್ಥಳಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಇಡೀ ಕಟ್ಟಡಕ್ಕೆ ಅನ್ವಯವಾಗುತ್ತದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಟಿಟಿಎಂಸಿಗಳಲ್ಲಿ ವಾಹನ ನಿಲುಗಡೆಗೆ ಟೆಂಡರ್ ಮೂಲಕವೇ ಜಾಗ ನೀಡಲಾಗುತ್ತದೆ. ಟೆಂಡರ್ ಪಡೆದ ವ್ಯಕ್ತಿ ಅಥವಾ ಸಂಸ್ಥೆಗಳು ಆ ಜಾಗದ ಜವಾಬ್ದಾರಿ ವಹಿಸಿರುತ್ತಾರೆ. ವಾಹನಗಳು ಹಾಗೂ ಅದರ ಆಗುಹೋಗುಗಳಿಗೂ ನಿಗಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೇಗಿದೆ?

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಜೆ.ಸಿ. ರಸ್ತೆ, ಎಂ.ಜಿ. ರಸ್ತೆ, ಕೆಂಪೇಗೌಡ ರಸ್ತೆ, ಸ್ವಾತಂತ್ರ್ಯ ಉದ್ಯಾನ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪಾರ್ಕಿಂಗ್ ಕಟ್ಟಡಗಳಿವೆ. ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಅಗ್ನಿಶಾಮಕ ದಳದ ವತಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಕೆಲವೊಂದು ಕಡೆ ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆದಾರರೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಈ ವಿಚಾರದಲ್ಲಿ ಪಾಲಿಕೆ ವತಿಯಿಂದ ಸುರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಗುತ್ತಿ ಗೆದಾರರೇ ನೇರ ಹೊಣೆಯಾಗಿರುತ್ತಾರೆ ಎಂದು ಪಾಲಿಕೆ ನಗರ ಯೋಜನಾ ವಿಭಾಗದ ಶ್ರೀನಿವಾಸ್ ತಿಳಿಸಿದ್ದಾರೆ.