ಮಂಗಳೂರು ಮೋದಿ ಸಮಾವೇಶಕ್ಕೆ ನಾಲ್ಕೇ ದಿನ: ಇಂದು ಎಸ್‌ಪಿಜಿ ಆಗಮನ
ಸಮಾವೇಶ ನಡೆಯುವ ಸ್ಥಳವನ್ನು ಅವಲೋಕಿಸಲಿದ್ದು, ಪ್ರಧಾನಿಗೆ ಗರಿಷ್ಠ ಭದ್ರತೆ ಕಾರಣಕ್ಕೆ ಒಂದಷ್ಟು ಮಾರ್ಪಾಟು ಮಾಡಿಕೊಳ್ಳಲಿದೆ. ಪ್ರಧಾನಿ ಭಾಷಣ ಮಾಡುವ ಪ್ರಧಾನ ವೇದಿಕೆ, ತಾತ್ಕಾಲಿಕ ಹೆಲಿಪ್ಯಾಡ್ ಸೇರಿದಂತೆ ಪ್ರಧಾನಿ ಬಂದುಹೋಗುವ ಎಲ್ಲ ಆಯಾಮಗಳಲ್ಲೂ ಭದ್ರತೆಯ ಸರ್ವೇಕ್ಷಣೆ ನಡೆಸಲಿದೆ.
ಮಂಗಳೂರು(ಆ.29): ಮಂಗಳೂರಿನಲ್ಲಿ ಸೆ.2ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಇನ್ನು ನಾಲ್ಕೇ ದಿನ ಬಾಕಿ ಇದ್ದು, ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಸಿಟಿ ಮೈದಾನದಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ. ಪ್ರಧಾನಿ ಮೋದಿ ಸಮಾವೇಶಕ್ಕೆ ಪೂರ್ವಭಾವಿಯಾಗಿ ದೆಹಲಿಯಿಂದ ವಿಶೇಷ ಭದ್ರತೆಯ ಎಸ್‌ಪಿಜಿ(ಸ್ಪೆಷಲ್ ಪ್ರೊಟಕ್ಷನ್ ಗ್ರೂಪ್)ತಂಡ ಆ.29ರಂದು ಮಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಈ ತಂಡ ಸಮಾವೇಶ ನಡೆಯುವ ಸ್ಥಳವನ್ನು ಅವಲೋಕಿಸಲಿದ್ದು, ಪ್ರಧಾನಿಗೆ ಗರಿಷ್ಠ ಭದ್ರತೆ ಕಾರಣಕ್ಕೆ ಒಂದಷ್ಟು ಮಾರ್ಪಾಟು ಮಾಡಿಕೊಳ್ಳಲಿದೆ. ಪ್ರಧಾನಿ ಭಾಷಣ ಮಾಡುವ ಪ್ರಧಾನ ವೇದಿಕೆ, ತಾತ್ಕಾಲಿಕ ಹೆಲಿಪ್ಯಾಡ್ ಸೇರಿದಂತೆ ಪ್ರಧಾನಿ ಬಂದುಹೋಗುವ ಎಲ್ಲ ಆಯಾಮಗಳಲ್ಲೂ ಭದ್ರತೆಯ ಸರ್ವೇಕ್ಷಣೆ ನಡೆಸಲಿದೆ.
30 ಎಕರೆ ವಿಶಾಲ ಪ್ರದೇಶದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವ ವೇದಿಕೆ ಹಾಗೂ ವಿಶಾಲ ಸಭಾಂಗಣಕ್ಕೆ ಜರ್ಮನ್ ತಂತ್ರಜ್ಞಾನ ಮಾದರಿಯ ಬೃಹತ್ ಪೆಂಡಾಲ್ ಅಳವಡಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ದೆಹಲಿಯ ಆ್ಯಕ್ಸಿಸ್ ಕಮ್ಯುನಿಕೇಷನ್ಸ್ ಏಜೆನ್ಸಿ ಇದರ ಉಸ್ತುವಾರಿ ವಹಿಸಿಕೊಂಡಿದೆ.ಇಡೀ ಮೈದಾನವನ್ನು ಸಮತಟ್ಟುಗೊಳಿಸುವ ಕೆಲಸ ಪೂರ್ಣಗೊಂಡಿದೆ. ಭಾನುವಾರ ಸಮಾವೇಶ ಆವರಣ ಪ್ರವೇಶಿಸುವಲ್ಲಿ ತುರ್ತು ಡಾಂಬರೀಕರಣ ನಡೆಸಲಾಗಿದೆ.
ಗೋಲ್ಡ್‌ಫಿಂಚ್ ಮೈದಾನ ಹೊರ ಆವರಣದ ಸ್ಟಾಕ್ ಎಕ್ಸ್‌ಚೇಂಜ್ ಬಳಿ 9 ಎಕರೆ ಜಾಗದಲ್ಲಿ ಮೂರು ಪ್ರತ್ಯೇಕ ಹೆಲಿಪ್ಯಾಡ್‌ಗಳ ನಿರ್ಮಾಣವಾಗಲಿದೆ. ತಂತ್ರಜ್ಞರ ಮಾರ್ಗದರ್ಶನದಲ್ಲಿ ಕಾಮಗಾರಿ ಆರಂಭಿಸಲಾಗಿದೆ.
ಪ್ರಧಾನಿ ಮೋದಿ ಮಂಗಳೂರು ಭೇಟಿ ವೇಳೆ ಒಂದೇ ಕಲ್ಲಿಗೆ ಎರಡು ಹಕ್ಕಿ ಬಿಜೆಪಿ ಗುರಿ..!
ಗುಂಡಿ ಮುಚ್ಚುವ ಕಾಮಗಾರಿ:
ಬಂಗ್ರಕೂಳೂರು ಸಂಪರ್ಕಿಸುವ ಮುಖ್ಯ ರಸ್ತೆ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದೆ. ಜನಪ್ರತಿನಿಧಿಗಳಿಗೆ ಸಾಕಷ್ಟುಬಾರಿ ಒತ್ತಾಯಿಸಿದರೂ ತೇಪೆ ಕಾಮಗಾರಿ ನಡೆಸಿಲ್ಲ, ಈಗ ಪ್ರಧಾನಿ ಆಗಮನ ವೇಳೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ನೆಟ್ಟಿಗರು ಜಾಲತಾಣದಲ್ಲಿ ಲೇವಡಿ ಮಾಡುತ್ತಿದ್ದಾರೆ.
ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ) ಮತ್ತು ಜಿಲ್ಲಾಡಳಿತ ಸೇರಿ ಪ್ರಧಾನಿ ಕಾರ್ಯಕ್ರಮದ ಇಡೀ ನೇತೃತ್ವ ನೋಡಿಕೊಳ್ಳುತ್ತಿದೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಶನಿವಾರ ರಾತ್ರಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಸ್ಥಳೀಯ ಪಾಲಿಕೆ ಸದಸ್ಯ ಕಿರಣ್ ಕುಮಾರ್ ಭಾನುವಾರ ಕೂಡ ಮೈದಾನಕ್ಕೆ ಭೇಟಿ ನೀಡಿ ಪೂರ್ವಸಿದ್ಧತಾ ಕಾಮಗಾರಿಯನ್ನು ವೀಕ್ಷಿಸಿದ್ದಾರೆ.
ಕಾಮೆಂಟರ್‌ಗಳ ಲಿಸ್ಟ್ ರೆಡಿ!:
ಪ್ರಧಾನಿ ಮೋದಿ ಸಮಾವೇಶಕ್ಕೆ ಯಾವುದೇ ನೆಪದಲ್ಲಿ ಅಡ್ಡಿಪಡಿಸುವ ಬಗ್ಗೆ ಜಾಲತಾಣಗಳಲ್ಲಿ ಕಂಡುಬಂದಿರುವ ಪೋಸ್ಟರ್‌ಗಳನ್ನು ಪೊಲೀಸ್ ಇಲಾಖೆ ಗಂಭೀರ ಪರಿಣಿಸಿದೆ. ಕರಾವಳಿಯ ಬಿಜೆಪಿ ನಾಯಕರ ಅಸಮಾಧಾನವನ್ನು ಸಮಾವೇಶದಲ್ಲಿ ಹೊರಹಾಕುವುದಾಗಲೀ ಅಥವಾ ಪ್ರಧಾನಿ ರಸ್ತೆ ಮಾರ್ಗದಲ್ಲಿ ಸಂಚರಿಸುವ ವೇಳೆ ಅನಪೇಕ್ಷಿತ ಘಟನೆಗಳಿಗೆ ಆಸ್ಪದ ಸಿಗದಂತೆ ಅತ್ಯಂತ ನಿಗಾ ವಹಿಸಲಾಗುತ್ತಿದೆ. ಈಗಾಗಲೇ ಮೋದಿ ಸಮಾವೇಶ ವಿರುದ್ಧ ಜಾಲತಾಣಗಳಲ್ಲಿ ಪೋಸ್ಟರ್ ಹಾಕಿರುವವರ ಪಟ್ಟಿಸಿದ್ಧವಾಗಿದ್ದು, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ವಾಸ್ತವ್ಯಕ್ಕೆ ಸರ್ಕ್ಯೂಟ್ ಹೌಸ್ ಏರ್ಪಾಟು:
ಲಭ್ಯ ಮಾಹಿತಿ ಪ್ರಕಾರ ಪ್ರಧಾನಿ ಮೋದಿ ಮಂಗಳೂರಿನಲ್ಲಿ ವಾಸ್ತವ್ಯದ ಸಾಧ್ಯತೆ ಇದ್ದರೆ, ಅದಕ್ಕೂ ಕದ್ರಿಯ ಸರ್ಕ್ಯೂಟ್ ಹೌಸ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಹಿಂದೆ ಎರಡು ಬಾರಿ ಪ್ರಧಾನಿ ಮೋದಿ ಅವರು ಕದ್ರಿ ಸಕ್ರ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಪ್ರಧಾನಿಗೆ ಆಹಾರ ವ್ಯವಸ್ಥೆ ಇನ್ನಷ್ಟೆಅಂತಿಮಗೊಳ್ಳಬೇಕಾಗಿದೆ.
ಪ್ರಧಾನಿ ಸಮಾವೇಶದಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲ ತಾಲೂಕುಗಳಿಂದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಕರೆದುಕೊಂಡು ಬರಲು 2 ಸಾವಿರಕ್ಕೂ ಅಧಿಕ ಬಸ್‌ಗಳನ್ನು ನಿಗದಿಪಡಿಸಲಾಗಿದೆ. ಸುಮಾರು 1 ಲಕ್ಷ ಫಲಾನುಭವಿಗಳಲ್ಲದೆ, 1 ಲಕ್ಷದಷ್ಟುಬಿಜೆಪಿ ಕಾರ್ಯಕರ್ತರೂ ಪ್ರತ್ಯೇಕ ವಾಹನಗಳಲ್ಲಿ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಸಮಾವೇಶದ ಸಭಾಂಗಣದಲ್ಲಿ ಫಲಾನುಭವಿಗಳಿಗೆ ಸುಮಾರು 60 ಸಾವಿರಕ್ಕೂ ಅಧಿಕ ಪುಲಾವ್ ಮತ್ತು ಸಲಾಡ್ ವಿತರಿಸಲಾಗುತ್ತದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಲಘು ಉಪಹಾರ ವ್ಯವಸ್ಥೆಗೊಳಿಸಲಾಗಿದೆ.
ಮೋದಿ ಮಂಗಳೂರು ಸಮಾವೇಶಕ್ಕೆ 2 ಲಕ್ಷ ಜನ?
