ಬೆಂಗಳೂರು[ಡಿ.14]: ‘ರಾಜ್ಯಾದ್ಯಂತ ಕೆರೆಗಳಲ್ಲಿ ಜಾಲಿ ಮರ ತುಂಬಿಕೊಂಡಿದ್ದು, ನಮ್ಮ ತಾಯಿ ಹೊಟ್ಟೆಯಲ್ಲಿ ಮುಳ್ಳು ತುಂಬಿಕೊಂಡಷ್ಟೇ ನೋವಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಕೆರೆಗಳಿಗೆ ನುಗ್ಗಿ ಮರಗಳನ್ನು ತೆರವುಗೊಳಿಸಬೇಕು. ಕಾನೂನು ಉಲ್ಲಂಘನೆ ಸಂಬಂಧ ಯಾವುದೇ ಕೇಸು ಬಂದರೂ ನೋಡಿಕೊಳ್ಳೋಣ’ ಎಂದು ವಿಧಾನಸಭೆ ಅಧ್ಯಕ್ಷ ರಮೇಶ್‌ಕುಮಾರ್‌ ಸಭಾಧ್ಯಕ್ಷರ ಪೀಠದಿಂದಲೇ ಕರೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಪಿ. ರಾಜೀವ್‌ ಅವರ ಪ್ರಶ್ನೆಗೆ ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಉತ್ತರಿಸುವ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಸಣ್ಣ ನೀರಾವರಿ ಸಚಿವರು ಬೃಹತ್‌ ನೀರಾವರಿ ಯೋಜನೆ ಇರುವ ಕಡೆ ಆದ್ಯತೆ ನೀಡಬೇಡಿ. ಬಯಲು ಸೀಮೆ ಜಾಗಕ್ಕೆ ಆದ್ಯತೆ ನೀಡಬೇಕು. ಬಯಲು ಸೀಮೆ ಸೇರಿದಂತೆ ಬಹುತೇಕ ಕಡೆ ಕೆರೆಗಳು ಮುಳ್ಳಿನ ಜಾಲಿ, ನೀಲಗಿರಿ ಮರಗಳಿಂದ ತುಂಬಿಕೊಂಡಿದೆ. ಕೂಡಲೇ ಅವುಗಳನ್ನು ತೆರವುಗೊಳಿಸಲು ಸರ್ಕಾರದ ಪರವಾಗಿ ಆದೇಶ ಹೊರಡಿಸಿ ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿ.ಎಸ್‌. ಪುಟ್ಟರಾಜು, ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟಇಲಾಖೆಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದರು.

ಈ ವೇಳೆ ಕೂಡಲೇ ಸರ್ಕಾರದ ನಿಲುವು ಪ್ರಕಟಿಸಬೇಕು. ಮರಗಳನ್ನು ತೆರವುಗೊಳಿಸಲು ಆದೇಶ ಮಾಡಬೇಕು ಎಂದು ಸಭಾಧ್ಯಕ್ಷರು ಒತ್ತಾಯಿಸಿದರು.

ಕೆರೆ ಎಂದರೆ ತಾಯಿ ಸಮಾನ. ಅಧಿಕಾರಿಗಳು ಕೆರೆ ತುಂಬೆಲ್ಲಾ ದರಿದ್ರ ಮುಳ್ಳಿನ ಜಾಲಿ ತುಂಬಿದ್ದಾರೆ. ನನ್ನ ತಾಯಿಯ ಗರ್ಭಕ್ಕೆ ಮುಳ್ಳು ಬಿದ್ದ ಹಾಗೆ ನೋವಾಗುತ್ತಿದೆ. ಒಂದೂವರೆ ವರ್ಷ ಕೋಲಾರ ಉಸ್ತುವಾರಿ ಸಚಿವನಾಗಿ ಕೆರೆಗಳಲ್ಲಿ ಜಾಲಿ ತೆಗೆಸಲು ನನಗೆ ಸಾಧ್ಯವಾಗಿಲ್ಲ. ಅರಣ್ಯ ಅಧಿಕಾರಿಗಳು ಜನರಿಗೆ ತೊಂದರೆ ನೀಡಲೆಂದೇ ಇದ್ದಾರೆ. ಹೀಗಾಗಿ ಗೌರವಯುತ ಸ್ಥಾನದಲ್ಲಿ ಕುಳಿತೇ ಹೇಳುತ್ತಿದ್ದೇನೆ. ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ಕೆರೆಗಳಿಗೆ ನುಗ್ಗಿ ಮರಗಳನ್ನು ತೆರವುಗೊಳಿಸಿ. ಯಾವುದೇ ಕೇಸುಗಳು ಬಂದರೂ ನೋಡಿಕೊಳ್ಳೋಣ ಎಂದು ಕರೆ ನೀಡಿದರು.

1200 ಕೋಟಿ ಮಾತ್ರ ವೆಚ್ಚ:

ಇದಕ್ಕೂ ಮೊದಲು ಬಿಜೆಪಿ ಸದಸ್ಯ ಪಿ. ರಾಜೀವ್‌, ಸಣ್ಣ ನೀರಾವರಿ ಇಲಾಖೆಗೆ ಒದಗಿಸಿರುವ 2,099 ಕೋಟಿ ರು.ಗಳಲ್ಲಿ 1200 ಕೋಟಿ ರು. ಮಾತ್ರ ವೆಚ್ಚ ಮಾಡಲಾಗಿದೆ ಎಂದು ಟೀಕಿಸಿದರು. ಇದಕ್ಕೆ ಸಚಿವ ಸಿ.ಎಸ್‌. ಪುಟ್ಟರಾಜು, ಉಳಿದ ಎಲ್ಲಾ ಮೊತ್ತವನ್ನು ಇದೇ ಆರ್ಥಿಕ ಸಾಲಿನಲ್ಲಿ ವೆಚ್ಚ ಮಾಡುತ್ತೇವೆ. ಬಾಕಿ ಯೋಜನೆಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ನೀಡುವಂತೆ ಎಲ್ಲಾ ಕ್ಷೇತ್ರಗಳ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದರು.