ಬೆಂಗಳೂರು (ಫೆ. 24): ಕೇಂದ್ರ ಸರ್ಕಾರದ ಘೋಷಿತ ಬೆಂಬಲ ಬೆಲೆಯಲ್ಲಿ ಪಡಿತರ ವ್ಯವಸ್ಥೆಗೆ ಅಗತ್ಯವಿರುವಷ್ಟುಪ್ರಮಾಣದ ಆಹಾರ ಧಾನ್ಯಗಳನ್ನು ರಾಜ್ಯದ ರೈತರಿಂದಲೇ ಖರೀದಿಸಬೇಕು, ಪ್ರತೀ 5 ಕಿ.ಮೀ. ಅಂತರದಲ್ಲಿ ಖರೀದಿ ಕೇಂದ್ರಗಳ ಸ್ಥಾಪನೆ, ಸಿರಿ ಧಾನ್ಯ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ .5 ಸಾವಿರ ಬೆಂಬಲ ಘೋಷಿಸಬೇಕು ಎಂಬುದು ಸೇರಿದಂತೆ ಸಮಗ್ರ ಖರೀದಿ ನೀತಿ ರೂಪಿಸುವಂತೆ ಕರ್ನಾಟಕ ಕೃಷಿ ಬೆಲೆ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಮಂಗಳವಾರ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ನೇತೃತ್ವದ ಅಧಿಕಾರಿಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹಲವು ಶಿಫಾರಸು ಒಳಗೊಂಡ ವರದಿಯನ್ನು ಸಲ್ಲಿಸಿತು.

ರಾಜ್ಯದಲ್ಲಿ ವಾರ್ಷಿಕ 55 ಲಕ್ಷ ಟನ್‌ ಭತ್ತ, 13 ಲಕ್ಷ ಟನ್‌ ರಾಗಿ, 10 ಲಕ್ಷ ಟನ್‌ ಜೋಳ ಉತ್ಪಾದಿಸಲಾಗುತ್ತಿದೆ. ಈ ರೀತಿ ಉತ್ಪಾದನೆಯಾಗುವ ಆಹಾರ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಿಸುವುದರಿಂದ ರೈತರಿಗೆ ಖಾತ್ರಿ ಬೆಲೆ ಮತ್ತು ಸುಸ್ಥಿರ ಆದಾಯದ ಜೊತೆಗೆ ಶ್ರಮಿಕರಿಗೆ, ಸಂಸ್ಕರಣಾಕಾರರಿಗೆ, ಸಾಗಾಣಿಕೆದಾರರಿಗೆ ಉದ್ಯೋಗಾವಕಾಶ ಸಿಗುತ್ತದೆ. ಇದರಿಂದ ರೈತರ ಆದಾಯ ವೃದ್ಧಿಸಿ ರಾಜ್ಯದ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿ ಸಾಧಿಸಲು ಪೂರಕವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಕೊಯ್ಲು ಅವಧಿಯಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿಸಲು ಅವಶ್ಯವಿರುವ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಬೇಕು, 5 ಕಿ.ಮೀ ಅಂತರದಲ್ಲಿ ಖರೀದಿ ಕೇಂದ್ರಗಳ ಸ್ಥಾಪನೆ, ಪಿಎಸಿಎಸ್‌, ಎಂಪಿಸಿಎಸ್‌, ಎಪಿಎಂಸಿ, ಟಿಎಪಿಸಿಎಂಎಸ್‌, ಎಫ್‌ಪಿಒ(ರೈತ ಉತ್ಪಾದಕ ಕಂಪನಿಗಳು) ಹಾಗೂ ಸ್ವಸಹಾಯ ಗುಂಪುಗಳನ್ನು ಬಳಸಿಕೊಂಡು ಖರೀದಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಬೆಂಬಲ ಬೆಲೆ ಯೋಜನೆಯನ್ನು ರೈತ ಸ್ನೇಹಿಯಾಗಿಸಲು ಪ್ರತಿ ರೈತರಿಗೆ ವಿಧಿಸುವ ಗರಿಷ್ಠ ಪ್ರಮಾಣ ಮಿತಿಯನ್ನು ಸಡಿಲಗೊಳಿಸುವುದು, ಆವರ್ತ ನಿಧಿ ಮೊತ್ತವನ್ನು ಹೆಚ್ಚಿಸುವುದು, ಉತ್ಪನ್ನಗಳ ಸಂಗ್ರಹಣಾ ಸಾಮರ್ಥ್ಯ ಜಾಸ್ತಿ ಮಾಡುವುದು ಹೀಗೆ ಹಲವು ಅಂಶಗಳನ್ನು ಸಮಗ್ರ ಖರೀದಿ ನೀತಿಯಲ್ಲಿ ಅಳವಡಿಸಿಕೊಳ್ಳಲು ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದರು.

ಡೀಸೆಲ್ ದರ ಏರಿಕೆ ಬಳಿಕ 50000 ಸಣ್ಣ ಟ್ರಕ್‌ಗಳು ಉದ್ಯಮದಿಂದ ಹೊರಕ್ಕೆ

ಸಿರಿಧಾನ್ಯಕ್ಕೂ ಬೆಂಬಲ ಬೆಲೆ

ರಾಜ್ಯದಲ್ಲಿ 61 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 42 ಸಾವಿರ ಟನ್‌ ವಿವಿಧ ಸಿರಿಧಾನ್ಯಗಳನ್ನು ಉತ್ಪಾದಿಸಲಾಗುತ್ತಿದೆ. ಸಿರಿಧಾನ್ಯಗಳ ಬೆಳೆ ವಿಸ್ತೀರ್ಣ, ಉತ್ಪಾದನೆ, ಉತ್ಪಾದಕತೆ ಹೆಚ್ಚಿಸಲು ರೈತರಿಗೆ ಬೆಳೆ ಹಾಗೂ ಬೆಲೆ ಪ್ರೋತ್ಸಾಹ ನೀಡುವುದು ಅವಶ್ಯಕ. ಕೇಂದ್ರ ಸರ್ಕಾರ ಸಿರಿಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೃಷಿ ಬೆಲೆ ಆಯೋಗದ ಉತ್ಪಾದನಾ ವೆಚ್ಚ ಆಧರಿಸಿ ಪ್ರತಿ ಕ್ವಿಂಟಾಲ್‌ಗೆ .4500ದಿಂದ .5 ಸಾವಿರ ಬೆಂಬಲ ಬೆಲೆ ಘೋಷಿಸಬೇಕು ಎಂದು ಶಿಫಾರಸು ಮಾಡಿದೆ.

ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸಲು ರೈತರಿಂದ ನೇರವಾಗಿ ಖರೀದಿಸಿ, ಶಾಲಾ ಮಕ್ಕಳಿಗೆ ಬಿಸಿಯೂಟ, ಗರ್ಭಿಣಿ, ಬಾಣಂತಿಯರಿಗೆ ಸಿರಿಧಾನ್ಯ ಆಹಾರ ಕಿಟ್‌ ವಿತರಿಸುವ ಮೂಲಕ ಆಹಾರ ಭದ್ರತೆಯ ಜೊತೆಗೆ ಪೌಷ್ಟಿಕ ಭದ್ರತೆಯನ್ನು ಬದಗಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ ಎಂದು ಹನುಮನಗೌಡ ಬೆಳಗುರ್ಕಿ ತಿಳಿಸಿದರು.