Asianet Suvarna News Asianet Suvarna News

ಕೇರಳ ಬೆನ್ನಲ್ಲೇ ಕರ್ನಾಟಕಕ್ಕೂ ಮುಂಗಾರು ಪ್ರವೇಶ, ಜೂನ್ 5ರಿಂದ ಮಳೆಯಬ್ಬರ: ಐಎಂಡಿ

* ಶೀಘ್ರದಲ್ಲೇ ಕರ್ನಾಟಕಕ್ಕೆ ಮುಂಗಾರು ಪ್ರವೇಶ

* ಜೂನ್ 5ರಿಂದ ರಾಜ್ಯದಲ್ಲಿ ಮಳೆಯಬ್ಬರ

* ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ

 

Southwest monsoon over Kerala in next 2 3 days says IMD pod
Author
Bangalore, First Published May 28, 2022, 3:38 PM IST

ಬೆಂಗಳೂರು(ಮೇ.28): ಕರ್ನಾಟಕದಲ್ಲಿ ನಾನಾ ಕಾರಣಗಳಿಂದ ವಿಳಂಬಗೊಂಡಿದ್ದ ಬಹುನಿರೀಕ್ಷಿತ ಮುಂಗಾರು ಮಳೆ ಜೂನ್‌ 5ಕ್ಕೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದೇ ವೇಳೆ ಇನ್ನು ಕೇವಲ 2 ಅಥವಾ 3 ದಿನಗಳಲ್ಲಿ ನೆರೆ ರಾಜ್ಯ ಕೇರಳಕ್ಕೂ ಮುಂಗಾರು ಪ್ರವೇಶವಾಗಲಿದೆ ಎನ್ನಲಾಗಿದೆ. 

ಹೌದು ಆಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಈ ಮೊದಲು ಮೇ 27 ರಂದು ಮಾನ್ಸೂನ್‌ ಕೇರಳ ಪ್ರವೇಶಿಸಬಹುದು ಎಂದು ಐಎಂಡಿ ಅಂದಾಜಿಸಿತ್ತು. ಆದರೆ ನಂತರ ವಿಳಂಬವಾಗಿದೆ. ಈಗ ಉಪಗ್ರಹ ಆಧಾರಿತ ಚಿತ್ರಗಳ ಪ್ರಕಾರ ಕೇರಳದ ಕರಾವಳಿ ಭಾಗದಲ್ಲಿ ದಟ್ಟವಾದ ಮೋಡಗಳು ಕಂಡುಬಂದಿದ್ದು, ಮಳೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಪ್ರಸ್ತುತ ಹವಾಮಾನದ ಅನ್ವಯ ಮೇ 30 ರಿಂದ ಜೂ.2 ರವರೆಗೆ ಮುಂಗಾರು ಮಾರುತಗಳ ಪ್ರವೇಶವಾಗಲಿದೆ ಎಂದು ಐಎಂಡಿ ಅಂದಾಜಿಸಿದೆ. ಹೀಗಿರುವಾಗ ಕೇರಳದ ಬೆನ್ನಲ್ಲೇ ಕರ್ನಾಟಕದಲ್ಲೂ ಮಳೆಯಬ್ಬರ ಆರಂಭವಾಗುವ ಸಾಧ್ಯತೆ ಇದೆ. 

ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳು ಮತ್ತು ಇಡೀ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ಪಕ್ಕದ ಪ್ರದೇಶಗಳು ಹಾಗೂ ಕೊಮೊರಿನ್​ನ ಕೆಲವೆಡೆ ನೈಋತ್ಯ ಮುಂಗಾರು ಮತ್ತಷ್ಟು ಪ್ರವೇಶ ಪಡೆಯುವ ನಿರೀಕ್ಷೆ ಇದೆ. ಅದೇ ರೀತಿಯಾಗಿ ಈ ವಾರದಲ್ಲಿ ಕೇರಳದಲ್ಲಿ ಮಾನ್ಸೂನ್ ಆರಂಭವಾಗಲು ಪೂರಕವಾದ ವಾತಾವರಣವಿದೆ ಎಂದು ಹೇಳಿದೆ.

ಅಸಾನಿ ಚಂಡಮಾರುತದ ಪ್ರಭಾವದಿಂದಾಗಿ ಈ ಬಾರಿ ವಾಡಿಕೆಗಿಂತ ಮೊದಲೇ ಅಂದರೆ ಮೇ 16ಕ್ಕೆ ಅಂಡಮಾನ್ ಅನ್ನು ಮುಂಗಾರು ತಲುಪಿತ್ತು. ಆದರೆ, ಆರು ದಿನಗಳ ವಿರಾಮದ ಬಳಿಕ ಈಗ ಶ್ರೀಲಂಕಾದಿಂದ ಕೇರಳದ ಕಡೆಗೆ ಚಲಿಸಲು ಪ್ರಾರಂಭಿಸಿದೆ. ಕೇರಳಕ್ಕೆ ಆಗಮಿಸುವುದು ಮಾತ್ರವೇ ಬಾಕಿ ಇದೆ ಎನ್ನಲಾಗಿದೆ. ಕೇರಳ, ಲಕ್ಷದ್ವೀಪದಲ್ಲಿ ಮುಂಗಾರು ಮಾರುತದ ಪ್ರವೇಶದೊಂದಿಗೆ ಗುಡುಗು ಮಿಂಚಿನ ಸಹಿತ ಭಾರೀ ಮಳೆಯಾಗಲಿದ್ದು, ಮುಂದಿನ 5 ದಿನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಮಾನ್ಸೂನ್ ಜೂನ್ 1 ರಂದು ಕೇರಳ ರಾಜ್ಯವನ್ನು ಪ್ರವೇಸಿಸಿದರೆ, ಜೂನ್ 5 ರಂದು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕೆಲ ಭಾಗಗಳನ್ನು ಮುಟ್ಟಲಿದೆ. ಜೂನ್ 10 ರ ವೇಳೆಗೆ ಅದು ಇಡೀ ರಾಜ್ಯವನ್ನು ಆವರಿಸುತ್ತದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios