Asianet Suvarna News Asianet Suvarna News

ಆಸ್ತಿಗಾಗಿ ಹೆತ್ತವರನ್ನೇ ಕೊಲ್ಲುವ, ಕಚ್ಚಾಡುವ ಇಂದಿನವರು ಶ್ರೀರಾಮನ ತ್ಯಾಗವನ್ನು ಮನಗಾಣಬೇಕು: ನಿರ್ಮಲಾನಂದನಾಥ ಸ್ವಾಮೀಜಿ ಲೇಖನ

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸೋಣ. ಶ್ರೀರಾಮನ ದರ್ಶನ ಮಾಡುವುದು ಮಾತ್ರವಲ್ಲ, ಮಕ್ಕಳಿಗೆ ಶ್ರೀರಾಮನ ಮುಖಾಂತರ ಧರ್ಮವನ್ನು, ನೈತಿಕತೆಯನ್ನು, ನೀತಿಯನ್ನು ಹಾಗೂ ಒಟ್ಟು ಬದುಕನ್ನು ಕಟ್ಟಿಕೊಡುವ ಪರಿಯನ್ನು ಹೇಳಿಕೊಡೋಣ.

Special Article By Nirmalanandanatha Swamiji Over Ayodhya Ram Mandir gvd
Author
First Published Jan 22, 2024, 8:24 AM IST

ಡಾ॥ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು, ಆದಿಚುಂಚನಗಿರಿ ಮಹಾಸಂಸ್ಥಾನ ಮಠ

ಕಳೆದ ಹಲವು ಶತಮಾನಗಳಿಂದ ಕೋಟ್ಯಂತರ ಭಕ್ತರ ನಿರೀಕ್ಷೆಯಾಗಿದ್ದ ಶ್ರೀರಾಮನು ಜನಿಸಿದ ಸ್ಥಳದಲ್ಲಿಯೇ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಅಭೀಪ್ಸೆಯು ಸಾಕಾರವಾಗುತ್ತಿರುವ ಅಮೃತ ಘಳಿಗೆಯಲ್ಲಿ ನಾವಿದ್ದೇವೆ. ಅಯೋಧ್ಯೆಯಲ್ಲಿ 2020ರ ಆ.5ರಂದು ದೇಶದ ಗಣ್ಯ ಮಾನ್ಯರು, ಸಾಧು, ಸತ್ಪುರುಷರು, ಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಶ್ರೀರಾಮನ ದೇಗುಲಕ್ಕೆ ರಜತ ಇಟ್ಟಿಗೆಗಳನ್ನಿಟ್ಟು ಶಿಲಾನ್ಯಾಸ ನೆರವೇರಿಸಿದ್ದರು. ಆ ಶುಭ ಸಂದರ್ಭದಲ್ಲಿ ನಾವೂ ಉಪಸ್ಥಿತರಿದ್ದು ಸಾಕ್ಷೀಕರಿಸಿದ್ದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸದ್ಭಕ್ತರಿಗೆಲ್ಲ ಹೆಮ್ಮೆಯ ವಿಷಯವಾಗಿತ್ತು. ಅಂತೆಯೇ ಮಂದಿರ ಲೋಕಾರ್ಪಣೆಯ ಈ ಶುಭ ಸಂದರ್ಭವೂ ಕೂಡ. ಶ್ರೀರಾಮನನ್ನು ಶ್ರದ್ಧಾಭಕ್ತಿಯಿಂದ ಅರ್ಚಿಸುವ ಭಾರತೀಯರಿಗೆ 2024ರ ಜನವರಿ 22 ಅವಿಸ್ಮರಣೀಯ ದಿನವಾಗಿದೆ.

ರಾಮರಾಜ್ಯದ ಹರಿಕಾರ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಭಾರತೀಯರ ಪಾಲಿನ ಆರಾಧ್ಯ ದೈವ. ಮಹಾವಿಷ್ಣುವಿನ ಅವತಾರಿ. ಹಲವು ಮಂದಿ ಮಹಾತ್ಮರು, ಅವತಾರ ಪುರುಷರು ಬಾಳಿ ತಮ್ಮ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಸಿದ ಈ ಪುಣ್ಯಭೂಮಿ ಭಾರತದ ಮಹತ್ವವನ್ನು ಸಾರಿದವರಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಿಗೆ ಅಗ್ರಸ್ಥಾನ. ಶ್ರೀರಾಮಚಂದ್ರ ಒಬ್ಬ ಉತ್ತಮ ಆಡಳಿಗಾರನೂ ಹೌದು. ಹೆತ್ತವರಿಗೆ ಸತ್ಪುತ್ರನಾಗಿದ್ದ, ಪ್ರಜೆಗಳ ಪಾಲಿಗೆ ಆದರ್ಶ ಪುರುಷೋತ್ತಮನಾಗಿದ್ದ. ಶ್ರೀರಾಮಚಂದ್ರ ಮತ್ತು ಮಾತೆ ಜಾನಕಿಯ ಜೀವನ ಸ್ತ್ರೀ ಪುರುಷರೆನ್ನದೆ ಸಕಲರಿಗೂ ಆದರ್ಶ. ರಾಮ ಎಂದರೆ ದೈವ, ರಾಮ ಎಂದರೆ ಬೆಳಕು. ರಾಮ ಎಂದರೆ ಧರ್ಮ, ರಾಮ ಎಂದರೆ ಸಂಸ್ಕೃತಿ. ಪ್ರಜಾಕಲ್ಯಾಣಕ್ಕಾಗಿ ಸದಾ ಸ್ಪಂದಿಸುತ್ತಿದ್ದ ರಾಜಾರಾಮ ಎಂದಿಗೂ ಜೀವಂತ!

ಅಯೋಧ್ಯೆ ರಾಮಮಂದಿರ ಇಡೀ ವಿಶ್ವಕ್ಕೇ ದಾರಿದೀಪ: ಬಸವರಾಜ ಬೊಮ್ಮಾಯಿ ವಿಶೇಷ ಲೇಖನ

ಸಂಪತ್ತಿನ ವ್ಯಾಮೋಹವೇ ಇರಲಿಲ್ಲ: ಈ ದೇವಪುರುಷನಿಗೆ ಹಣ-ಅಂತಸ್ತು-ಆಸ್ತಿಪಾಸ್ತಿಗಳ ವ್ಯಾಮೋಹ ಇರಲಿಲ್ಲ. ಪಿತೃವಾಕ್ಯವನ್ನು ಪಾಲಿಸಲು ನಗು ನಗುತ್ತಲೇ 14 ವರ್ಷಗಳ ಕಾಲ ವನವಾಸಕ್ಕೆ ತೆರಳಿದ ಶ್ರೀರಾಮಚಂದ್ರ ತನ್ನ ಸಹೋದರ ಭರತನಿಗೆ ರಾಜ್ಯಭಾರ ಮಾಡಲು ತುಂಬು ಹೃದಯದಿಂದ ಹರಸಿದ್ದ. ರಾವಣನನ್ನು ವಧಿಸಿದ ಮೇಲೆ ರಾವಣನ ರಾಜ್ಯದ ಅಪಾರ ಸಂಪತ್ತನ್ನು ನೋಡಿ ಲಕ್ಷ್ಮಣ ಮೈ ಮರೆಯುತ್ತಾನೆ. ಆಗ ರಾಮ ಹೇಳುತ್ತಾನೆ- ‘ಸಹೋದರ ಇದು ನಮ್ಮ ನೆಲೆಯಲ್ಲ. ನಮ್ಮ ತಾಯ್ನಾಡು ಅಯೋಧ್ಯೆ. ಮೇಲಾಗಿ ಈ ಸಂಪತ್ತು ನಮ್ಮದಲ್ಲ. ಇದರ ವ್ಯಾಮೋಹ ಅತ್ಯಂತ ಅಪಾಯಕಾರಿ. ಸಂಪತ್ತಿನ ಬೆನ್ನು ಬಿದ್ದವ ಅಮಾನುಷನಾಗುತ್ತಾನೆ. ಇದರ ನಿಜವಾದ ಹಕ್ಕುದಾರ ವಿಭೀಷಣ......’ ಎಂದು ಹೇಳಿ ರಾವಣನ ತಮ್ಮ ವಿಭೀಷಣನಿಗೆ ಪಟ್ಟ ಕಟ್ಟಿ ತಾನು ಅಯೋಧ್ಯೆಗೆ ಮರಳುತ್ತಾನೆ.

