ಬೆಂಗಳೂರು(ಸೆ.17): ಮನುಷ್ಯ ಸ್ವಾರ್ಥಕ್ಕಾಗಿ ಪರಿಸರಕ್ಕೆ ಮಾರಕವಾಗುವಂತಹ ಯೋಜನೆಗಳು ಮತ್ತು ಸಂಶೋಧನೆಗಳನ್ನು ಕೈಗೊಳ್ಳುತ್ತಿರುವ ಪರಿಣಾಮ ಹಲವು ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದರಿಂದ ಪರಿಸರ ಉಳಿಸಲು ಎಲ್ಲರೂ ಮುಂದಾಗಬೇಕು ಎಂದು ಅರಣ್ಯ ಸಚಿವ ಆನಂದ್‌ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಶ್ವ ಓಝೋನ್‌ ದಿನದ’ ಅಂಗವಾಗಿ ಅಂಚೆ ಇಲಾಖೆ ಹೊರ ತಂದಿರುವ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದರು.

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು, ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್‌ ಗೋಗಿ, ಪೋಸ್ಟ್‌ ಮಾಸ್ಟರ್‌ ಜನರಲ್‌ ರಾಜೇಂದ್ರ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಸೋಮವಾರಪೇಟೆ ಅರಣ್ಯದಲ್ಲಿ ಸಿಕ್ಕ ಅಮೂಲ್ಯ ದಾಖಲೆ ಕಂಡವರು ಬೆಚ್ಚಿಬಿದ್ರು!

ಮನುಷ್ಯ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಸೇರಿದಂತೆ ಪ್ರತಿ ಹಂತದಲ್ಲಿಯೂ ಪ್ರಕೃತಿಯ ಮೇಲೆ ದಾಳಿ ಮಾಡುತ್ತಿದ್ದಾನೆ. ಪ್ರಸ್ತುತ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ನಾವೆಲ್ಲರೂ ನೇರ ಹೊಣೆಗಾರನಾಗಿದ್ದೇವೆ. ಕೊರೋನಾದಂತಹ ಮಾರಕ ಕಾಯಿಲೆಗಳು ಬಂದ ಪರಿಣಾಮ ಮುಖಕ್ಕೆ ಮಾಸ್ಕ್‌ ಧರಿಸಿ ಬದುಕುವಂತಹ ಸ್ಥಿತಿ ಎದುರಾಗಿದೆ. ಕೊರೋನಾದಿಂದ ಮನುಷ್ಯ ಭವಿಷ್ಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ದೊಡ್ಡ ಪಾಠ ಕಲಿಯುವ ಜೊತೆಗೆ ಮುಂದಿನ ದಿನಗಳಲ್ಲಿ ಪ್ರಕೃತಿಗೆ ವಿರುದ್ಧವಾದ ತೀರ್ಮಾನಗಳನ್ನು ಕೈಗೊಳ್ಳಬಾರದು ಎಂಬುದನ್ನು ಮನಗಂಡಿದ್ದಾನೆ ಎಂದು ಹೇಳಿದರು.

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಮಾತನಾಡಿ, ದೀಪಾವಳಿ, ಗಣೇಶ ಹಬ್ಬಗಳಂದು ಪರಿಸರಕ್ಕೆ ಹಾನಿಯಾಗುವುದನ್ನು ತಡೆಯಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.