ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಶಾಸಕರಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದಾರೆ. ಕಳೆದ ಅಧಿವೇಶನದಲ್ಲಿ ಶಾಸಕರು ಮಾತನಾಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರತ್ಯೇಕ ರಾಜ್ಯದ ಬೇಡಿಕೆಗೆ ತಮ್ಮ ಸಹಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಾವೇರಿ (ನ.19) ಇದೇ ಡಿ.8ರಿಂದ ಡಿ.19ರ ವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಶಾಸಕರಿಗೆ ಫೋನ್‌ ಮಾಡಿ ಸೂಚನೆ ನೀಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಉತ್ತರ ಕರ್ನಾಟಕದ ಬಗ್ಗೆ ಶಾಸಕರು ಏಕೆ ಮಾತನಾಡೋಲ್ಲ:

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದನದಲ್ಲಿ ಪ್ರಶ್ನೋತ್ತರ ಮುಗಿದ ಬಳಿಕ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಕಳೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಆ ಭಾಗದ ಶಾಸಕರು ಮಾತನಾಡಲಿಲ್ಲ. ಇದನ್ನು ಬರೆದಿಟ್ಟಿದ್ದೇನೆ. ಫೋನ್‌ ಮಾಡಿ ಎಲ್ಲರಿಗೂ ಇದನ್ನು ಹೇಳುತ್ತಿದ್ದೇನೆ ಎಂದರು.

ಇದೇ ವೇಳೆ, ಉ.ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವುದರಿಂದ ಸಮಸ್ಯೆ ಬಗೆಹರಿಯಲ್ಲ. ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿಲ್ಲ ಎಂದೂ ಹೇಳಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವುದಲ್ಲಿ ಯಾವ ಪುರುಷಾರ್ಥವೂ ಇಲ್ಲ:

ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಲಿಕ್ಕೆ ಹೋರಾಟ ಮಾಡಬೇಕೆ ಹೊರತು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವುದರಲ್ಲಿ ಯಾವ ಪುರುಷಾರ್ಥವಿಲ್ಲ ಎಂದು ಅವರು ಹೇಳಿದರು.

ಅಧಿವೇಶನಕ್ಕೆ ಗೈರಾಗುವ ಶಾಸಕರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇನು ಮಾತನಾಡಲಿಕ್ಕೆ ಅಧಿಕಾರವಿಲ್ಲ. ಅಧಿವೇಶನಕ್ಕೆ ಬನ್ನಿ, ಭಾಗವಹಿಸಿ ಎಂದು ಹೇಳಬಹುದೇ ವಿನಃ ಶಿಕ್ಷೆಯಂತೂ ಕೊಡಲಿಕ್ಕೆ ಆಗುವುದಿಲ್ಲ ಎಂದರು.