ಬೆಳಗ್ಗಿನಿಂದಲೇ ಸಂಚಾರ ಬಂದ್
ಪ್ರಧಾನಿ ಸಮಾವೇಶ ನಡೆಯುವ ಬಂಗ್ರಕೂಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ -66ರಲ್ಲಿ ಸಂಚಾರ ಮಾರ್ಪಾಟುಗೊಳಿಸಲಾಗುತ್ತದೆ. ಸಮಾವೇಶಕ್ಕೆ ಫಲಾನುಭವಿಗಳು ಸಹಸ್ರ ಸಂಖ್ಯೆಯಲ್ಲಿ ಆಗಮಿಸುವುದರಿಂದ ಬೆಳಗ್ಗಿನಿಂದಲೇ ಸಂಚಾರ ಮಾರ್ಪಾಟುಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ. ಇದಕ್ಕೆ ಪರ್ಯಾಯವಾಗಿ ಮೂಲ್ಕಿ, ಸುರತ್ಕಲ್, ನಂತೂರು ಕ್ರಾಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಪ್ರಧಾನಿ ಮೋದಿ ಸಮಾವೇಶ ಮುಕ್ತಾಯಗೊಳಿಸಿದ ಬಳಿಕವೇ ಬಂಗ್ರಕೂಳೂರಿನಲ್ಲಿ ಇತರೆ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಹವಾಮಾನ ಕೈಕೊಟ್ಟರೆ ವರ್ಚುವಲ್ ಭಾಷಣ?
ಸೆ.2ರಂದು ಹವಾಮಾನ ಇಲಾಖೆ ಪ್ರಕಾರ ಕರಾವಳಿಯಲ್ಲಿ ಭಾರಿ ಮಳೆ ಮುನ್ಸೂಚನೆ ಹೇಳಲಾಗಿದೆ. ಹೀಗಾಗಿ ನೆಲದಿಂದ ಫ್ಲ್ಯಾಟ್‌ಫಾರಂ ರಚಿಸಿ ವೇದಿಕೆ ಸಹಿತ ಸಭಾಂಗಣ ನಿರ್ಮಿಸಲಾಗುತ್ತಿದೆ. ಒಂದು ವೇಳೆ ಭಾರಿ ಮಳೆಯಿಂದ ಮೋದಿ ಆಗಮನಕ್ಕೆ ಅಡಚಣೆ ಸಾಧ್ಯತೆ ಕಂಡುಬಂದರೆ ಕೊಚ್ಚಿನ್ ಕಾರ್ಯಕ್ರಮದಿಂದಲೇ ಪ್ರಧಾನಿ ವರ್ಚುವಲ್ ಮೂಲಕ ಮಾತನಾಡು ಬಗ್ಗೆಯೂ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಚ್ಚಿನ್‌ನಿಂದ ಪ್ರಧಾನಿ ಮೋದಿ ನೇರವಾಗಿ ಮಂಗಳೂರಿಗೆ ಆಗಮಿಸಿ, ವಿಮಾನ ನಿಲ್ದಾಣದಿಂದ ರಸ್ತೆ ಅಥವಾ ಹೆಲಿಕಾಪ್ಟರ್ ಮೂಲಕ ಎನ್‌ಎಂಪಿಎಗೆ ಭೇಟಿ ನೀಡುವ ಸಾಧ್ಯತೆಯೂ ಇದೆ. ಅಥವಾ ನೇರವಾಗಿ ಮೈದಾನಕ್ಕೆ ಆಗಮಿಸಿ ಅಲ್ಲಿಯೇ ಎನ್‌ಎಂಪಿಎ ಸಹಿತ ಎಲ್ಲ ಯೋಜನೆಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸುವ ಸಂಭವವೂ ಇದೆ. ಎಲ್ಲವೂ ಕೊನೆಕ್ಷಣದಲ್ಲಿ ಅಂತಿಮಗೊಳ್ಳಲಿದೆ.