Asianet Suvarna News Asianet Suvarna News

ಸಿ. ಟಿ. ರವಿ ವಿರುದ್ಧ ಸ್ಪೀಕರ್‌ ಗರಂ

ಮುಸ್ಲಿಂ ಎಂಬ ಪದ ಎತ್ತುತ್ತಿದ್ದಂತೆ ಸಿಟ್ಟಾದ ರಮೇಶ ಕುಮಾರ್‌| ಹಿಂದೂ ದೇವಾಲಯಗಳಿಗೆ ಏಕೆ ಕಡಿಮೆ ಅನುದಾನ ಎಂದು ರವಿ ಪ್ರಶ್ನೆ

speaker ramesh kumar gets angry on CT ravi
Author
Belagavi, First Published Dec 18, 2018, 11:31 AM IST

ಬೆಳಗಾವಿ[ಡಿ.18]: ದೇವಾಲಯಕ್ಕೆ ಹಂಚಿಕೆ ಮಾಡುತ್ತಿರುವ ಅನುದಾನದಲ್ಲಿ ಅನುಸರಿಸುತ್ತಿರುವ ತಾರತಮ್ಯ ಪ್ರಶ್ನಿಸುವ ವೇಳೆ ಅನ್ಯಧರ್ಮದ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಸಿ.ಟಿ. ರವಿಗೆ ಅವಕಾಶ ನೀಡದೆ ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಗರಂ ಆದ ಪ್ರಸಂಗ ನಡೆಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಸೋಮವಾರ ಜೆಡಿಎಸ್‌ ಸದಸ್ಯ ಎಚ್‌.ಕೆ. ಕುಮಾರಸ್ವಾಮಿ ಪ್ರಶ್ನೆಗೆ ಮುಜರಾಯಿ ಸಚಿವ ರಾಜಶೇಖರ್‌ ಪಾಟೀಲ್‌ ಉತ್ತರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿ.ಟಿ. ರವಿ, ಹಿಂದೂ ದೇವಾಲಯಗಳಿಗೆ ಅನುದಾನ ಕಡಿಮೆ ನೀಡಲಾಗುತ್ತಿದೆ. ಜನಸಂಖ್ಯೆಗನುಗುಣವಾಗಿ ನೀಡಬೇಕು ಎಂದು ಹೇಳಿ ಮುಸ್ಲಿಂ ಎಂಬ ಪದ ಬಳಕೆ ಮಾಡುತ್ತಿದ್ದಂತೆ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಏಕಾಏಕಿ ಗರಂ ಆದರು. ಧಾರ್ಮಿಕ ಆಧಾರಿತ ರಾಜಕಾರಣದ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಖಡಕ್‌ ಆಗಿ ನುಡಿದರು. ಧಾರ್ಮಿಕ ವಿಚಾರ ಚರ್ಚೆ ಮಾಡುವುದಾದರೆ ಪ್ರತ್ಯೇಕವಾಗಿ ಕೇಳಿ ಎಂದು ಹೇಳಿದರು. ಈ ವೇಳೆ ಬಿಜೆಪಿ ಸದಸ್ಯರು ರವಿ ಬೆಂಬಲಕ್ಕೆ ನಿಂತರೆ, ಅಡಳಿತ ಪಕ್ಷದ ಸದಸ್ಯರು ಸಭಾಧ್ಯಕ್ಷರ ಬೆಂಬಲಕ್ಕೆ ನಿಂತರು. ಇದು ಉಭಯ ಪಕ್ಷಗಳ ಸದಸ್ಯರ ನಡುವಿನ ಮಾತಿನ ಚಕಮಕಿಗೆ ಕಾರಣವಾಯಿತು

ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಮಧ್ಯಪ್ರವೇಶಿಸಿ, ಕಾಯ್ದೆಯಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌ ದೇವಾಲಯ ಎಂಬ ಭೇದ-ಭಾವ ಇಲ್ಲ. ಆದರೆ, ಅನುದಾನದಲ್ಲಿ ತಾರತಮ್ಯ ಯಾವ ಕಾರಣಕ್ಕಾಗಿ ಮಾಡಲಾಗುತ್ತಿದೆ ಎಂಬುದು ಶಾಸಕರ ಪ್ರಶ್ನೆ ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಅನುದಾನ ಹಂಚಿಕೆ ತಾರತಮ್ಯ ಕುರಿತು ಚರ್ಚಿಸಲು ಯಾವುದೇ ಅಭ್ಯಂತರ ಇಲ್ಲ. ಆದರೆ, ಅದರ ಹೆಸರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು. ದೇವಾಲಯಗಳಿಗೆ ಸಮಾನ ಅನುದಾನ ಹಂಚಿಕೆ ಮಾಡಬೇಕು ಎಂಬ ವಿಚಾರದಲ್ಲಿ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಸಚಿವ ರಾಜಶೇಖರ್‌ ಪಾಟೀಲ್‌, ಕಳೆದ ಮೂರು ವರ್ಷದಲ್ಲಿ ಆರಾಧನಾ ಯೋಜನೆಯಡಿ ಬಜೆಟ್‌ನಲ್ಲಿ 3.97 ಕೋಟಿ ರು. ಅನುದಾನ ನಿಗದಿ ಪಡಿಸಲಾಗಿದೆ. ರಾಜ್ಯದಲ್ಲಿ 34558 ದೇವಾಲಯಗಳಿದ್ದು, ಅವುಗಳನ್ನು ಎ, ಬಿ ಮತ್ತು ಸಿ ಶ್ರೇಣಿ ಎಂದು ವಿಂಗಡಿಸಲಾಗಿದೆ. ಸರ್ಕಾರವು ಒಂದು ಲಕ್ಷ ರು. ಹೊರತು ಪಡಿಸಿ ಇನ್ನುಳಿದ ಹಣವನ್ನು ಜಿಲ್ಲಾಧಿಕಾರಿಗಳಿಗೆ ಸಮಾನ ಕಂತುಗಳಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

Follow Us:
Download App:
  • android
  • ios