ಆಸ್ತಿಗಾಗಿ ಹೆತ್ತವರನ್ನೇ ಕೊಲ್ಲುವ, ಒಡಹುಟ್ಟಿದವರು ತಮ್ಮ ತಮ್ಮೊಳಗೆ ಅಸೂಯೆ ಪಡುವ ಇಂದಿನ ಆಧುನಿಕರು ರಾಮಾಯಣದ ಶ್ರೀರಾಮನ ಮಾತಾಪಿತೃ ಪ್ರೇಮವನ್ನೂ, ರಾಮ-ಲಕ್ಷ್ಮಣ-ಭರತರ ಸಹೋದರ ವಾತ್ಸಲ್ಯವನ್ನು, ಅಧಿಕಾರ ತ್ಯಾಗದ ಮನೋಭಾವವನ್ನು ಮನಗಾಣಬೇಕು. ಒಂದೆರಡು ವರ್ಷವಲ್ಲ, ಹದಿನಾಲ್ಕು ವರ್ಷಗಳ ಕಾಲ ಹೀಗೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇಂತಹ ಆದರ್ಶವನ್ನು ನಾವು ಶ್ರೀರಾಮ ಮತ್ತು ಅವನ ಸಹೋದರರಲ್ಲಿ ಮಾತ್ರ ಕಾಣಲು ಸಾಧ್ಯ. ಇದು ನಮ್ಮ ಪುಣ್ಯಭೂಮಿ ಭಾರತದ ಸಂಸ್ಕೃತಿ, ಪರಂಪರೆ.

ಯುದ್ಧವೇ ಇಲ್ಲದ ರಾಮನ ಆಡಳಿತ: ವಾಲ್ಮೀಕಿ ರಾಮಾಯಣದಲ್ಲಿ ವರ್ಣಿತಗೊಂಡಿರುವ ರಾಮನ ಆಡಳಿತದ ವರ್ಣನೆ ನಿಜಕ್ಕೂ ಅದ್ಭುತ- ‘ರಾಮನು ರಾಜ್ಯಭಾರ ಮಾಡಿದ ಅಯೋಧ್ಯೆಯಲ್ಲಿ ಯುದ್ಧದ ಛಾಯೆ ಎಂದೂ ಕಂಡಿರಲಿಲ್ಲ. ಅಂದರೆ ರಾಮನ ಆಡಳಿತದಲ್ಲಿ ಹೊಡೆದಾಟ, ಬಡಿದಾಟ, ರಕ್ತಪಾತಗಳ ಭಯವಿರಲಿಲ್ಲ. ಶಾಂತಿ, ಸಹಬಾಳ್ವೆ, ನ್ಯಾಯಪರಿಪಾಲನೆ, ಅರ್ಥಿಕ ಅಭಿವೃದ್ಧಿಗಳು ಸಮೃದ್ಧವಾಗಿದ್ದವು. ಪ್ರಜೆಗಳು ಸುಖ, ಶಾಂತಿ, ನೆಮ್ಮದಿ, ಸಂತೃಪ್ತಿಗಳಿಂದ ಇದ್ದು ಸದಾ ಪ್ರಸನ್ನವದನರಾಗಿದ್ದರು.

ಶ್ರೀರಾಮನು ಇಡೀ ದೇಶದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾನೆ. ಶ್ರೀರಾಮಮಂದಿರ ನಿರ್ಮಾಣವು ಭಾರತಕ್ಕೆ ಸುವರ್ಣಪರ್ವವನ್ನು ತಂದಿದೆ. ರಾಮಮಂದಿರ ನಿರ್ಮಾಣ ಕೋಟ್ಯಂತರ ಭಾರತೀಯರ ಕನಸಾಗಿತ್ತು. ಅದಕ್ಕಾಗಿ ಹಲವಾರು ರಾಮ ಭಕ್ತರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ. ಅಸಂಖ್ಯಾತ ಭಾರತೀಯರು ಶತ ಶತಮಾನಗಳಿಂದ ಈ ಅಮೃತ ಘಳಿಗೆಗಾಗಿ ಚಾತಕಪಕ್ಷಿಯಂತೆ ನಿರೀಕ್ಷಿಸುತ್ತಿದ್ದರು. ಸತತವಾಗಿ 500 ವರ್ಷಗಳ ಕಾಲ ರಾಮನ ದೇಗುಲ ನಿರ್ಮಾಣದ ಹೋರಾಟದಲ್ಲಿ ಸಾಧು ಸಂತರು, ಸನ್ಯಾಸಿಗಳು, ಧರ್ಮಾಚಾರ್ಯರು, ರಾಜ ಮಹಾರಾಜರು ಮುಂತಾದ ದೇಶದ ಪ್ರತಿ ಪ್ರಜೆಯೂ ಕೈಜೋಡಿಸಿರುವುದು ಸ್ಮರಣೀಯ.

