ಮೋದಿ ಮಂಗಳೂರು ಸಮಾವೇಶಕ್ಕೆ 2 ಲಕ್ಷ ಜನ?
1 ಲಕ್ಷ ವಿವಿಧ ಯೋಜನೆಗಳ ಫಲಾನುಭವಿಗಳು, 1 ಲಕ್ಷ ಬಿಜೆಪಿ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ, 30 ಎಕರೆ ಪ್ರದೇಶದಲ್ಲಿ ವೇದಿಕೆ ಮತ್ತಿತರ ನಿರ್ಮಾಣ ಕಾರ್ಯ, 4 ಪ್ರವೇಶ ದ್ವಾರ ನಿರ್ಮಾಣ, ಪ್ರತ್ಯೇಕ ಹೆಲಿಪ್ಯಾಡ್
ಮಂಗಳೂರು(ಆ.28): ಸೆ.2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಅವರು ಮಂಗಳೂರಿಗೆ ಆಗಮಿಸುವ ವೇಳೆ ಸುಮಾರು ಎರಡು ಲಕ್ಷ ಮಂದಿಯ ಐತಿಹಾಸಿಕ ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ವಿಶಾಲ ಸಭಾಂಗಣ ನಿರ್ಮಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದೆ.
ಮೋದಿ ಕಾರ್ಯಕ್ರಮಕ್ಕೆ ಈ ಹಿಂದೆ ಒಂದು ಲಕ್ಷ ಫಲಾನುಭವಿಗಳನ್ನು ಸೇರಿಸಿ ಸಮಾವೇಶ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಒಂದು ಲಕ್ಷ ಫಲಾನುಭವಿಗಳು ಹಾಗೂ ಮತ್ತೆ ಒಂದು ಲಕ್ಷ ಬಿಜೆಪಿ ಕಾರ್ಯಕರ್ತರು ಸೇರಿ 2 ಲಕ್ಷ ಮಂದಿಯನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ಸಮಾವೇಶಕ್ಕಾಗಿ ಮಂಗಳೂರು ಹೊರ ವಲಯದ ಬಂಗ್ರಕೂಳೂರಿನ 30 ಎಕರೆ ಜಾಗದಲ್ಲಿ ಪ್ರಧಾನ ವೇದಿಕೆ ನಿರ್ಮಾಣ ಕಾರ್ಯ ಶನಿವಾರ ಆರಂಭವಾಗಿದೆ. ಈಗಾಗಲೇ ಇಲ್ಲಿ ಜಲ್ಲಿ, ಮಣ್ಣು ಮಿಶ್ರಣ ಮಾಡಿ ಜಾಗ ಸಮತಟ್ಟುಗೊಳಿಸಲಾಗಿದ್ದು, ವೇದಿಕೆ ನಿರ್ಮಾಣಕ್ಕೆ ಬೇಕಾದ ಸಲಕರಣೆಗಳನ್ನು ಸಿದ್ಧಗೊಳಿಸಲಾಗಿದೆ.
ಮಂಗಳೂರು: ಮೋದಿ ಸಮಾವೇಶಕ್ಕೆ ಮಳೆ ಭೀತಿ, ಕಾರ್ಯಕ್ರಮಕ್ಕೆ ವಿಶಾಲ ಜರ್ಮನ್ ಪೆಂಡಾಲ್ ಅಳವಡಿಕೆ
4 ಪ್ರವೇಶ ದ್ವಾರ:
ಪ್ರಧಾನಿ ಕಾರ್ಯಕ್ರಮ ನಡೆಯುವ ಮೈದಾನಕ್ಕೆ ನಾಲ್ಕು ಪ್ರತ್ಯೇಕ ಪ್ರವೇಶ ದ್ವಾರಗಳನ್ನು ರಚಿಸಲಾಗುತ್ತಿದೆ. ಪ್ರಧಾನ ವೇದಿಕೆ, ಸಭಾಂಗಣ ಪ್ರವೇಶಕ್ಕೂ ಪ್ರತ್ಯೇಕ ಪ್ರವೇಶ ದ್ವಾರ ರಚಿಸಲಾಗುತ್ತಿದೆ. ಇದಲ್ಲದೆ ಇತರೆ ಪ್ರವೇಶ ದ್ವಾರಗಳನ್ನೂ ಮಾಡಲಾಗುತ್ತಿದೆ.
ಪ್ರತ್ಯೇಕ ಹೆಲಿಪ್ಯಾಡ್ ರಚನೆ: ಗೋಲ್ಡ್‌ಫಿಂಚ್ ಸಿಟಿ ಮೈದಾನದ ಪಕ್ಕದಲ್ಲೇ, ಹೊರಗೆ ಸ್ಟಾಕ್ ಎಕ್ಸ್‌ಚೇಂಜ್ ಹಿಂಭಾಗದಲ್ಲಿ ಮೂರು ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಾಣವಾಗಲಿದೆ.ಅಲ್ಲದೆ ವಿಮಾನ ನಿಲ್ದಾಣದಿಂದ ಸಮಾವೇಶ ತಲುಪುವ ರಸ್ತೆಯನ್ನು ದುರಸ್ತಿ ಪಡಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರು ರಸ್ತೆ ಮಾರ್ಗ ಅಥವಾ ಹೆಲಿಕಾಪ್ಟರ್ ಮೂಲಕ ಸಮಾವೇಶಕ್ಕೆ ಆಗಮಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಭಾನುವಾರದಿಂದ ಹೆಲಿಪ್ಯಾಡ್ ನಿರ್ಮಾಣ ನಡೆಯಲಿದೆ.
ಮಾಜಿ ಸಿಎಂ ಬಿಎಸ್‌ವೈ ಭಾಗಿ?:
ಮಂಗಳೂರಲ್ಲಿ ನಡೆಯುವ ಪ್ರಧಾನಿ ಮೋದಿ ಅವರ ಪ್ರಥಮ ಸರ್ಕಾರಿ ಸಮಾವೇಶಕ್ಕೆ ಈ ಬಾರಿ ಮಾಜಿ ಸಿಎಂ ಯಡಿಯೂರಪ್ಪ ಆಗಮಿಸುವ ಸಾಧ್ಯತೆ ಇದೆ. ಇದು ಸರ್ಕಾರಿ ಕಾರ್ಯಕ್ರಮವಾದರೂ ಯಡಿಯೂರಪ್ಪ ಉಪಸ್ಥಿತಿ ಸಮಾವೇಶದ ಕಳೆ ಇನ್ನಷ್ಟು ಹೆಚ್ಚಿಸಲಿದೆ. ಪಕ್ಷಕ್ಕೂ ಹೆಚ್ಚಿನ ವರದಾನವಾಗಲಿದೆ ಎನ್ನುವುದು ಮುಖಂಡರೊಬ್ಬರ ಅನಿಸಿಕೆ.