ಬೆಂಗಳೂರು :  ನಟ ಪ್ರಕಾಶ್ ರಾಜ್ ಕುಟುಂಬದ ಖಾಸಗಿ ಜೀವನದ ಕುರಿತು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ. 

ತಮ್ಮ ಕುಟುಂಬದ ಖಾಸಗಿ ಬದುಕಿನ ಕುರಿತು ಪ್ರತಾಪ್ ಸಿಂಹ ನೀಡಿದ ಹೇಳಿಕೆಯು ಖಾಸಗಿ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಪ್ರಕಾಶ್ ರಾಜ್ ಮೈಸೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 

ಪ್ರತಾಪ್ ಸಿಂಹ ಜನಪ್ರತಿನಿಧಿ ಯಾಗಿರುವ ಕಾರಣ ಪ್ರಕರಣವು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಹೇಳಿಕೆ ದಾಖಲಿಸುವ ಸಂಬಂಧ ಸಿಂಹ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. 

ನಾನು ಸಂವಿಧಾನಬದ್ಧವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಉದ್ದೇಶ ಹೊಂದಿಲ್ಲ ಹಾಗೂ ಯಾರದ್ದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿಲ್ಲ ಎಂದು ಪ್ರಕಾಶ್ ರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.