ಶ್ರೀರಾಮನ ಬದುಕೇ ನಮಗೆಲ್ಲ ಆದರ್ಶ: ಜನರನ್ನು ಇಂದು ಕಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ರಾಮಾಯಣದ ಹಲವು ಪಾತ್ರಗಳು ಪರಿಹಾರ ಮತ್ತು ಸಮಾಧಾನವನ್ನು ನೀಡುತ್ತವೆ. ಶ್ರೀರಾಮನ ಬದುಕೇ ನಮಗೆಲ್ಲ ಆದರ್ಶ. ಲಕ್ಷ್ಮಣ, ಭರತ ಶತೃಘ್ನರ ಸೋದರ ಪ್ರೇಮ, ಹನುಮಂತನ ಸ್ವಾಮಿನಿಷ್ಠೆ, ರಾಮನೊಡನೆ ಬಾಳಿದ ವ್ಯಕ್ತಿತ್ವಗಳೆಲ್ಲವೂ ಜನರಲ್ಲಿ ಆದರ್ಶದ ಮೌಲ್ಯಗಳನ್ನೇ ಬಿತ್ತಿವೆ. ಆದ್ದರಿಂದಲೇ ಭಾರತದ ಇತಿಹಾಸದಲ್ಲಿ ವಿಕ್ರಮಾದಿತ್ಯನಿಂದ ಹರ್ಷ-ಪುಲಿಕೇಶಿಯವರೆಗೆ, ಚೋಳರಿಂದ ಚಾಲುಕ್ಯರವರೆಗೆ, ಚಂದ್ರಗುಪ್ತನಿಂದ ಶಿವಾಜಿ-ಕೃಷ್ಣದೇವರಾಯನವರೆಗೆ ಆಡಳಿತ ನಡೆಸಿರುವವರೆಲ್ಲರೂ ಶ್ರೀರಾಮನ ಆದರ್ಶವನ್ನು ಪಾಲಿಸಿದವರೇ ಎಂಬುದನ್ನು ನಮ್ಮ ಪುರಾಣೇತಿಹಾಸಕಾರರು ದಾಖಲಿಸಿರುವುದು. ಇವರೆಲ್ಲರೂ ರಾಮನ ಆದರ್ಶವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದವರೇ ಆಗಿರುವುದು ಸರ್ವವೇದ್ಯ.

ರಾಮಾಯಣದ ಹನುಮಂತನ ಬದುಕಂತೂ ಸೇವಕರಿಗೆ, ಶಿಷ್ಯರಿಗೆ, ಸ್ನೇಹಿತರಿಗೆ ಪಾಠ ಹೇಳುವಂತಿದೆ. ಹನುಮಂತನು ತನ್ನ ಪ್ರಭು ಶ್ರೀರಾಮಚಂದ್ರನಿಗಾಗಿ ಎಲ್ಲವನ್ನೂ ಮಾಡಿದ. ಶ್ರೀರಾಮನ ಸೇಮೆಂದಾಗಿಯೇ ಆತ ವಾನರರಲ್ಲಿ ಮುನ್ನೆಲೆಗೆ ಬಂದ. ಲಂಕಾ ಜಯದಲ್ಲೂ ಆತ ನಿರ್ಣಾಯಕ ಪಾತ್ರವನ್ನು ವಹಿಸಿದ. ಇಷ್ಟೆಲ್ಲಾ ಮಾಡಿದ ಹನುಮಂತ ಯುದ್ಧದಲ್ಲಿ ರಾವಣನು ಮಡಿದ ನಂತರ ಲಂಕೆಯಲ್ಲಿ ಇರಬಹುದಿತ್ತು. ವಾನರ ಪ್ರಮುಖನಾಗಿ ಅಧಿಕಾರ ಹೊಂದಬಹುದಿತ್ತು. ಅಯೋಧ್ಯೆಗೆ ಬಂದ ನಂತರ ಸೇನಾಪ್ರಮುಖನೂ ಆಗಬಹುದಿತ್ತು. ಆದರೆ ಹನುಮಂತನು ಶ್ರೀರಾಮಚಂದ್ರನ ಸೇವೆಯಲ್ಲಿಯೇ ನಿರತನಾಗಿ ತನ್ನ ಬದುಕಿನ ಧನ್ಯತೆ ಕಂಡ.

