ವಿದ್ಯುತ್ ಸಂಪರ್ಕ ಕಿರಿಕಿರಿಗೆ ಶೀಘ್ರ ಮುಕ್ತಿ: ಸಿಎಂ ಬೊಮ್ಮಾಯಿ ಭರವಸೆ
ನೀರಿನ ಹಾಗೆಯೇ ವಿದ್ಯುತ್ ಸಹ ಜನರ ಹಕ್ಕು. ಬಡವರು ಮನೆ ಕಟ್ಟಿದರೆ ಬೇಗ ವಿದ್ಯುತ್ ಸಂಪರ್ಕ ಸಿಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣ
ಬೆಂಗಳೂರು(ಜು.21): ಬಡವರು ಮನೆ ನಿರ್ಮಿಸಿದರೆ ವಿದ್ಯುತ್ ಸಂಪರ್ಕ ಬೇಗ ಸಿಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಅರ್ಜಿ ಹಾಕಿದ ಎಲ್ಲರಿಗೂ ಕಿರಿಕಿರಿ ಉಂಟು ಮಾಡದೆ ವಿದ್ಯುತ್ ಸಂಪರ್ಕ ನೀಡಲು ಶೀಘ್ರವೇ ನಿಯಮಗಳನ್ನು ಸರಳೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನಿಡಿದರು.
ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ವಿದ್ಯುತ್ ನಿಗಮದ 53ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀರಿನ ಹಾಗೆಯೇ ವಿದ್ಯುತ್ ಸಹ ಜನರ ಹಕ್ಕು. ಬಡವರು ಮನೆ ಕಟ್ಟಿದರೆ ಬೇಗ ವಿದ್ಯುತ್ ಸಂಪರ್ಕ ಸಿಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಿವಾರಿಸಲು, ರಾಜ್ಯದ ಯಾವುದೇ ಭಾಗದಲ್ಲಿರುವ ವ್ಯಕ್ತಿ ಮನೆ ನಿರ್ಮಿಸಿಕೊಂಡು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದರೆ ತಕ್ಷಣ ಸಂಪರ್ಕ ಕಲ್ಪಿಸಲು ಆದೇಶ ಹೊರಡಿಸಲಾಗುವುದು ಎಂದು ಸ್ಪಷ್ಪಡಿಸಿದರು.
5 ಲಕ್ಷವರೆಗಿನ ವಿದ್ಯುತ್ ಗುತ್ತಿಗೆ ಸ್ಥಳೀಯರಿಗೆ ಮೀಸಲು: ಸಚಿವ ಸುನಿಲ್
ವಿದ್ಯುತ್ ಸ್ವಾವಲಂಬನೆ
2008ರಿಂದ ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ 75 ಯುನಿಟ್‌ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಶರಾವತಿಯಲ್ಲಿ ಪವರ್ ಸ್ಟೋರೇಜ್ ಯೋಜನೆ ಆರಂಭಿಸಲು ಅನುಮತಿ ನೀಡಲಾಗಿದೆ. ಖಾಸಗಿಯವರೂ ಈ ಯೋಜನೆ ರೂಪಿಸಲು ಹೊಸ ನೀತಿ ಜಾರಿಗೆ ತರಲಾಗುವುದು. ಸೌರ ವಿದ್ಯುತ್ ಉತ್ಪಾದನೆಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದ ಸ್ವಾವಲಂಬಿಗಳಾಗಿದ್ದೇವೆ ಎಂದು ಬಣ್ಣಿಸಿದರು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿಕುಮಾರ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಶ್ರೀಕರ್, ಕೆಪಿಟಿಸಿಎಲ್ ಅಧ್ಯಕ್ಷೆ ಡಾ. ಮಂಜುಳಾ ಉಪಸ್ಥಿತರಿದ್ದರು.