ಎಲ್ಲೆಲ್ಲೂ, ಎಲ್ಲರಲ್ಲೂ ಶ್ರೀರಾಮ: ತ್ರೇತಾಯುಗದ ಕಾಲದಿಂದ ಇಂದಿನವರೆಗೂ ಜನತೆ ಶ್ರೀರಾಮನ ಆದರ್ಶ ಗುಣಗಳನ್ನು ಪಾಲಿಸಿಕೊಂಡು ಬಂದಿರುವುದರಿಂದಲೇ ಇಂದು ಭಾರತಕ್ಕೆ ವಿಶ್ವದಲ್ಲಿ ವಿಶಿಷ್ಟ ಸ್ಥಾನಮಾನ ಲಭಿಸಿದೆ. ರಾಮನ ಆದರ್ಶಗಳನ್ನು ಕೇವಲ ರಾಜರು, ಆಳುವವರು ಮಾತ್ರ ಪಾಲಿಸಿಕೊಂಡು ಬಂದಿದ್ದರೆ ಇಂದು ರಾಮ ಈ ಪರಿಯಲ್ಲಿ ದೇಶವನ್ನು ಆವರಿಸಿಕೊಳ್ಳುತ್ತಿರಲಿಲ್ಲ. ಸಮಾಜದ ಪ್ರತಿಯೊಬ್ಬರೂ ಶ್ರೀರಾಮಚಂದ್ರ ಪ್ರಭುವಿನ ಆದರ್ಶವನ್ನು ಪಾಲಿಸಿಕೊಂಡು ಬಂದುದು ಮಾತ್ರವಲ್ಲ, ಆತನನ್ನು ತಮ್ಮ ಹೃನ್ಮನದಲ್ಲಿ ಪ್ರತಿಷ್ಠಾಪಿಸಿಕೊಂಡಿರುವ ಕಾರಣದಿಂದಾಗಿ ಇಂದಿಗೂ ಶ್ರೀ ರಾಮ ಎಲ್ಲೆಲ್ಲಿಯೂ, ಎಲ್ಲರಲ್ಲಿಯೂ ನೆಲೆಯಾಗಿದ್ದಾನೆ. ಶ್ರೀರಾಮನು ತನ್ನ ಸಚ್ಚಾರಿತ್ರ್ಯದ ಮೂಲಕ ಇಡೀ ವಿಶ್ವದಲ್ಲಿ ತನ್ನ ಛಾಪು ಮೂಡಿಸಿದ್ದಾನೆ. 

ಹೊಸ ಶಿಕ್ಷಣ ನೀತಿ ವಿರೋಧ ಸರಿಯಲ್ಲ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಹಿಂದೆ ಕಪಿ ಸೈನ್ಯವು ಶ್ರೀಲಂಕಾಗೆ ಸಮುದ್ರ ಮಾರ್ಗವನ್ನು ನಿರ್ಮಿಸುವಾಗ ‘ಜೈ ಶ್ರೀರಾಮ್’ ಎಂದು ರಾಮನಾಮವನ್ನು ಬರೆದ ಮಾತ್ರಕ್ಕೆ ಕಲ್ಲು ತೇಲಲಾರಂಭಿಸಿ ರಾಮಸೇತು ನಿರ್ಮಾಣವಾಯಿತು ಎಂಬುದನ್ನು ಕೇಳಿದ್ದೇವೆ. ರಾಮನಾಮಕ್ಕೆ ಅಂತಹ ಅಪರಿಮಿತ ಶಕ್ತಿ ಇದೆ. ಶ್ರೀರಾಮಮಂದಿರ ನಿರ್ಮಾಣವು ಭಾರತಕ್ಕೆ ಸುವರ್ಣಪರ್ವವನ್ನು ತಂದಿದೆ. ವಿಶ್ವದಾದ್ಯಂತ ಇರುವ ಭಾರತೀಯ ಸಮುದಾಯ ಶ್ರೀರಾಮ ಮಂದಿರ ಲೋಕಾರ್ಪಣೆಯ ಸಂಭ್ರಮದ ಕ್ಷಣವನ್ನು ಎದುರು ನೋಡುತ್ತಿದ್ದಾರೆ. ಜೈ ಶ್ರೀರಾಮ್ ಎಂಬ ಉದ್ಘೋಷದೊಡನೆ ರಾಮನನ್ನು ಸ್ತುತಿಸಿ ಪುಳಕಿತರಾಗುತ್ತಿದ್ದಾರೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸೋಣ. ಶ್ರೀರಾಮನ ದರ್ಶನ ಮಾಡುವುದು ಮಾತ್ರವಲ್ಲ, ಮಕ್ಕಳಿಗೆ ಶ್ರೀರಾಮನ ಮುಖಾಂತರ ಧರ್ಮವನ್ನು, ನೈತಿಕತೆಯನ್ನು, ನೀತಿಯನ್ನು ಹಾಗೂ ಒಟ್ಟು ಬದುಕನ್ನು ಕಟ್ಟಿಕೊಡುವ ಪರಿಯನ್ನು ಹೇಳಿಕೊಡೋಣ. ಶ್ರೀರಾಮನ ಆದರ್ಶವನ್ನು ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯೋಣ. ಜೈ ಶ್ರೀಗುರುದೇವ್.

Follow Us:
Download App:
  • android
  • ios